ಹರೀಶ್ ಪೂಂಜರೇ ಬೆಳ್ತಂಗಡಿಯ ಹಾಟ್ ಫೇವರೇಟ್: ರಕ್ಷಿತ್ ಶಿವರಾಂರಿಂದ ಪ್ರಭಲ ಸ್ಪರ್ಧೆ ಖಚಿತ: ಕಳೆದ ಬಾರಿಗೆ ಹೋಲಿಸಿದರೆ ಮತ ವಿಭಜನೆಯಲ್ಲಿ ಜೆ.ಡಿ.ಎಸ್., ಎಸ್.ಡಿ.ಪಿ.ಐ. ನಿರ್ಣಾಯಕ ‌ಪಾತ್ರ: ಬೆಳ್ತಂಗಡಿ ವಿಧಾನಸಭಾ ಚುನಾವಣಾ ಇತಿಹಾಸ, ಮತದಾರರ ಒಲವು, ಒಟ್ಟಾರೆ ‌ಮಾಹಿತಿ ‘ಪ್ರಜಾಪ್ರಕಾಶ ನ್ಯೂಸ್’ ಓದುಗರಿಗಾಗಿ

ಬೆಳ್ತಂಗಡಿ: ರಾಜ್ಯದಲ್ಲಿ ವಿಧಾನ ಸಭಾ ಚುನಾವಣೆಯ ಸಿದ್ಧತೆಗಳು ಬಹಳ ಜೋರಾಗಿದೆ. ಹಲವಾರು ಕ್ಷೇತ್ರದಲ್ಲಿ ಈ ಬಾರಿಯ ಮತದಾನ ಬಹಳಷ್ಟು ಕುತೂಹಲಕಾರಿಯಾಗಿದೆ. ಅದರಲ್ಲಿ ಬೆಳ್ತಂಗಡಿ ವಿಧಾನ ಸಭಾ ಕ್ಷೇತ್ರವೂ ಒಂದು.
ಬಿಜೆಪಿ ಅಭ್ಯರ್ಥಿಯಾಗಿ ಹರೀಶ್ ಪೂಂಜ, ಕಾಂಗ್ರೆಸ್ ನಿಂದ ರಕ್ಷಿತ್ ಶಿವರಾಂ, ಎಸ್ ಡಿ. ಪಿ ಐ ಯಿಂದ ಅಕ್ಬರ್ ಬೆಳ್ತಂಗಡಿ, ತುಳುವೆರೆ ಪಕ್ಷದಿಂದ ಶೈಲೇಶ್ ಆರ್. ಜೆ., ಜೆ.ಡಿ.ಎಸ್.ನಿಂದ ಅಶ್ರಫ್ ಆಲಿ, ಅಮ್ ಆದ್ಮಿ ಪಕ್ಷದಿಂದ ಜನಾರ್ಧನ ಬಂಗೇರ, ಪಕ್ಷೇತರರಾಗಿ ಮಹೇಶ್, ಸರ್ವೋದಯ ಕರ್ನಾಟಕ ಪಕ್ಷದಿಂದ ಆದಿತ್ಯ ನಾರಾಯಣ ಕೊಲ್ಲಾಜೆ ಸೇರಿದಂತೆ ಈ ಬಾರಿ 8 ಮಂದಿ ಚುನಾವಣಾ ಕಣದಲ್ಲಿದ್ದಾರೆ.

ಕೈ, ಬಿಜೆಪಿ ನೇರ ಹಣಾಹಣಿ:
ಎಲ್ಲಾ ಪಕ್ಷಗಳ ಅಭ್ಯರ್ಥಿಗಳಿಂದ ಪ್ರಚಾರಗಳು ನಿರಂತರವಾಗಿ ನಡೆಯುತ್ತಿದ್ದು ಏ.17ರಂದು ಬಿಜೆಪಿ ಅಭ್ಯರ್ಥಿ ಹರೀಶ್ ಪೂಂಜ ಹಾಗೂ ಕಾಂಗ್ರೆಸ್ ಅಭ್ಯರ್ಥಿ ರಕ್ಷಿತ್ ಶಿವರಾಂ ಕಾರ್ಯಕರ್ತರ ಬೃಹತ್ ಮೆರವಣಿಗೆಯ ಮೂಲಕ ನಾಮಪತ್ರ ಸಲ್ಲಿಸಿದ್ದಾರೆ. ಬಹಳಷ್ಟು ಕುತೂಹಲಕಾರಿಯಾಗಿರುವ ಕಾಂಗ್ರೆಸ್, ಬಿಜೆಪಿ ಜಿದ್ದಾ-ಜಿದ್ದಿ ಮಧ್ಯೆ ಮುಂದಿನ ಶಾಸಕ ಯಾರಾಗುತ್ತಾರೆ ಎಂಬುದೇ ರೋಚಕ. ಈ ಮಧ್ಯೆ ಹಲವಾರು ಮತದಾರರು ತಮ್ಮ ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದು ವಿಶ್ಲೇಷಕರ ಲೆಕ್ಕಾಚಾರ ಕೂಡ ಬಹಿರಂಗವಾಗಿದೆ.

ಬೆಳ್ತಂಗಡಿ ಚುನಾವಣಾ ಇತಿಹಾಸ
ಬೆಳ್ತಂಗಡಿ ತಾಲೂಕಿನ ಈ ಬಾರಿಯ ಎಲೆಕ್ಷನ್ ಭವಿಷ್ಯವನ್ನು ನಿಮ್ಮ ಮುಂದಿಡುವ ಮೊದಲು ತಾಲೂಕಿನ ಇತಿಹಾಸವನ್ನು ಒಮ್ಮೆ ತಿರುಗಿ ನೋಡೋಣ. 1952 ರಲ್ಲಿ ಬೆಳ್ತಂಗಡಿ ಪುತ್ತೂರು ವಿಧಾನ ಸಭಾ ಕ್ಷೇತ್ರಕ್ಕೆ ಒಳಪಟ್ಟಿತ್ತು ವೆಂಕಟರಮಣ ಗೌಡರು ಮೊದಲ ಶಾಸಕರಾದರು. ಬಳಿಕ ಕಾಂಗ್ರೆಸ್‌ನಿಂದ ಧರ್ಮಸ್ಥಳದ ರತ್ನವರ್ಮ ಹೆಗ್ಗಡೆ, ಮತ್ತೆ 1962 ಕಾಂಗ್ರೆಸ್‌ನಿಂದ ವೈಕುಂಠ ಬಾಳಿಗ ಶಾಸಕರಾಗಿದ್ದರು. ಈ ಅವಧಿಯಲ್ಲಿ ವೈಕುಂಠ ಬಾಳಿಗರು ರಾಜ್ಯ ಸರಕಾರದಲ್ಲಿ ಹಣಕಾಸು ಸಚಿವರಾಗಿ ಆಯ್ಕೆಯಾಗಿ ಸೇವೆ ಸಲ್ಲಿಸಿದ್ದರು. 1967ರಲ್ಲಿ ನಡೆದ ಚುನಾವಣೆಯಲ್ಲಿ ವೈಕುಂಠ ಬಾಳಿಗರು ಮತ್ತೊಮ್ಮೆ ಕಾಂಗ್ರೆಸ್ ಪಕ್ಷ ಬೆಂಬಲದೊಂದಿಗೆ ಸ್ಪರ್ಧಿಸಿ ವಿಜಯಶಾಲಿಯಾಗಿದ್ದರು. ಈ ಅವಧಿಯಲ್ಲಿ ವೈಕುಂಠ ಬಾಳಿಗರು ವಿಧಾನ ಸಭೆಯ ಸ್ಪೀಕರ್ ಆಗಿ ಕಾರ್ಯನಿರ್ವಹಿಸಿದರು. ಆದರೆ ಇವರು ಶಾಸಕತ್ವದ ಅವಧಿಯಲ್ಲೇ ನಿಧನರಾದರು. ಹೀಗಾಗಿ ಈ ಕ್ಷೇತ್ರಕ್ಕೆ ಮತ್ತೆ ಉಪಚುನಾವಣೆ ನಡೆಯಿತು. ಈ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಬೆಂಬಲದಿಂದ ಸ್ಪರ್ಧಿಸಿದ್ದ ಕೆ. ಚಿದಾನಂದ ಪೂಜಾರಿ ಅವರು ಶಾಸಕರಾಗಿ ಆಯ್ಕೆಯಾದರು. ಬಳಿಕ ಕಾಂಗ್ರೆಸ್ ಪಕ್ಷದಿಂದ ಕೆ. ಸುಬ್ರಹ್ಮಣ್ಯ ಗೌಡ ಮುಂದಕ್ಕೆ ಕಾಂಗ್ರೆಸ್ ಪಕ್ಷದಿಂದಲೇ ಗಂಗಾಧರ ಗೌಡ ಆಯ್ಕೆಯಾಗಿ ಶಾಸಕರಾದರು. 1952ರಿಂದ 1983ರವರೆಗೆ ಬೆಳ್ತಂಗಡಿ ತಾಲೂಕನ್ನು ಕಾಂಗ್ರೆಸ್ ಪಕ್ಷವೇ ಆಳಿತು.

1983 ಬೆಳ್ತಂಗಡಿಯಲ್ಲಿ ಗೆಲುವಿನ ಖಾತೆ ತೆರೆದ ಬಿಜೆಪಿ
5 ವರ್ಷಕ್ಕೊಮ್ಮೆ ಚುನಾವಣೆ ನಡೆದರೂ, ಉಪಚುನಾವಣೆ ನಡೆದರೂ ಕಾಂಗ್ರೆಸ್ ಪಕ್ಷವೇ ಗೆಲುವು ಸಾಧಿಸುತ್ತಾ ಬಂತು. ಆದರೆ ತಾಲೂಕಿನಲ್ಲಿ ಮೊದಲ ಬಾರಿಗೆ ಬಿಜೆಪಿಯನ್ನು ಗೆಲ್ಲಿಸಿದ್ದು ವಸಂತ ಬಂಗೇರ ಅವರು. 1983ರಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿದ ವಸಂತ ಬಂಗೇರ ಅವರು ಗೆದ್ದು ಶಾಸಕನಾದರು. ಬಳಿಕ 1985ರಲ್ಲಿ ಮತ್ತೆ ಚುನಾವಣೆ ನಡೆದಿದ್ದು ಆ ಬಾರಿಯೂ ಬಿಜೆಪಿಯಿಂದ ವಸಂತ ಬಂಗೇರ ಅವರೇ ಶಾಸಕರಾಗಿ ಆಯ್ಕೆಯಾದರು. 1989ರಲ್ಲಿ ಮತ್ತೆ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದು ಗಂಗಾಧರ ಗೌಡ ಅವರು ಶಾಸಕರಾದರು. ಬಳಿಕ 1994ರಲ್ಲಿ ನಡೆದ ವಿಧಾನ ಸಭಾ ಚುನಾವಣೆಯಲ್ಲಿ ಜನತಾದಳ ಪಕ್ಷದಿಂದ ಸ್ಪರ್ಧಿಸಿದ ವಸಂತ ಬಂಗೇರ ಗೆದ್ದು 3ನೇ ಬಾರಿಗೆ ಶಾಸಕರಾದರು. 1999 ಹಾಗೂ 2004ರಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಪ್ರಭಾಕರ ಬಂಗೇರ ಸ್ಪರ್ಧಿಸಿ ಶಾಸಕನಾದರು. 2008 ಮತ್ತು 2013ರಲ್ಲಿ ವಸಂತ ಬಂಗೇರ ಕಾಂಗ್ರೆಸ್ ಪಕ್ಷದಲ್ಲಿ ಗೆದ್ದು ಸೋಲಿಲ್ಲದ ಸರದಾರನಾಗಿ ಶಾಸಕ ಸ್ಥಾನವನ್ನು ಅಲಂಕರಿಸಿದರು. ಆದರೆ 2018 ರಲ್ಲಿ ಬಿಜೆಪಿ ಅಭ್ಯರ್ಥಿ ಹರೀಶ್ ಪೂಂಜ‌ ಗೆದ್ದು ತಾಲೂಕಿನಲ್ಲಿ 10 ವರ್ಷದ ಬಳಿಕ ಮತ್ತೆ ಬಿಜೆಪಿ ಪಕ್ಷವನ್ನು ಆಡಳಿತಕ್ಕೆ ತಂದರು.

ತಾಲೂಕಿನ ಚಿತ್ರಣ ಬದಲಿಸಿದ ಹರೀಶ್ ಪೂಂಜ
ವಿದ್ಯಾರ್ಥಿ ಸಂಘ, ಆರ್.ಎಸ್.ಎಸ್, ಪ್ರತಿಭಟನೆ ಹೀಗೆ ಅನೇಕ ಕಡೆ ತಮ್ಮ ನಾಯಕತ್ವದ ಗುಣವನ್ನು ತೋರ್ಪಡಿಸಿದ ಹರೀಶ್ ಪೂಂಜ ತಾಲೂಕಿನಲ್ಲಿ 5 ಬಾರಿ ಶಾಸಕನಾಗಿ ಮೆರೆದ ಕೆ. ವಸಂತ ಬಂಗೇರ ಅವರನ್ನು ಮೊದಲ ಚುನಾವಣೆಯಲ್ಲಿ ಸೋಲಿಸಿ ಯುವ ನಾಯಕನಾಗಿ ಶಾಸಕ ಹುದ್ದೆಯನ್ನು ಅಲಂಕರಿಸಿದರು. ತಾಲೂಕಿನ ಅಭಿವೃದ್ಧಿಗಾಗಿ ಕೋಟಿ-ಕೋಟಿ‌ ರೂ. ಅನುದಾನಗಳನ್ನು ತಂದು ಹಳ್ಳಿ- ಹಳ್ಳಿಗೆ ರಸ್ತೆ ಸಂಪರ್ಕ, ವಿದ್ಯುತ್, ಮೂಲಭೂತ ಸೌಕರ್ಯಗಳನ್ನು ತಲುಪಿಸಿದರು. ಮೊದಲ ಬಾರಿಗೆ ಶಾಸಕನಾಗಿ ಆಯ್ಕೆಯಾದ ಕೆಲವೇ ದಿನಗಳಲ್ಲಿ ಚಾರ್ಮಾಡಿ ಘಾಟಿಯಲ್ಲಿ ಗುಡ್ಡ ಕುಸಿದು ಸಂಚಾರ ಸ್ಥಗಿತಗೊಂಡಿತ್ತು, ಇದನ್ನೂ ನಾಜೂಕಾಗಿ ನಿರ್ವಹಿಸಿದರು. ಬಳಿಕ ಪ್ರವಾಹ, ಅತೀವೃಷ್ಠಿ, ಕೊರೋನಾ ಮೊದಲಾದ ಈ ದೊಡ್ಡ ದೊಡ್ಡ ಹೊಡೆತಗಳನ್ನು ಅನುಭವಿಸಿದ ಶಾಸಕ ಹರೀಶ್ ಪೂಂಜ ಎಲ್ಲವನ್ನೂ ಸಮರ್ಥವಾಗಿ ಎದುರಿಸಿ ಜನ ಮೆಚ್ಚಿದ ನಾಯಕ ಎನ್ನಿಸಿಕೊಂಡಿದ್ದಾರೆ. ಮುಂದೆ ಸುಸಜ್ಜಿತ ಗ್ರಂಥಾಲಯ, ಬಸ್ ನಿಲ್ದಾಣ, ಮಿನಿ ವಿಮಾನ ನಿಲ್ದಾಣ, ಅಂಬೇಡ್ಕರ್ ಭವನದ ಕನಸುಗಳಿಗೆ ಹರೀಶ್ ಪೂಂಜ ಅಡಿಪಾಯ ಹಾಕಿಕೊಂಡಿದ್ದಾರೆ. ಹೀಗಾಗಿ ಈ ಬಾರಿಯ ಅಂದರೆ 2023ರ ವಿಧಾನ ಸಭಾ ಚುನಾವಣೆಯಲ್ಲೂ ಹರೀಶ್ ಪೂಂಜ ಅವರು ಯಾವುದೇ ಅನುಮಾನಗಳಿಲ್ಲದೆ ಗೆಲ್ಲುತ್ತಾರೆ ಎಂದು ಹೇಳಲಾಗುತ್ತಿದೆ.

2023 ವಿಧಾನ ಸಭಾ ಚುನಾವಣೆ: ಅಭ್ಯರ್ಥಿಗಳ ಮಧ್ಯೆ ಬಿಗ್ ಫೈಟ್…
ಮೇ.10 ರಂದು 2023ರ ಕರ್ನಾಟಕ ವಿಧಾನ ಸಭಾ ಚುನಾವಣೆ ನಡೆಯಲಿದೆ. ಈ ವಿಧಾನ ಸಭಾ ಕ್ಷೇತ್ರದಲ್ಲಿ ಪ್ರಸ್ತುತ 1,13,774 ಪುರುಷರು 1,15,096 ಮಹಿಳಾ ಮತದಾರರು, ಮಂಗಳ ಮುಖಿ ಒಬ್ಬರು ಸೇರಿದಂತೆ ಒಟ್ಟು 2,28,871 ಮತದಾರರಿದ್ದಾರೆ. 241 ಬೂತುಗಳಲ್ಲಿ ಚುನಾವಣೆ ನಡೆಯಲಿದೆ. ಒಟ್ಟು 81 ಗ್ರಾಮಗಳಿರುವ ಬೆಳ್ತಂಗಡಿ ದೊಡ್ಡ ವಿಧಾನ ಸಭಾ ಕ್ಷೇತ್ರದಲ್ಲಿ 8 ಮಂದಿ ಕಣಕ್ಕಿಳಿದಿದ್ದಾರೆ. ಜನರ ಅಭಿಪ್ರಾಯ ಹಾಗೂ ವಿಶ್ಲೇಷಕರ ಪ್ರಕಾರ ಬಿಗ್ ಫೈಟ್ ಏರ್ಪಟ್ಟಿರುವುದು ಬಿಜೆಪಿ ಅಭ್ಯರ್ಥಿ ಹರೀಶ್ ಪೂಂಜ ಹಾಗೂ ಕಾಂಗ್ರೆಸ್ ಅಭ್ಯರ್ಥಿ ರಕ್ಷಿತ್ ಶಿವರಾಂ ಮಧ್ಯೆ. ಒಟ್ಟು 81 ಗ್ರಾಮಗಳಿರುವ ದೊಡ್ಡ ವಿಧಾನ ಸಭಾ ಕ್ಷೇತ್ರದಲ್ಲಿ ಮತದಾರರು ಯಾರನ್ನು ಶಾಸಕನನ್ನಾಗಿ ಆಯ್ಕೆ ಮಾಡುತ್ತಾರೆ ಅನ್ನೋದೆ ಒಂದು ರೋಚಕ ಸಂಗತಿ. ಈಗಾಗಲೇ ಸೋಲಿಲ್ಲದ ಸರದಾರನಾಗಿ ತಾಲೂಕಿನಲ್ಲಿ ಹೆಸರುವಾಸಿಯಾದ ವಸಂತ ಬಂಗೇರ ಅವರನ್ನು ಮೊಟ್ಟ ಮೊದಲ ಚುನಾವಣೆಯಲ್ಲಿ ಸೋಲಿಸಿದ ಹರೀಶ್ ಪೂಂಜ ಮತ್ತೊಮ್ಮೆ ಶಾಸಕರಾಗುತ್ತಾರೆ ಎಂಬ ಅಭಿಪ್ರಾಯಗಳು ತಾಲೂಕಿನಾದ್ಯಂತ ಕೇಳಿಬರುತ್ತಿದೆ ಅದಲ್ಲದೇ ಚುನಾವಣಾ ವಿಶ್ಲೇಷಕರ ಅಭಿಪ್ರಾಯಗಳು ಕೂಡ ಅದೇ ರೀತಿ ಇದೆ.‌ ಕಾರಣ ಅವರು ಕಳೆದ 5 ವರ್ಷಗಳಲ್ಲಿ ಅಭಿವೃದ್ಧಿ ಅಲ್ಲದೇ ಇಡೀ ತಾಲೂಕಿನ ಹಳ್ಳಿ ಹಳ್ಳಿಗಳಲ್ಲಿ ಓಡಾಡಿ ಜನಸಾಮಾನ್ಯರೊಂದಿಗೆ ಬೆರೆತು ಅವರ ಸಮಸ್ಯೆಗಳನ್ನು ಆಲಿಸಿ ಜನರ ಮನಸ್ಸನ್ನು ಗೆದ್ದಿದ್ದಾರೆ. ಅದಲ್ಲದೇ ಬೆಳ್ತಂಗಡಿಯಲ್ಲಿ ಯಾವುದೇ ಜಾತಿ ಆಧಾರಿತ ರಾಜಕೀಯ, ಓಲೈಕೆ ಮೂಲಕ ಹರೀಶ್ ಪೂಂಜ ಅವರ ಮೇಲಿನ ಜನರ ಅಭಿಮಾನವನ್ನು ಕಡಿಮೆಗೊಳಿಸಲು ಸಾಧ್ಯವಿಲ್ಲ . ಬಿಲ್ಲವರು ಕಾಂಗ್ರೆಸ್ ಪರ ಒಲವು ತೋರುತಿದ್ದಾರೆ ಎಂಬುವುದು ಸತ್ಯಕ್ಕೆ ದೂರವಾದ ಮಾತುಗಳಾಗಿದ್ದು ಜಾತಿಯ ಹೆಸರಲ್ಲಿ ಧರ್ಮವನ್ನು ಬಿಟ್ಟುಕೊಡುವುದಿಲ್ಲ. ಈ ಎಲ್ಲಾ ಕಾರಣಗಳಿಂದ ವಿಶ್ಲೇಷಕರ ಅಭಿಪ್ರಾಯದಲ್ಲೂ ಫೇವರಿಟ್ ಅಭ್ಯರ್ಥಿಯಾಗಿ ಹರೀಶ್ ಪೂಂಜ ಮೂಡಿ ಬಂದಿದ್ದಾರೆ.

error: Content is protected !!