ಮಂಗಳೂರು : ದಕ್ಷಿಣ ಕನ್ನಡ ಜಿಲ್ಲೆಯ 8 ವಿಧಾನಸಭಾ ಕ್ಷೇತ್ರದ ಅಭ್ಯರ್ಥಿಗಳ ಆಯ್ಕೆಗೆ ಸಂಬಂಧಿಸಿದಂತೆ ಮಂಗಳೂರಿನ ಆರ್ ಎಸ್ ಎಸ್ ಶಕ್ತಿ ಕೇಂದ್ರವಾದ ಸಂಘನಿಕೇತನದಲ್ಲಿ ಬಿಜೆಪಿಯಿಂದ ಆಂತರಿಕ ಚುನಾವಣೆ ಮಾ.31ರಂದು ನಡೆದಿದೆ.
ಚುನಾವಣೆಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ 8 ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಶಕ್ತಿ ಕೇಂದ್ರ, ಮಂಡಲ, ಪ್ರಕೋಷ್ಠ, ಮೋರ್ಚಾಗಳ ಅಧ್ಯಕರು, ಉಪಾಧ್ಯಕ್ಷರು, ಪದಾಧಿಕಾರಿಗಳು ಭಾಗಿಯಾಗಿದ್ದು, ರಹಸ್ಯವಾಗಿ 800 ಕ್ಕೂ ಅಧಿಕ ಪದಾಧಿಕಾರಿಗಳು ಆಂತರಿಕ ಚುನಾವಣೆಯಲ್ಲಿ ಅಭ್ಯರ್ಥಿಗಳ ಆಯ್ಕೆ ನಡೆಸಿದ್ದಾರೆ. ಇದೇ ಮೊದಲ ಬಾರಿಗೆ ಅಭ್ಯರ್ಥಿಗಳ ಆಯ್ಕೆಗೆ ರಾಜ್ಯ ಬಿಜೆಪಿಯಲ್ಲಿ ವೋಟಿಂಗ್ ವ್ಯವಸ್ಥೆಯ ಪ್ರಾಯೋಗಿಕ ಪರಿಚಯ ಮಾಡಲಾಗಿದ್ದು ಮಾ.31 ರಂದು ಇಡೀ ದಿನ ವಿವಿಧ ಜಿಲ್ಲೆಗಳಲ್ಲಿ ಬಿಜೆಪಿಯಿಂದ ಅಭಿಪ್ರಾಯ ಸಂಗ್ರಹ ಕಾರ್ಯ ನಡೆದಿದೆ. ಎಲ್ಲ ಜಿಲ್ಲೆಗಳಿಗೂ ಸಂಭಾವ್ಯರ ಬಗ್ಗೆ ಅಭಿಪ್ರಾಯ ಸಂಗ್ರಹಕ್ಕೆ ಭೇಟಿ ಮಾಡಲಿರುವ ತಂಡಗಳು ಇಂದು ಈ ವರದಿಗಳನ್ನು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರಿಗೆ ಸಲ್ಲಿಕೆ ಮಾಡಲಿವೆ.