SIR-2026: ದಕ್ಷಿಣ ಕನ್ನಡದಲ್ಲಿ 1.50 ಲಕ್ಷ ಮತದಾರರಿಗೆ ನೋಟಿಸ್; ದಾಖಲೆ ಸಲ್ಲಿಸಿ ಲೋಪ ಸರಿಪಡಿಸಿಕೊಳ್ಳಲು ಅವಕಾಶ

 

 

ಮಂಗಳೂರು: ಭಾರತ ಚುನಾವಣಾ ಆಯೋಗದ ನಿರ್ದೇಶನದಂತೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೈಗೊಳ್ಳಲಾಗಿರುವ ವಿಶೇಷ ಸಮಗ್ರ ಪರಿಷ್ಕರಣೆ (SIR-2026) ಪ್ರಕ್ರಿಯೆಯ ಕರಡು ಮತದಾರರ ಪಟ್ಟಿ ಪ್ರಕಟಗೊಂಡಿದ್ದು, ಕರಡು ಪಟ್ಟಿಯಲ್ಲಿರುವ 1,50,153 ಮತದಾರರ ವಿವರಗಳಲ್ಲಿ ಹೊಂದಾಣಿಕೆಯಾಗದ (No Mapping) ಅಥವಾ ತಾರ್ಕಿಕ ದೋಷಗಳು (Logical Discrepancies) ಕಂಡುಬಂದಿರುವ ಹಿನ್ನೆಲೆಯಲ್ಲಿ ಅವರಿಗೆ ನೋಟಿಸ್ ಜಾರಿಗೊಳಿಸಲಾಗುತ್ತಿದೆ.

ಪಡೀಲ್‌ನಲ್ಲಿರುವ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಸೋಮವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಜಿಲ್ಲಾಧಿಕಾರಿ ಹೆಚ್.ವಿ. ದರ್ಶನ್ ಈ ಮಾಹಿತಿ ನೀಡಿದರು.

ನೋಟಿಸ್ ನೀಡಿರುವುದು ಮತದಾರರ ಹೆಸರನ್ನು ಪಟ್ಟಿಯಿಂದ ಕೈಬಿಡುವ ಕ್ರಮವಲ್ಲ. ಬದಲಿಗೆ ಅಗತ್ಯ ದಾಖಲೆಗಳನ್ನು ಸಲ್ಲಿಸಿ ಲೋಪದೋಷಗಳನ್ನು ಸರಿಪಡಿಸಿಕೊಳ್ಳಲು ನೀಡಲಾಗಿರುವ ಕಾನೂನುಬದ್ಧ ಅವಕಾಶವಾಗಿದೆ. ಆದ್ದರಿಂದ ನೋಟಿಸ್ ಬಂದಿರುವುದಕ್ಕೆ ಮತದಾರರು ಆತಂಕಪಡುವ ಅಗತ್ಯವಿಲ್ಲ ಎಂದು ಜಿಲ್ಲಾಧಿಕಾರಿ ಸ್ಪಷ್ಟಪಡಿಸಿದರು.

ಮನೆ ಬಾಗಿಲಿಗೆ ನೋಟಿಸ್

ಆನ್‌ಲೈನ್‌ನಲ್ಲಿ ಸಿದ್ಧವಾಗುವ ನೋಟಿಸ್‌ಗಳನ್ನು ಮತಗಟ್ಟೆ ಮಟ್ಟದ ಅಧಿಕಾರಿಗಳು (BLO) ಮತದಾರರ ಮನೆಗೆ ತೆರಳಿ ಖುದ್ದಾಗಿ ತಲುಪಿಸಲಿದ್ದಾರೆ. ಮತದಾರರು ಮನೆಯಲ್ಲಿ ಲಭ್ಯವಿಲ್ಲದಿದ್ದರೆ ನೋಟಿಸ್ ಅನ್ನು ಮನೆಗೆ ಅಂಟಿಸಿ, ಫೋಟೋ ಸಹಿತ ಮಹಜರು ಮಾಡಲಾಗುತ್ತದೆ.

ಮತದಾರರು ವಿಚಾರಣೆಗಾಗಿ ತಾಲೂಕು ಅಥವಾ ಜಿಲ್ಲಾ ಕೇಂದ್ರಗಳಿಗೆ ಅಲೆಯುವುದನ್ನು ತಪ್ಪಿಸಲು ಜಿಲ್ಲೆಯ 154 ಗ್ರೂಪ್‌-ಬಿ ದರ್ಜೆಯ ಅಧಿಕಾರಿಗಳನ್ನು ಹೆಚ್ಚುವರಿ ಸಹಾಯಕ ಮತದಾರರ ನೋಂದಣಾಧಿಕಾರಿಗಳಾಗಿ (AERO) ನೇಮಿಸಲಾಗುತ್ತಿದೆ. ಗ್ರಾಮ ಪಂಚಾಯತ್ ಹಾಗೂ ನಗರ ಸ್ಥಳೀಯ ಸಂಸ್ಥೆಗಳ ಮಟ್ಟದಲ್ಲೇ ವಿಚಾರಣೆ ನಡೆಸಲು ವ್ಯವಸ್ಥೆ ಮಾಡಲಾಗುತ್ತಿದೆ.

ನೋಟಿಸ್ ತಲುಪಿದ ಬಳಿಕ ನಿಗದಿತ ದಿನಾಂಕದಂದು ಅಗತ್ಯ ದಾಖಲೆಗಳೊಂದಿಗೆ ಹಾಜರಾಗಬೇಕು. ಅನಿವಾರ್ಯ ಕಾರಣಗಳಿಂದ ಮೊದಲ ವಿಚಾರಣಾ ದಿನಾಂಕದಂದು ಹಾಜರಾಗಲು ಸಾಧ್ಯವಾಗದವರಿಗೆ ಮತ್ತೊಂದು ದಿನಾಂಕವನ್ನು ನೀಡಲಾಗುತ್ತದೆ ಎಂದು ಜಿಲ್ಲಾಧಿಕಾರಿ ತಿಳಿಸಿದರು.

ಜನನ ದಿನಾಂಕ ಆಧರಿಸಿ ದಾಖಲೆಗಳ ಸಲ್ಲಿಕೆ

01.07.1987ಕ್ಕಿಂತ ಮೊದಲು ಜನಿಸಿದವರು ತಮ್ಮ ಜನನ ಅಥವಾ ನಿವಾಸವನ್ನು ದೃಢೀಕರಿಸುವ ಒಂದು ದಾಖಲೆಯನ್ನು ಸಲ್ಲಿಸಬೇಕು. 01.07.1987ರಿಂದ 02.12.2004ರೊಳಗೆ ಜನಿಸಿದವರು ತಮ್ಮ ದಾಖಲೆಯ ಜೊತೆಗೆ ತಂದೆ ಅಥವಾ ತಾಯಿಯ ಒಂದು ದಾಖಲೆಯನ್ನು ಸಲ್ಲಿಸಬೇಕು. 02.12.2004ರ ನಂತರ ಜನಿಸಿದವರು ತಮ್ಮ ದಾಖಲೆಯೊಂದಿಗೆ ತಂದೆ ಮತ್ತು ತಾಯಿ ಇಬ್ಬರ ದಾಖಲೆಗಳನ್ನು ಸಲ್ಲಿಸಬೇಕಾಗುತ್ತದೆ.

ಜಾತಿ ಪ್ರಮಾಣಪತ್ರ, ಎಸ್‌ಎಸ್‌ಎಲ್‌ಸಿ ಅಥವಾ ಮೆಟ್ರಿಕ್ಯುಲೇಷನ್ ಅಂಕಪಟ್ಟಿ, ಪಾಸ್‌ಪೋರ್ಟ್, ಚಾಲನಾ ಪರವಾನಗಿ, ಪಿಂಚಣಿ ಪಾವತಿ ಆದೇಶ (PPO), ಜನನ ಪ್ರಮಾಣಪತ್ರ, ಕುಟುಂಬ ನೋಂದಣಿ ಪುಸ್ತಕ ಹಾಗೂ ವಾಸಸ್ಥಳ ದೃಢೀಕರಿಸುವ ಇತರೆ ಪೂರಕ ದಾಖಲೆಗಳನ್ನು ಪರಿಗಣಿಸಲಾಗುತ್ತದೆ ಎಂದು ತಿಳಿಸಲಾಗಿದೆ.

ಕ್ಷೇತ್ರವಾರು ನೋಟಿಸ್‌ಗಳ ಸಂಖ್ಯೆ

ಬೆಳ್ತಂಗಡಿ ಕ್ಷೇತ್ರದಲ್ಲಿ 12,457, ಮೂಡುಬಿದಿರೆಯಲ್ಲಿ 21,843, ಮಂಗಳೂರು ನಗರ ಉತ್ತರದಲ್ಲಿ 27,915, ಮಂಗಳೂರು ನಗರ ದಕ್ಷಿಣದಲ್ಲಿ 35,188, ಮಂಗಳೂರು (ಉಳ್ಳಾಲ) ಕ್ಷೇತ್ರದಲ್ಲಿ 18,349, ಬಂಟ್ವಾಳದಲ್ಲಿ 9,049, ಪುತ್ತೂರಿನಲ್ಲಿ 12,333 ಹಾಗೂ ಸುಳ್ಯದಲ್ಲಿ 13,019 ಮತದಾರರಿಗೆ ನೋಟಿಸ್ ನೀಡಲಾಗುತ್ತಿದೆ. ಒಟ್ಟು 1,50,153 ಮತದಾರರು ಈ ಪ್ರಕ್ರಿಯೆಯ ವ್ಯಾಪ್ತಿಯಲ್ಲಿದ್ದಾರೆ.

ಕರಡು ಪಟ್ಟಿಯಿಂದ 1.57 ಲಕ್ಷ ಹೆಸರುಗಳು ಹೊರಕ್ಕೆ

ಕರಡು ಮತದಾರರ ಪಟ್ಟಿಯಿಂದ ಒಟ್ಟು 1,57,379 ಹೆಸರುಗಳನ್ನು ಕೈಬಿಡಲಾಗಿದೆ. ಇವರಲ್ಲಿ 45,318 ಮಂದಿ ಮೃತಪಟ್ಟವರು, 82,988 ಮಂದಿ ಕಾಯಂ ಆಗಿ ವಲಸೆ ಹೋದವರು, 15,395 ಮಂದಿ ಬೇರೆಡೆ ಈಗಾಗಲೇ ಮತದಾರರಾಗಿ ನೋಂದಾಯಿಸಿಕೊಂಡವರು ಹಾಗೂ 11,124 ಮಂದಿ ಗೈರುಹಾಜರಾಗಿರುವವರು ಸೇರಿದ್ದಾರೆ.

ಪ್ರಸ್ತುತ ಕರಡು ಮತದಾರರ ಪಟ್ಟಿಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ 16,46,387 ಮತದಾರರ ಹೆಸರುಗಳನ್ನು ಡಿಜಿಟಲೀಕರಣಗೊಳಿಸಲಾಗಿದೆ ಎಂದು ಜಿಲ್ಲಾಧಿಕಾರಿ ಹೆಚ್.ವಿ. ದರ್ಶನ್ ತಿಳಿಸಿದ್ದಾರೆ.

error: Content is protected !!