ಜನರೇಟರ್ ಇದ್ದೂ ಪ್ರಯೋಜನವಿಲ್ಲ: ಬೆಳ್ತಂಗಡಿ ತಾಲೂಕು ಕಚೇರಿಯಲ್ಲಿ ವಿದ್ಯುತ್ ಸಮಸ್ಯೆಯಿಂದ ಸಾರ್ವಜನಿಕರಿಗೆ ತೊಂದರೆ

 

 

 

ಬೆಳ್ತಂಗಡಿ: ಬೆಳ್ತಂಗಡಿ ತಾಲೂಕು ಕಚೇರಿಗೆ ಪ್ರತಿದಿನ ನೂರಾರು ಮಂದಿ ತಮ್ಮ ವಿವಿಧ ಸರ್ಕಾರಿ ಕೆಲಸಗಳಿಗಾಗಿ ಆಗಮಿಸುತ್ತಾರೆ. ಆದರೆ ವಿದ್ಯುತ್ ಪೂರೈಕೆ ಕಡಿತಗೊಂಡ ಸಂದರ್ಭದಲ್ಲಿ ಪರ್ಯಾಯ ವ್ಯವಸ್ಥೆ ಇಲ್ಲದ ಕಾರಣ ಸಾರ್ವಜನಿಕರು ಗಂಟೆಗಟ್ಟಲೆ ಕಾದು, ಕೊನೆಗೆ ಕೆಲಸವಾಗದೆ ವಾಪಸ್ ತೆರಳುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂಬ ಆರೋಪ ಕೇಳಿಬಂದಿದೆ.

ಬೆಳ್ತಂಗಡಿ ತಾಲೂಕು ಕಚೇರಿಯ ನೂತನ ಕಟ್ಟಡವನ್ನು 2018ರಲ್ಲಿ ಉದ್ಘಾಟಿಸಲಾಗಿದ್ದು, ಕಟ್ಟಡ ನಿರ್ಮಾಣವಾಗಿ ಕೇವಲ ಎಂಟು ವರ್ಷಗಳಷ್ಟೇ ಕಳೆದಿವೆ. ಉದ್ಘಾಟನೆಯ ಸಂದರ್ಭದಲ್ಲೇ ಎರಡು ಜನರೇಟರ್‌ಗಳನ್ನು ಅಳವಡಿಸಲಾಗಿತ್ತು. ಆದರೆ ಇದೀಗ ಎರಡೂ ಜನರೇಟರ್‌ಗಳು ಕಾರ್ಯನಿರ್ವಹಿಸದೆ ಕಚೇರಿ ಆವರಣದಲ್ಲಿ ನಿಷ್ಪ್ರಯೋಜಕವಾಗಿ ಬಿದ್ದಿವೆ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ.

ವಿದ್ಯುತ್ ಕೈಕೊಟ್ಟ ಕೂಡಲೇ ಕಚೇರಿಯಲ್ಲಿರುವ ಕಂಪ್ಯೂಟರ್‌ಗಳು ಸೇರಿದಂತೆ ವಿದ್ಯುತ್ ಆಧಾರಿತ ವ್ಯವಸ್ಥೆಗಳು ಸ್ಥಗಿತಗೊಳ್ಳುತ್ತವೆ. ಪರಿಣಾಮವಾಗಿ ಸಿಬ್ಬಂದಿಗೂ ಕೆಲಸ ನಿರ್ವಹಿಸಲು ಸಾಧ್ಯವಾಗದೆ, ತಮ್ಮ ಅಗತ್ಯ ಕೆಲಸಗಳಿಗಾಗಿ ಬಂದ ಸಾರ್ವಜನಿಕರು ಕಚೇರಿಯಲ್ಲೇ ಕಾಯಬೇಕಾದ ಅನಿವಾರ್ಯತೆ ಎದುರಾಗುತ್ತಿದೆ. ಈ ವೇಳೆ ಸಾರ್ವಜನಿಕರ ಆಕ್ರೋಶಕ್ಕೆ ಸಿಬ್ಬಂದಿ ಗುರಿಯಾಗುವಂತಾಗಿದೆ.

ಕಚೇರಿ ನಿರ್ವಹಣೆ ಮತ್ತು ವಿವಿಧ ವೆಚ್ಚಗಳಿಗಾಗಿ ಸರ್ಕಾರದಿಂದ ಲಕ್ಷಾಂತರ ರೂಪಾಯಿ ಅನುದಾನ ಬಿಡುಗಡೆಯಾಗುತ್ತಿದ್ದರೂ, ಮೂಲಭೂತ ಅಗತ್ಯವಾಗಿರುವ ಪರ್ಯಾಯ ವಿದ್ಯುತ್ ವ್ಯವಸ್ಥೆ ಸಮರ್ಪಕವಾಗಿ ಕಾರ್ಯನಿರ್ವಹಿಸದಿರುವುದು ಪ್ರಶ್ನೆಗೆ ಕಾರಣವಾಗಿದೆ.

ಕಳೆದ ಐದಾರು ವರ್ಷಗಳಿಂದ ಜನರೇಟರ್‌ಗಳು ತಾಲೂಕು ಕಚೇರಿಯ ಬದಿಯಲ್ಲಿ ಗಾಳಿ, ಮಳೆ, ಬಿಸಿಲಿಗೆ ಮೈಯೊಡ್ಡಿ ನಿಂತಿದ್ದರೂ ಅವುಗಳನ್ನು ದುರಸ್ತಿ ಮಾಡಿ ಬಳಕೆಗೆ ತರುವ ಬಗ್ಗೆ ಯಾವುದೇ ಗಂಭೀರ ಕ್ರಮ ಕೈಗೊಳ್ಳಲಾಗಿಲ್ಲ ಎಂದು ಸಾರ್ವಜನಿಕರು ದೂರಿದ್ದಾರೆ. ತಾಲೂಕು ಕಚೇರಿಗೆ ಆಗಮಿಸುವ ಜನರ ಸಮಸ್ಯೆಗಳನ್ನು ಗಮನಿಸಿ ಹಿಂದಿನ ಹಾಗೂ ಹಾಲಿ ತಹಶೀಲ್ದಾರರು ಈ ಬಗ್ಗೆ ಕ್ರಮ ಕೈಗೊಳ್ಳಬೇಕಿತ್ತು. ಆದರೆ ಜನರೇಟರ್‌ಗಳ ಸ್ಥಿತಿಗತಿ ಬಗ್ಗೆ ಅಧಿಕಾರಿಗಳು ನಿರ್ಲಕ್ಷ್ಯ ವಹಿಸಿದ್ದಾರೆ ಎಂಬ ಆರೋಪವೂ ಕೇಳಿಬರುತ್ತಿದೆ.

ಇನ್ನಾದರೂ ಅಧಿಕಾರಿಗಳು ಎರಡೂ ಜನರೇಟರ್‌ಗಳನ್ನು ಪರಿಶೀಲಿಸಿ ಅಗತ್ಯ ದುರಸ್ತಿ ಕಾರ್ಯ ಕೈಗೊಂಡು ಸಾರ್ವಜನಿಕರ ಹಾಗೂ ಕಚೇರಿ ಸಿಬ್ಬಂದಿಯ ಬಳಕೆಗೆ ಲಭ್ಯವಾಗುವಂತೆ ಮಾಡಬೇಕು. ಇಲ್ಲವಾದರೆ ಲಕ್ಷಾಂತರ ರೂಪಾಯಿ ಮೌಲ್ಯದ ಜನರೇಟರ್‌ಗಳು ತುಕ್ಕು ಹಿಡಿದು ಕೊನೆಗೆ ಗುಜರಿ ಅಂಗಡಿ ಸೇರುವ ಪರಿಸ್ಥಿತಿ ನಿರ್ಮಾಣವಾಗಬಹುದು ಎಂದು ಸಾರ್ವಜನಿಕರು ಆತಂಕ ವ್ಯಕ್ತಪಡಿಸಿದ್ದಾರೆ.

ವಿದ್ಯುತ್ ಪೂರೈಕೆ ಕಡಿತದ ಸಂದರ್ಭದಲ್ಲೂ ಸರ್ಕಾರಿ ಸೇವೆಗಳು ನಿರಂತರವಾಗಿ ಲಭ್ಯವಾಗುವಂತೆ ತಾಲೂಕು ಆಡಳಿತ ತಕ್ಷಣವೇ ಪರ್ಯಾಯ ವಿದ್ಯುತ್ ವ್ಯವಸ್ಥೆ ಕಲ್ಪಿಸಬೇಕು ಎಂಬುದು ಸಾರ್ವಜನಿಕರ ಒತ್ತಾಯವಾಗಿದೆ.

error: Content is protected !!