ಬೆಳ್ತಂಗಡಿ: ಏ.17 ಸೋಮವಾರದಂದು ಬೆಳ್ತಂಗಡಿಯಲ್ಲಿ ವಿವಿಧ ರಾಜಕೀಯ ಪಕ್ಷಗಳ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಲಿರುವ ಕಾರಣ ಬೆಳ್ತಂಗಡಿಯಲ್ಲಿ ರಸ್ತೆ ಬದಿ ವ್ಯಾಪಾರವನ್ನು ನಿಷೇಧಿಸಲಾಗಿದೆ. ಈ ಬಗ್ಗೆ ಬೆಳ್ತಂಗಡಿ ಚುನಾವಣಾಧಿಕಾರಿಯವರ ಕಾರ್ಯಾಲಯ ಸಾರ್ವಜನಿಕರಿಗೆ ಹಾಗೂ ವರ್ತಕರಿಗೆ ಪ್ರಕಟಣೆಯನ್ನು ಹೊರಡಿಸಿದೆ.
ಬೆಳಿಗ್ಗೆ 10.00 ಗಂಟೆಯಿಂದ ಸಂಜೆ 4.00 ಗಂಟೆಯವರೆಗೆ ನಾಮಪತ್ರ ಸಲ್ಲಿಕೆ ನಡೆಯಲಿದ್ದು, ಈ ವೇಳೆ ಅಭ್ಯರ್ಥಿಗಳು ಸಾವಿರಾರು ಕಾರ್ಯಕರ್ತರೊಂದಿಗೆ ಮೆರವಣಿಗೆ ಮೂಲಕ ಮುಖ್ಯ ರಸ್ತೆಯಲ್ಲಿ ಸಾಗಲಿದ್ದಾರೆ. ಈ ಸಂದರ್ಭದಲ್ಲಿ ವಾಹನ ದಟ್ಟಣೆ ಹೆಚ್ಚಾಗಿ ಟ್ರಾಫಿಕ್ ಸಮಸ್ಯೆ ಉಂಟಾಗುವ ಸಂಭವವಿದೆ. ಅದಲ್ಲದೇ ಸಂತೆ ಕೂಡ ಅವತ್ತೆ ಆಗಿರುವುದರಿಂದ ಇನ್ನಷ್ಟು ಸಾರ್ವಜನಿಕರಿಗೆ ಸಮಸ್ಯೆ ಆಗಬಹುದು. ಹೀಗಾಗಿ ಪೊಲೀಸ್ ಇಲಾಖೆಯ ಕೋರಿಕೆಯ ಮೇರೆಗೆ ಕಾನೂನು ಸುವ್ಯವಸ್ಥೆ ಕಾಪಾಡುವ ಹಿತದೃಷ್ಟಿಯಿಂದ, ಸೋಮವಾರದ ಸಂತೆಯಲ್ಲಿನ ವರ್ತಕರು, ವ್ಯಾಪಾರಸ್ಥರು ಹಾಗೂ ಬೀದಿಬದಿ ವ್ಯಾಪಾರಸ್ಥರು, ರಾಷ್ಟ್ರೀಯ ಹೆದ್ದಾರಿಯ ಸಂತೆಕಟ್ಟೆಯಿಂದ ಬಸ್ ನಿಲ್ದಾಣದವರೆಗೆ ಎರಡೂ ಬದಿಗಳಲ್ಲಿ ವ್ಯಾಪಾರ ಮಾಡುವುದನ್ನು ನಿಷೇಧಿಸಿ ಆದೇಶಿಸಿದೆ.