ಬೆಳ್ತಂಗಡಿ ಅಕ್ರಮ ಮರಳುಗಾರಿಕೆ ಕಳಪೆ ಕಾಮಗಾರಿ : ನ್ಯಾಯಾಂಗ ತನಿಖೆ ಆಗ್ರಹಿಸಿ ಅಮರಣಾಂತ ಉಪವಾಸ: ತಹಶೀಲ್ದಾರ್ ಭರವಸೆ ಸತ್ಯಾಗ್ರಹ ಹಿಂದಕ್ಕೆ ಪಡೆದ ಶೇಖರ್ ಲಾಯಿಲ:

 

 

ಬೆಳ್ತಂಗಡಿ: ಅಕ್ರಮ ಮರಳುಗಾರಿಕೆ ವಿರುದ್ಧ ಹಾಗೂ ಅಭಿವೃದ್ಧಿ ಹೆಸರಿನಲ್ಲಿ ನಡೆಯುತ್ತಿರುವ ಅಕ್ರಮ , ಕಳಪೆ ಮಟ್ಟದ ಕಾಮಗಾರಿಗಳನ್ನು ಹೈಕೋರ್ಟ್ ನಿವೃತ್ತ ನ್ಯಾಯಾಧೀಶರಿಂದ ತನಿಖೆಗೆ ಒಳಪಡಿಸಬೇಕು ಎಂದು ಒತ್ತಾಯಿಸಿ ಕಳೆದ 28 ಘಂಟೆಗಳಿಂದ ಬೆಳ್ತಂಗಡಿ ಮಿನಿ ವಿಧಾನಸೌಧದ ಎದುರು ನಡೆಯುತ್ತಿದ್ದ ಅಮರಣಾಂತ ಉಪವಾಸ ಸತ್ಯಾಗ್ರಹವನ್ನು ಶೇಖರ್ ಲಾಯಿಲ ಮಂಗಳವಾರ ಮಧ್ಯಾಹ್ನ ಕೊನೆಗೊಳಿಸಿದರು.

ಕಳೆದ ಮಾರ್ಚ್ 20 ರಿಂದ ನಿರಂತರವಾಗಿ ಉಪವಾಸ ಸತ್ಯಾಗ್ರಹ ನಡೆಸಲಾಗುತ್ತಿತ್ತು. ಅಧಿಕಾರಿಗಳು ಸ್ಪಂದಿಸದ ಕಾರಣ ಮಾರ್ಚ್ 27 ರಿಂದ ಅಮರಣಾಂತ ಉಪವಾಸ ಸತ್ಯಾಗ್ರಹವನ್ನು ಆರಂಭಿಸಿದ ಸಿಪಿಐ(ಎಂ) ಮುಖಂಡ ಶೇಖರ್ ಲಾಯಿಲ ಸೋಮವಾರ ರಾತ್ರಿಯೂ ಮುಂದುವರಿಸಿದರು. ಮಂಗಳವಾರ ಮಧ್ಯಾಹ್ನ ಬೆಳ್ತಂಗಡಿ ತಹಶೀಲ್ದಾರ್ ಸುರೇಶ್ ಕುಮಾರ್ ಅವರು ಶೇಖರ್ ಲಾಯಿಲ ಅವರೊಂದಿಗೆ ಮಾತುಕತೆ ನಡೆಸಿದರಲ್ಲದೆ ಲಿಖಿತ ರೂಪದಲ್ಲಿ ಹೋರಾಟಕ್ಕೆ ಸ್ಪಂದಿಸಿದ ನಂತರ ಅಮರಣಾಂತ ಉಪವಾಸ ಸತ್ಯಾಗ್ರಹವನ್ನು ಕೊನೆಗೊಳಿಸಿದರು.

ಬೆಳ್ತಂಗಡಿ ತಾಲೂಕಿನಲ್ಲಿ ನಡೆಯುತ್ತಿರುವ ಎಲ್ಲಾ ರೀತಿಯ ಅಕ್ರಮ ಮರಳುಗಾರಿಕೆಯನ್ನು ಗ್ರಾಮಕರಣೀಕರು ಸೇರಿದಂತೆ ಕಂದಾಯ ನಿರೀಕ್ಷಕರು ಧಾಳಿ ನಡೆಸಿ ಸಂಬಂಧಪಟ್ಟ ಪೋಲಿಸ್ ಠಾಣೆಯಲ್ಲಿ ಕ್ರಿಮಿನಲ್ ಕೇಸ್ ದಾಖಲಿಸುವ ಬಗ್ಗೆ ಲಿಖಿತ ಭರವಸೆ ನೀಡಿದರು. ಅಭಿವೃದ್ಧಿ ಹೆಸರಿನಲ್ಲಿ ನಡೆಯುತ್ತಿರುವ ಅಕ್ರಮ , ಕಳಪೆ ಮಟ್ಟದ ಕಾಮಗಾರಿಗಳ ಬಗ್ಗೆ ಸಂಬಂಧಿಸಿದ

ಅನುಷ್ಠಾನಾಧಿಕಾರಿಗಳಿಂದ ಸೂಕ್ತ ಮಾಹಿತಿ ಪಡೆದು ಸರ್ಕಾರಕ್ಕೆ ಸೂಕ್ತ ಕ್ರಮಗಳನ್ನು ಕೈಗೊಳ್ಳಲು ಮನವಿ ಸಲ್ಲಿಸುವ ಬಗ್ಗೆ ಲಿಖಿತ ಮಾಹಿತಿ ನೀಡಿದರು. ಈ ಸಂದರ್ಭದಲ್ಲಿ ತಾಲೂಕಿನ ವಿವಿಧೆಡೆ ನಡೆಯುತ್ತಿರುವ ಅಕ್ರಮಗಳ ಮಾಹಿತಿಯನ್ನು ಶೇಖರ್ ಲಾಯಿಲ ನೀಡಿದರು. ಅಕ್ರಮಗಳನ್ನು ತಡೆಯಲು ವಿಫಲವಾದರೆ ಮತ್ತೊಮ್ಮೆ ಅಮರಣಾಂತ ಉಪವಾಸ ಕೈಗೊಳ್ಳಬೇಕಾಗುತ್ತದೆ ಎಂದು ತಾಲೂಕು ಆಡಳಿತಕ್ಕೆ ಈ ಸಂದರ್ಭದಲ್ಲಿ ಎಚ್ಚರಿಕೆ ನೀಡಿದರು.

error: Content is protected !!