ಪ್ರವೀಣ್ ನೆಟ್ಟಾರು ಕೊಲೆ ಪ್ರಕರಣ: ಪ್ರಮುಖ ಆರೋಪಿ ಬೆಂಗಳೂರಲ್ಲಿ ಸೆರೆ:

 

 

 

ಬೆಂಗಳೂರು : ಬಿಜೆಪಿ ಯುವ ಮೋರ್ಚಾ ಕಾರ್ಯಕರ್ತ ಪ್ರವೀಣ್ ನೆಟ್ಟಾರು ಕೊಲೆ ಪ್ರಕರಣ ಸಂಬಂಧ ಪಟ್ಟಂತೆ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್​ಐಎ) ಅಧಿಕಾರಿಗಳು ಪ್ರಮುಖ ಆರೋಪಿಯನ್ನು ಬಂಧಿಸಿದ್ದಾರೆ. ಪ್ರಕರಣದ ಮೋಸ್ಟ್ ವಾಂಟೆಡ್​ ಆರೋಪಿ ತೌಫಿಲ್ ಎಂಬಾತ ಅಮೃತಹಳ್ಳಿ ಠಾಣೆ ವ್ಯಾಪ್ತಿಯ ದಾಸರಹಳ್ಳಿಯಲ್ಲಿ ತಡರಾತ್ರಿ ಸೆರೆ ಸಿಕ್ಕಿದ್ದಾನೆ ಎಂದು ಎನ್​ಐಎ ಮೂಲಗಳು ತಿಳಿಸಿವೆ.

ಆರೋಪಿಯು ಬೆಂಗಳೂರಿನಲ್ಲಿ ಅಡಗಿರುವ ಖಚಿತ ಮಾಹಿತಿ ಮೇರೆಗೆ ತಡರಾತ್ರಿ ಕ್ಷಿಪ್ರ ಕಾರ್ಯಾಚರಣೆ ಕೈಗೊಂಡ ಹತ್ತಕ್ಕೂ ಅಧಿಕ ಅಧಿಕಾರಿಗಳನ್ನೊಳಗೊಂಡ ತಂಡ ಮೊದಲು ತೌಫಿಲ್ ಮನೆಯೊಳಗೆ ಇರುವುದನ್ನು ಖಚಿತಪಡಿಸಿಕೊಂಡಿದೆ. ಬಳಿಕ‌ ಇಬ್ಬರು ಅಧಿಕಾರಿಗಳು ಪ್ಲಂಬರ್​ಗಳ ಸೋಗಿನಲ್ಲಿ ಮನೆಗೆ ಪ್ರವೇಶಿಸಿದ್ದಾರೆ‌. ಈ ವೇಳೆ ಮನೆಯಲ್ಲಿ ಮಟನ್ ಕತ್ತರಿಸುತ್ತಿದ್ದ ಆರೋಪಿ ಎನ್ಐಎ ಅಧಿಕಾರಿಗಳ ಮೇಲೆ ಹಲ್ಲೆಗೆ ಮುಂದಾಗಿದ್ದಾನೆ. ಅಷ್ಟರಲ್ಲಿ ಆರೋಪಿಯನ್ನು ಬಂಧಿಸಲಾಗಿದೆ ಎಂದು ಎನ್ಐಎ ಅಧಿಕಾರಿಗಳು ತಿಳಿಸಿದ್ದಾರೆ.ಅಮೃತಹಳ್ಳಿಯ ಮಾರುತಿ ಲೇಔಟ್​​ನ ದಾಸರಹಳ್ಳಿಯಲ್ಲಿರುವ ನಂಜುಂಡಪ್ಪ ಎಂಬುವರ ಮನೆಯಲ್ಲಿ ಸುಮಾರು ಐದಾರು ತಿಂಗಳಿಂದ ಬಾಡಿಗೆಗೆ ವಾಸವಿದ್ದ ತೌಫಿಲ್, ಯಾರ ಜೊತೆಗೂ ಸೇರದೆ ಒಬ್ಬನೇ ಇರುತ್ತಿದ್ದ. ಮೂರು ಅಂತಸ್ತಿನ ಕಟ್ಟಡದಲ್ಲಿ ಮೊದಲನೇ ಮಹಡಿಯಲ್ಲಿ ವಾಸವಿದ್ದ ಎಂಬುದು ಎನ್ಐಎ ಪ್ರಾಥಮಿಕ ತನಿಖೆಯಲ್ಲಿ ತಿಳಿದುಬಂದಿದೆ.

ಪ್ರವೀಣ್ ನೆಟ್ಟಾರು ಕೊಲೆ ಕೇಸ್:

2022ರ ವರ್ಷ ಜುಲೈ 26ರಂದು ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ಬೆಳ್ಳಾರೆಯಲ್ಲಿ ಬಿಜೆಪಿ ಯುವ ಮುಖಂಡ ಪ್ರವೀಣ್ ನೆಟ್ಟಾರು ಮೇಲೆ ಇಬ್ಬರು ದುಷ್ಕರ್ಮಿಗಳು ಮಾರಕಾಸ್ತ್ರದಿಂದ ಹಲ್ಲೆ ನಡೆಸಿದ್ದರು. ರಾತ್ರಿ 8 ಗಂಟೆ ಸುಮಾರಿಗೆ ಪ್ರವೀಣ್ ಬೈಕ್‌ನಲ್ಲಿ ಮನೆಗೆ ಹೊರಡಲು ಸಿದ್ದರಾಗಿದ್ದಾಗ ಬೈಕ್‌ನಲ್ಲಿ ಆಗಮಿಸಿದ ಮುಸುಕುಧಾರಿಗಳು ಮಾರಕಾಸ್ತ್ರಗಳಿಂದ ದಾಳಿ ಮಾಡಿದ್ದರು. ಗಂಭೀರವಾಗಿ ಗಾಯಗೊಂಡಿದ್ದ ಪ್ರವೀಣ್​ನನ್ನು ಕೂಡಲೇ ಆಸ್ಪತ್ರೆಗೆ ಸಾಗಿಸಲಾಗಿತ್ತು. ಆದರೆ, ಅವರು ಮಾರ್ಗಮಧ್ಯೆ ಮೃತಪಟ್ಟಿದ್ದರು.

ಬಹುಮಾನ ಘೋಷಿಸಿದ್ದ ಎನ್​ಐಎ:

ಪ್ರವೀಣ್‌ ನೆಟ್ಟಾರು ಅವರ ಹತ್ಯೆ ಪ್ರಕರಣದಲ್ಲಿ ತಪ್ಪಿಸಿಕೊಂಡಿರುವ ನಾಲ್ವರು ಆರೋಪಿಗಳ ಬಂಧನಕ್ಕೆ ನೆರವಾದರೆ ಒಟ್ಟು 14 ಲಕ್ಷ ರೂಪಾಯಿ ಬಹುಮಾನ ನೀಡುವುದಾಗಿ ಕಳೆದ ಜನವರಿ ತಿಂಗಳಿನಲ್ಲಿ ಪ್ರಕಟಿಸಿತ್ತು. ಆರೋಪಿಗಳಾದ ಸುಳ್ಯದ ಬುದು ಹೌಸ್‌ನ ಎಸ್‌. ಮುಹಮ್ಮದ್‌ ಮುಸ್ತಫಾ ಯಾನೆ ಮುಸ್ತಫ ಪೈಚಾರ್‌ ಮತ್ತು ಮಡಿಕೇರಿಯ ಎಂ.ಹೆಚ್‌. ತೌಫಿಲ್‌ ಕುರಿತು ಸುಳಿವು ನೀಡುವವರಿಗೆ ತಲಾ 5 ಲಕ್ಷ ರೂಪಾಯಿ ಹಾಗೂ ದಕ್ಷಿಣ ಕನ್ನಡ ಜಿಲ್ಲೆಯ ಕಲ್ಲುಮುಟ್ಟಲು ವೀಟಿಲ್‌ ಎಂ.ಆರ್‌.ಉಮ್ಮರ್‌ ಫಾರೂಕ್‌ ಯಾನೆ ಉಮ್ಮರ್‌, ಸಿದ್ದಿಕ್‌ ಯಾನೆ ಪೈಂಟರ್‌ ಸಿದ್ದಿಕ್‌ ಯಾನೆ ಗುಜರಿ ಸಿದ್ದಿಕ್‌ ಕುರಿತು ಮಾಹಿತಿ ನೀಡುವವರಿಗೆ ತಲಾ 2 ಲಕ್ಷ ರೂ. ನೀಡುವ ಘೋಷಣೆ ಮಾಡಲಾಗಿತ್ತು. ಈ ನಾಲ್ವರು ಆರೋಪಿಗಳು ಕೇರಳದಲ್ಲಿ ತಲೆಮರೆಸಿಕೊಂಡಿರುವ ಶಂಕೆ ಮೇಲೆ ಕಲ್ಲಿಕೋಟೆ ಜಿಲ್ಲೆಯ ವಿವಿಧೆಡೆ ಮತ್ತು ಕಾಸರಗೋಡು ಜಿಲ್ಲೆಯ ಹಲವು ಕಡೆಗಳಲ್ಲಿ ನೋಟಿಸ್‌ ಪ್ರತಿ ಅಂಟಿಸಲಾಗಿತ್ತು.

ಮತ್ತಿಬ್ಬರ ಸುಳಿವು ನೀಡಿದವರಿಗೆ ಬಹುಮಾನ:

ಪ್ರಕರಣದಲ್ಲಿ ಇತ್ತೀಚೆಗೆ ಮತ್ತಿಬ್ಬರು ಆರೋಪಿಗಳ ಬಗ್ಗೆ ಸುಳಿವು ನೀಡಿದರೆ 10 ಲಕ್ಷ ರೂ. ಬಹುಮಾನ ನೀಡುವುದಾಗಿ ಎನ್​ಐಎ ಘೋಷಿಸಿತ್ತು. ಬಂಟ್ವಾಳ ತಾಲ್ಲೂಕಿನ ಕೊಡಾಜೆಯ ಅದ್ದ ಎಂಬವರ ಮಗ, ಮೊಹಮ್ಮದ್‌ ಶರೀಫ್‌ (53) ಮತ್ತು ನೆಕ್ಕಿಲಾಡಿಯ ಅಗ್ನಾಡಿ ಅಬೂಬಕರ್ ಎಂಬವರ ಮಗ ಕೆ.ಎ.ಮಸೂದ್‌ (40) ಎಂಬವರ ಸುಳಿವು ನೀಡಿದವರಿಗೆ ತಲಾ 5 ಲಕ್ಷ ರೂ. ನಂತೆ ಒಟ್ಟು 10 ಲಕ್ಷ ರೂ. ಬಹುಮಾನ ನೀಡುವುದಾಗಿ ಹೇಳಿತ್ತು. ಇವರ ಬಂಧನಕ್ಕೆ ಎನ್‌ಐಎ ಅಧಿಕಾರಿಗಳು ಕಾರ್ಯಾಚರಣೆ ಚುರುಕುಗೊಳಿಸಿದ್ದರೂ ಸುಳಿವು ಪತ್ತೆಯಾಗದ ಹಿನ್ನೆಲೆಯಲ್ಲಿ ಬಹುಮಾನ ಘೋಷಿಸಿತ್ತು.

ದೋಷಾರೋಪಣಾ ಪಟ್ಟಿ:

ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಜನವರಿ 20ರಂದು ಎನ್‌ಐಎ ಅಧಿಕಾರಿಗಳು ಬೆಂಗಳೂರಿನ ಎನ್‌ಐಎ ವಿಶೇಷ ನ್ಯಾಯಾಲಯಕ್ಕೆ ದೋಷಾರೋಪಣಾ ಪಟ್ಟಿ ಸಲ್ಲಿಸಿದ್ದಾರೆ. 1,500 ಪುಟಗಳ ಚಾರ್ಜ್‌ಶೀಟ್‌ನಲ್ಲಿ 240 ಸಾಕ್ಷಿಗಳ ಹೇಳಿಕೆಗಳು ಒಳಗೊಂಡಿದ್ದು, ಒಟ್ಟು 20 ಆರೋಪಿಗಳ ಹೆಸರು ಉಲ್ಲೇಖವಾಗಿದೆ. ಈ ಹಿಂದಿನವರೆಗೂ 14 ಆರೋಪಿಗಳನ್ನು ಬಂಧಿಸಲಾಗಿದ್ದು, ಇತರ ಆರೋಪಿಗಳಿಗಾಗಿ ಹುಡುಕಾಟ ಚುರುಕುಗೊಂಡಿದೆ.

error: Content is protected !!