ಕೊಟ್ಟಿಗೆಹಾರ: ಬಣಕಲ್ ಪೊಲೀಸ್ ಠಾಣಾ ವ್ಯಾಪ್ತಿಯ ಹೆಬ್ಬರಿಗೆಯಲ್ಲಿ ಏ.26ರಂದು ವ್ಯಕ್ತಿಯೊಬ್ಬರ ಮೃತದೇಹ ಪತ್ತೆಯಾಗಿದೆ.
ಮೃತ ವ್ಯಕ್ತಿಯನ್ನು ಚಿಕ್ಕಮಗಳೂರು ತಾಲ್ಲೂಕಿನ ತೇಗೂರಿನ ದಿಲೀಪ್ (40) ಎಂದು ಗುರುತಿಸಲಾಗಿದೆ. ಧರ್ಮಸ್ಥಳದಲ್ಲಿ ಮುಡಿ ತೆಗೆಯುವ ಕಾರ್ಯ ಮಾಡುತ್ತಿದ್ದ ದಿಲೀಪ್ ಉಜಿರೆಯಲ್ಲಿ ವಾಸವಿದ್ದರು. ಅಲ್ಲೇ ನೂತನವಾಗಿ ನಿರ್ಮಿಸಿದ್ದ ಮನೆಯ ಗೃಹಪ್ರವೇಶ ಮೇ 5 ರಂದು ಹಮ್ಮಿಕೊಂಡಿದ್ದು ಗೃಹಪ್ರವೇಶಕ್ಕೆ ಆಹ್ವಾನಿಸಲೆಂದು ದಿಲೀಪ್ ಹಾಗೂ ಅವರ ಪತ್ನಿ ಚಿಕ್ಕಮಗಳೂರಿಗೆ ಬಂದಿದ್ದರು. ವಾಪಾಸಾಗುವ ವೇಳೆ ಕೊಟ್ಟಿಗೆಹಾರ ಸಮೀಪಿಸುತ್ತಿದ್ದಂತೆ ಮಳೆ ಪ್ರಾರಂಭವಾಗಿದ್ದರಿAದ ಪತ್ನಿಯನ್ನು ಬಸ್ಸಿಗೆ ಹತ್ತಿಸಿ ಉಜಿರೆಗೆ ಹೋಗಿರಲು ಹೇಳಿ ತಾನು ಮಳೆ ನಿಂತ ಮೇಲೆ ಬೈಕ್‌ನಲ್ಲಿ ಬರುವುದಾಗಿ ತಿಳಿಸಿದ್ದಾರೆ. ಆದರೆ ಏ.26ರಂದು ಸಂಜೆ ಹೆಬ್ಬರಿಗೆ ಸಮೀಪ ರಸ್ತೆ ಬದಿಯಲ್ಲಿ ದಿಲೀಪ್ ಅವರ ಮೃತದೇಹ ಪತ್ತೆಯಾಗಿದೆ. ಮೃತದೇಹದ ಜೊತೆಗಿದ್ದ ಮೊಬೈಲ್‌ನಿಂದಾಗಿ ಮೃತದೇಹದ ಗುರುತು ಪತ್ತೆಯಾಗಿದ್ದು ಸ್ಥಳಕ್ಕೆ ಬಣಕಲ್ ಪೊಲೀಸ್ ಠಾಣಾ ಪಿಎಸ್‌ಐ ಜಂಬೂರಾಜ್ ಮಹಾಜನ್, ಎಎಸ್‌ಐ ಶಶಿ, ಸಿಬ್ಬಂದಿಗಳಾದ ಜಗದೀಶ್ ಮುಂತಾದವರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ದಿಲೀಪ್ ಅವರ ಸ್ಕೂಟಿ ಚಾರ್ಮಾಡಿ ಘಾಟ್ ನ ಅಣ್ಣಪ್ಪಸ್ವಾಮಿ ದೇವಸ್ಥಾನದ ಸಮೀಪ ಅಪಘಾತವಾದ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ಸಾವಿನ ಸುತ್ತ ಅನುಮಾನಗಳು ವ್ಯಕ್ತವಾಗಿದೆ.