ವಿಧಾನ ಸಭಾ ಚುನಾವಣೆ: ದ.ಕ ಜಿಲ್ಲೆಯಲ್ಲಿ ಮಹಿಳಾ ಮತದಾರರೇ ಹೆಚ್ಚು..!:100 ಮತಗಟ್ಟೆಗಳನ್ನು ಕರಾವಳಿಯ ಕಲೆಗಳ ಮೂಲಕ ಸಿಂಗರಿಸಲು ನಿರ್ಧಾರ: ಧಾರ್ಮಿಕ ಸಮಾರಂಭ ನಡೆಸಲು ಚುನಾವಣಾ ನೀತಿ ಸಂಹಿತೆಯಿಂದ ಅಡ್ಡಿಯಿಲ್ಲ

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಎಂಟು ವಿಧಾನಸಭಾ ಕ್ಷೇತ್ರಗಳಲ್ಲಿ ಮೇ 10ರಂದು ಚುನಾವಣೆ ನಡೆಯಲಿದ್ದು ಈ ಬಾರಿ ಮಹಿಳಾ ಮತದಾರರ ಸಂಖ್ಯೆ ಹೆಚ್ಚಾಗಿದೆ. ದ.ಕ ಜಿಲ್ಲೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಒಟ್ಟು 17,58,647 ಮತದಾರರಿದ್ದು, ಇದರಲ್ಲಿ 8,60,396 ಪುರುಷರು, 8,98,176 ಮಹಿಳೆಯರು ಮತ್ತು 75 ಮಂದಿ ತೃತೀಯ ಲಿಂಗಿಯರು ಮತಚಲಾಯಿಸಲಿದ್ದಾರೆ. ಜೊತೆಗೆ 33,577 ಯುವ ಮತದಾರರು ಇದ್ದಾರೆ. ಈ ಬಗ್ಗೆ ದಕ್ಷಿಣ ಕನ್ನಡ ಜಿಲ್ಲಾ ಚುನಾವಣಾಧಿಕಾರಿ ರವಿಕುಮಾರ್ ಎಂಆರ್ ಮಾಹಿತಿ ನೀಡಿದ್ದಾರೆ.

ಬೆಳ್ತಂಗಡಿ ಕ್ಷೇತ್ರದಲ್ಲಿ 1,12,106 ಪುರುಷರು, 1,13,167 ಮಹಿಳೆಯರು, ಮೂಡಬಿದಿರೆ ಕ್ಷೇತ್ರದಲ್ಲಿ 97,920 ಪುರುಷರು, 1,04,668 ಮಹಿಳೆಯರು, ಮಂಗಳೂರು ನಗರ ಉತ್ತರದಲ್ಲಿ 1,19,435 ಪುರುಷರು, 1,26,904 ಮಹಿಳೆಯರು, ಮಂಗಳೂರು ನಗರ ದಕ್ಷಿಣ ದಲ್ಲಿ 1,15,920 ಪುರುಷರು, 1,26,441 ಮಹಿಳೆಯರು, ಮಂಗಳೂರಿಲ್ಲಿ 99,185 ಪುರುಷರು, 1,02,823 ಮಹಿಳೆಯರು, ಬಂಟ್ವಾಳದಲ್ಲಿ 1,10,584 ಪುರುಷರು, 1,14,230 ಮಹಿಳೆಯರು, ಪುತ್ತೂರು ಕ್ಷೇತ್ರದಲ್ಲಿ 1,03,942 ಪುರುಷರು, 1,06,577 ಮಹಿಳೆಯರು, ಸುಳ್ಯ ಕ್ಷೇತ್ರದಲ್ಲಿ 1,01,304 ಪುರುಷರು, 1,03,366 ಮಹಿಳೆಯರು ಇದ್ದಾರೆ. ಈ ಬಾರಿ 80 ವರ್ಷ ಮೇಲ್ಪಟ್ಟ ಮತ್ತು ಶೇ.40ಕ್ಕಿಂತ ಹೆಚ್ಚು ಅಂಗನ್ಯೂನತೆ ಹೊಂದಿರುವ ಮತದಾರರಿಗೆ ಮನೆಯಲ್ಲಿ ಮತದಾನ ಮಾಡಲು ವ್ಯವಸ್ಥೆ ಕಲ್ಪಿಸಲಾಗಿದೆ. ಇದಕ್ಕಾಗಿ ಅವರನ್ನು ಮೇ 5ರೊಳಗೆ ಸಂಪರ್ಕ ಮಾಡಿ ಮೇ 6ರಿಂದ ನಿಯಾಮವಳಿಯಂತೆ ಮತದಾನದ ವ್ಯವಸ್ಥೆ ಮಾಡಲಾಗುವುದು ಎಂದಿದ್ದಾರೆ.

ದಕ್ಷಿಣ ಕನ್ನಡ ಜಿಲ್ಲೆಯ ಎಂಟು ವಿಧಾನಸಭಾ ಕ್ಷೇತ್ರಗಳಾದ ಬೆಳ್ತಂಗಡಿ, ಮೂಡಬಿದಿರೆ, ಮಂಗಳೂರು ನಗರ ಉತ್ತರ, ಮಂಗಳೂರು ನಗರ ದಕ್ಷಿಣ, ಮಂಗಳೂರು, ಬಂಟ್ವಾಳ, ಪುತ್ತೂರು, ಸುಳ್ಯ ವಿಧಾನಸಭಾ ಕ್ಷೇತ್ರಗಳಿಗೆ ಆಯಾ ಕ್ಷೇತ್ರದ ಚುನಾವಣಾಧಿಕಾರಿಗಳ ಕಛೇರಿಯಲ್ಲಿ ನಾಮಪತ್ರ ಸ್ವೀಕರಿಸಲಾಗುತ್ತದೆ. ಬೆಳ್ತಂಗಡಿಗೆ ಹೆಚ್.ಆರ್.ಯೋಗೀಶ್, ಮೂಡಬಿದಿರೆಗೆ ಮಹೇಶ್ಚಂದ್ರ.ಕೆ, ಮಂಗಳೂರು ನಗರ ಉತ್ತರಕ್ಕೆ ಅಭಿಷೇಕ್.ವಿ, ಮಂಗಳೂರು ನಗರ ದಕ್ಷಿಣಕ್ಕೆ ಕೆಂಪೇಗೌಡ.ಹೆಚ್, ಮಂಗಳೂರಿಗೆ ರಾಜು.ಕೆ, ಬಂಟ್ವಾಳ ಅಬಿದ್ ಗಡ್ಯಾಲ್, ಪುತ್ತೂರಿಗೆ ಗಿರೀಶ್ ನಂದನ್.ಎಂ, ಸುಳ್ಯಕ್ಕೆ ಅರುಣ್ ಕುಮಾರ್ ಸಂಗಾವಿ ಚುನಾವಣಾಧಿಕಾರಿಯಾಗಿರಲಿದ್ದಾರೆ ಎಂದರು.

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಒಟ್ಟು 1,860 ಮತಗಟ್ಟೆ ಇರಲಿದ್ದು ಇದರಲ್ಲಿ 100 ಮತಗಟ್ಟೆಗಳನ್ನು ಕರಾವಳಿಯ ಕಲೆಗಳ ಮೂಲಕ ಸಿಂಗರಿಸಲು ನಿರ್ಧರಿಸಲಾಗಿದೆ. ಯಕ್ಷಗಾನ, ಕಂಬಳ, ನೀಲಿ ಅಲೆ, ಹೆರಿಟೇಜ್, ಗೋ ಗ್ರೀನ್, ಎತ್ನಿಕ್, ಯುವ, ಸಖಿ, ಪಿಡಬ್ಲ್ಯುಡಿ ಬೂತ್‌ಗಳು ಇರಲಿದೆ . ಕರಾವಳಿಯಲ್ಲಿ ಕೋಲ, ನೇಮ, ಯಕ್ಷಗಾನ ಸೇರಿದಂತೆ ಎಲ್ಲಾ ಧರ್ಮಗಳ ಧಾರ್ಮಿಕ ಸಮಾರಂಭ ನಡೆಸಲು ಚುನಾವಣಾ ನೀತಿ ಸಂಹಿತೆಯಿಂದ ಅಡ್ಡಿಯಿಲ್ಲ. ಆದರೆ ಬ್ಯಾನರ್ ಅಳವಡಿಸಲು ಸ್ಥಳೀಯ ಚುನಾವಣಾಧಿಕಾರಿಗಳ ಅನುಮತಿ ಪಡೆಯಬೇಕು ಎಂದು ತಿಳಿಸಿದರು.

error: Content is protected !!