ಧರ್ಮಸ್ಥಳ: ವಿದ್ಯಾರ್ಥಿ ಜೀವನ ಕೇವಲ ಪುಸ್ತಕಗಳಿಂದ ಮಾತ್ರ ಕಲಿಯುವುದಲ್ಲ. ಅನೇಕ ಶಿಬಿರಗಳಿಂದ ಕಲಿಯುವಂತದ್ದು ತುಂಬಾನೇ ಇದೆ. ನಿಮ್ಮ ಮನದ ಕಿಟಕಿ ಬಾಗಿಲುಗಳನ್ನು ತೆರೆದುಕೊಳ್ಳಿ. ಜ್ಞಾನದ ಅನುಭವದ ಗಾಳಿ ಬೀಸಲು ಬಿಡಿ ಎಂದು ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಆಂಗ್ಲ ಮಾಧ್ಯಮ ಶಾಲೆಯ ಸಹ ಶಿಕ್ಷಕಿ ಆಶಾರವರು ಹೇಳಿದರು.
ಅವರು ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಆಂಗ್ಲ ಮಾಧ್ಯಮ ಶಾಲೆ ಧರ್ಮಸ್ಥಳದಲ್ಲಿ ಸ್ಕೌಟ್ಸ್ ಮತ್ತು ಗೈಡ್ಸ್ ವತಿಯಿಂದ ನಡೆಯುವ ಒಂದು ದಿನದ ಬೇಸಿಗೆ ಶಿಬಿರಕ್ಕೆ ಚಾಲನೆ ನೀಡಿ ಬಳಿಕ ಮಾತನಾಡಿ, ವಿದ್ಯಾರ್ಥಿ ಜೀವನವು ವ್ಯಕ್ತಿಯ ಜೀವನದ ಅತ್ಯಂತ ಅವಿಸ್ಮರಣೀಯ ಹಂತಗಳಲ್ಲಿ ಒಂದಾಗಿದೆ. ಇದು ಜೀವನಕ್ಕೆ ಅಡಿಪಾಯವನ್ನು ನಿರ್ಮಿಸುತ್ತದೆ. ವಿದ್ಯಾರ್ಥಿ ಜೀವನದಲ್ಲಿ ಶಿಸ್ತು ಬಹಳ ಮುಖ್ಯ, ಅದನ್ನು ಸ್ಕೌಟ್ಸ್ ಮತ್ತು ಗೈಡ್ಸ್ ಕಲಿಸಿ ಕೊಡುತ್ತದೆ. ಮಾನವೀಯ ಗುಣಗಳನ್ನು ಅಳವಡಿಸಿಕೊಳ್ಳಿ. ಅನುಭವ ಎನ್ನುವುದು ಎಲ್ಲೂ ಹೆಕ್ಕಲು ಸಿಗುವುದಿಲ್ಲ ಅದನ್ನು ಅನುಭವಿಸಬೇಕು ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.
ಹಿರಿಯ ಸಹ ಶಿಕ್ಷಕಿ ರಮಾರಾಜೇಶ್ ಮಾತನಾಡಿ, ದಯೆ. ಸಹನೆ, ಅನುಕಂಪಗಳು ನಿಮಗೆ ದಾರಿದೀಪವಾಗಲಿ. ಜೀವನದಲ್ಲಿ ಸ್ವಂತಿಕೆ ಎಂಬುದು ಇರಲಿ. ಸದಾ ಕ್ರಿಯಾಶೀಲರಾಗಿದ್ದುಕೊಂಡು ತಮ್ಮತನವನ್ನು ಬಿಟ್ಟು ಕೊಡದೆ ಮಾನವೀಯ ಸಂಬಂಧಗಳನ್ನು ಭದ್ರಗೊಳಿಸಿ ಉತ್ತಮ ಸಮಾಜವನ್ನು ನಿರ್ಮಾಣ ಮಾಡುವ ಕಾರ್ಯಕ್ಕೆ ತಮ್ಮನ್ನು ತಾವು ತೊಡಗಿಸಿಕೊಳ್ಳಿ ಎಂದು ಶುಭ ಹಾರೈಸಿದರು.
ಶಿಬಿರದಲ್ಲಿ ಸ್ಕೌಟ್ ಹಾಗೂ ಗೈಡ್‌ನ ವಿವಿಧ ಚಟುವಟಿಕೆಗಳು, ಶಾಲಾ ಚಿತ್ರಕಲಾ ಶಿಕ್ಷಕಿ ಕುಮಾರಿ ಶ್ವೇತಾ ಇವರ ನಾಯಕತ್ವದಲ್ಲಿ ವಿವಿಧ ಕ್ರಾಫ್ಟ್ ಹಾಗೂ ಇನ್ನಿತರ ಚಟುವಟಿಕೆಗಳನ್ನು ಆಯೋಜಿಸಲಾಗಿತ್ತು. ಶಾಲಾ ಸ್ಕೌಟ್ ಮತ್ತು ಗೈಡ್ ವಿದ್ಯಾರ್ಥಿಗಳು ಈ ಶಿಬಿರದ ಪ್ರಯೋಜನವನ್ನು ಪಡೆದುಕೊಂಡರು. ಪರಿಮಳ ಎಂ ವಿ ಇವರ ನಾಯಕತ್ವದಲ್ಲಿ, ಶಿಕ್ಷಕಿಯರಾದ ಗೀತಾ ಹಾಗೂ ಶಶಿಕಲಾ ಮುಖ್ಯ ರೂವಾರಿಗಳಾಗಿ ಈ ಶಿಬಿರ ನಡೆಸುತ್ತಿದ್ದಾರೆ.