ಪದ್ಮುಂಜದಲ್ಲಿ ಶಾಸಕ ಹರೀಶ್ ಪೂಂಜಾರಿಗೆ ಅದ್ದೂರಿ ಗೌರವಾಭಿನಂದನೆ 40ಕ್ಕೂ ಹೆಚ್ಚು ಸಂಘ-ಸಂಸ್ಥೆಗಳಿಂದ ಸನ್ಮಾನ; ‘ಉತ್ತಮ ಶಾಸಕ ಪ್ರಶಸ್ತಿ’ ಗ್ರಾಮಸ್ಥರಿಗೆ ಅರ್ಪಣೆ

 

ಪದ್ಮುಂಜ, : ಕರ್ನಾಟಕ ಟಿವಿ ಕೊಡಮಾಡುವ ಕರಾವಳಿ ಹಾಗೂ ಮಧ್ಯ ಕರ್ನಾಟಕ ವಿಭಾಗದ ‘ಉತ್ತಮ ಶಾಸಕ ಪ್ರಶಸ್ತಿ–2026’ಕ್ಕೆ ಪುರಸ್ಕೃತರಾದ ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ ಅವರಿಗೆ ಬಂದಾರು, ಮೊಗ್ರು ಹಾಗೂ ಕಣಿಯೂರು ಗ್ರಾಮದ ಅಭಿನಂದನಾ ಸಮಿತಿ ವತಿಯಿಂದ ಪದ್ಮುಂಜದಲ್ಲಿ ಅದ್ದೂರಿ ಗೌರವಾಭಿನಂದನಾ ಕಾರ್ಯಕ್ರಮ ನಡೆಯಿತು.

ಪದ್ಮುಂಜ ಸಿ.ಎ. ಬ್ಯಾಂಕ್ ರೈತ ಸಭಾಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ 40ಕ್ಕೂ ಹೆಚ್ಚು ಸಂಘ-ಸಂಸ್ಥೆಗಳ ವತಿಯಿಂದ ಶಾಸಕ ಹರೀಶ್ ಪೂಂಜಾ ಅವರನ್ನು ಸನ್ಮಾನಿಸಲಾಯಿತು. ಸಾವಿರಕ್ಕೂ ಅಧಿಕ ಸಾರ್ವಜನಿಕರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ಸನ್ಮಾನ ಸ್ವೀಕರಿಸಿ ಮಾತನಾಡಿದ ಶಾಸಕ ಹರೀಶ್ ಪೂಂಜಾ, “ನನಗೆ ನೀಡಿದ ಪ್ರೀತಿಯ ಸನ್ಮಾನವನ್ನು ಅತ್ಯಂತ ಗೌರವದಿಂದ ಸ್ವೀಕರಿಸುತ್ತೇನೆ. ಆದರೆ ಈ ಸನ್ಮಾನ ನನಗಲ್ಲ; ಬಂದಾರು, ಮೊಗ್ರು ಹಾಗೂ ಕಣಿಯೂರು ಗ್ರಾಮದ ಜನರಿಗೆ ಅರ್ಪಿತವಾಗಿದೆ” ಎಂದರು.

ಶಾಸಕರಾದ ಬಳಿಕ ತಾಲೂಕಿನ ಸರ್ವತೋಮುಖ ಅಭಿವೃದ್ಧಿಗಾಗಿ ಶ್ರಮಿಸುತ್ತಿದ್ದು, ತಾಲೂಕಿನಲ್ಲಿ 100 ವೆಂಟೆಡ್ ಡ್ಯಾಂಗಳನ್ನು ನಿರ್ಮಿಸುವ ಗುರಿ ಹೊಂದಲಾಗಿತ್ತು. ಈಗಾಗಲೇ ಸುಮಾರು 84 ವೆಂಟೆಡ್ ಡ್ಯಾಂಗಳ ನಿರ್ಮಾಣವಾಗಿದೆ ಎಂದು ಅವರು ತಿಳಿಸಿದರು. ಪ್ರಸ್ತುತ ರಾಜ್ಯ ಸರ್ಕಾರದಿಂದ ಸಾಕಷ್ಟು ಅನುದಾನಗಳು ಲಭ್ಯವಾಗದಿದ್ದರೂ ತಾಲೂಕಿನ ಜನರಿಗಾಗಿ ಅಭಿವೃದ್ಧಿ ಕಾರ್ಯಗಳನ್ನು ಮುಂದುವರಿಸುತ್ತಿದ್ದು, ಮುಂದಿನ ದಿನಗಳಲ್ಲೂ ಪ್ರಾಮಾಣಿಕವಾಗಿ ಪ್ರಯತ್ನಿಸುವುದಾಗಿ ಹೇಳಿದರು.

ಅಭಿನಂದನಾ ಭಾಷಣ ಮಾಡಿದ ಸಾವಯವ ಕೃಷಿಕ, ಮೊಗ್ರು–ಕಡಮ್ಮಾಜೆ ಫಾರ್ಮ್ಸ್‌ನ ದೇವಿಪ್ರಸಾದ್ ಕೆ. ಗೌಡ, ಶಾಸಕ ಹರೀಶ್ ಪೂಂಜಾ ಅವರು ‘ನವ ಬೆಳ್ತಂಗಡಿ ನಿರ್ಮಾಣದ ಶಿಲ್ಪಿ’ ಎಂದು ಬಣ್ಣಿಸಿದರು. ಅಭಿವೃದ್ಧಿ ಕಾರ್ಯಗಳಿಂದಾಗಿ ಇಂದು ಇಡೀ ದೇಶವೇ ಬೆಳ್ತಂಗಡಿಯತ್ತ ನೋಡುವಂತಾಗಿದೆ ಎಂದು ಹೇಳಿದರು.

ಗ್ರಾಮೀಣ ಪ್ರದೇಶಗಳ ಕುರಿತು ಹಿಂದೆ ಇದ್ದ ಹಿಂಜರಿಕೆಯ ಮನೋಭಾವ ಬದಲಾಗಿದ್ದು, ಇದೀಗ ಬೇರೆ ಊರುಗಳಲ್ಲಿ ಮದುವೆ ಮಾತುಕತೆಗೆ ತೆರಳಿದಾಗ ಗೌರವದಿಂದ ಕಾಣುವಂತಾಗಿದೆ. ಇದಕ್ಕೆ ಶಾಸಕ ಹರೀಶ್ ಪೂಂಜಾ ಅವರ ಅಭಿವೃದ್ಧಿ ಕಾರ್ಯಗಳೂ ಪ್ರಮುಖ ಕಾರಣ ಎಂದು ಅವರು ಅಭಿಪ್ರಾಯಪಟ್ಟರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮಾರುತಿಪುರ ರೈತಬಂಧು ಶಿವಶಂಕರ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಮನೋಹರ ಗೌಡ ಅಂತರ ಮುಗೇರಡ್ಕ, ಚಂದ್ರಹಾಸ ಗೌಡ ದೇವಸ್ಯಗುತ್ತು ಮುಗೇರಡ್ಕ, ಮಾವಿನಕಟ್ಟೆ ಚರ್ಚ್ ಧರ್ಮಗುರು ಫಾ. ಕಾಶ್ಮೀರ್ ಡಿ. ಸೋಜಾ, ಸುದರ್ಶನ ಹೆಗ್ಡೆ ಕಣಿಯೂರು ಗುತ್ತು, ಪದ್ಮನಾಭ ಶಿಲ್ಪಿ ಪಿಲಿಗೂಡು, ಚಿದಾನಂದ ರಾವ್ ಕೊಲ್ಲಾಜೆ, ಬಾಬು ನಾಯ್ಕ ಮೈಪಾಜೆ ಕಣಿಯೂರು, ಕೇಶವ ಸಾಲ್ಯಾನ್ ಅಡೆಂಜ, ಪತ್ರಕರ್ತ ಅಚ್ಚುಶ್ರೀ ಬಾಂಗೆರು, ಜನಾರ್ದನ ಪೂಜಾರಿ ಕಡ್ತಿಲ ಮೊಗ್ರು, ಆನಂದ ಗೌಡ ಮುಂಡೂರು ಮೈರೋಳ್ತಡ್ಕ, ಧರ್ನಪ್ಪ ಗೌಡ ಬಾನಡ್ಕ ಮೈರೋಳ್ತಡ್ಕ, ಧರ್ನಪ್ಪ ಗೌಡ ಕೋಡಿಯೇಲು ಹಾಗೂ ನಿವೃತ್ತ ಸಿಎ ಬ್ಯಾಂಕ್ ಮ್ಯಾನೇಜರ್ ತಿಮ್ಮಯ್ಯ ಗೌಡ ಪದ್ಮುಂಜ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.

ಕಾರ್ಯಕ್ರಮದ ಆರಂಭದಲ್ಲಿ ಕು. ಪೂರ್ವಿಕ ಅವರು ವಂದೇ ಮಾತರಂ ಹಾಡಿದರು. ಮಾಜಿ ತಾಲೂಕು ಪಂಚಾಯತ್ ಸದಸ್ಯ ಮಹಾಬಲ ಗೌಡ ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು. ಮಾಧವ ಗೌಡ ಕಾರ್ಯಕ್ರಮ ನಿರೂಪಿಸಿ ಧನ್ಯವಾದ ಅರ್ಪಿಸಿದರು.

ರಕ್ಷಿತ್ ಪಣೆಕ್ಕರ, ಬಾಲಕೃಷ್ಣ ಗೌಡ ಮುಗೇರಡ್ಕ, ಯತೀಶ್ ಶೆಟ್ಟಿ ಪಣೆಕ್ಕರ, ಗಿರೀಶ್ ಗೌಡ ಬಿ.ಕೆ. ಬಂದಾರು ಸೇರಿದಂತೆ ಸಮಿತಿ ಪದಾಧಿಕಾರಿಗಳು ಹಾಗೂ ಹಲವು ಮಂದಿ ಕಾರ್ಯಕ್ರಮದ ಆಯೋಜನೆಗೆ ಸಹಕರಿಸಿದರು.

error: Content is protected !!