ಬೆಳ್ತಂಗಡಿ: ತಾಲೂಕಿನ 1700 ಅಡಿ ಎತ್ತರದ ಗಡಾಯಿಕಲ್ಲನ್ನು ಕೇವಲ 100 ನಿಮಿಷಗಳಲ್ಲಿ ಹತ್ತುವ ಮೂಲಕ ಜ್ಯೋತಿರಾಜ್ ಅಲಿಯಾಸ್ ಕೋತಿರಾಜ್ ಸಾಧನೆ ಮೆರೆದಿದ್ದಾರೆ. ಮೇಲೆ ತಲುಪಿದ ಬಳಿಕ ಕನ್ನಡ ಬಾವುಟ ಹಾರಿಸಿ, ಕರುನಾಡ ಮೇಲಿನ ಪ್ರೇಮ ಮೆರೆದಿದ್ದಾರೆ.
ಭಾನುವಾರ ಬೆಳಗ್ಗೆ (ಫೆ.12) ಚಂದ್ಕೂರು ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ ನಂತರ ದೇವಸ್ಥಾನದ ಮುಂಭಾಗದಿಂದ ಎರಡು ಕಿ.ಮೀ ನಡೆದುಕೊಂಡು ಹೋಗಿ ಗಡಾಯಿಕಲ್ಲು ಬುಡದಲ್ಲಿ 9.50 ಕ್ಕೆ ತೆಂಗಿನಕಾಯಿ ಒಡೆದು 1,700 ಅಡಿ ಎತ್ತರದ ನರಸಿಂಹ ಗಡ ಹತ್ತಲು ಪ್ರಾರಂಭಿಸಿದ್ದಾರೆ. ವನ್ಯಜೀವಿ ಅರಣ್ಯ ವಿಭಾಗದಿಂದ ಅನುಮತಿ ಪಡೆದು ಉತ್ತರಾಭಿಮುಖವಾಗಿ ಕೈಗಳ ಸಹಾಯದಿಂದ ಗಡಾಯಿಕಲ್ಲು ಏರಲು ಆರಂಭಿಸಿದ್ದು ಸುರಕ್ಷತೆಯ ದೃಷ್ಟಿಯಿಂದ ಸೊಂಟಕ್ಕೆ ರೋಪ್ ಅಳವಡಿಸಿಕೊಂಡಿದ್ದರು.
ಹತ್ತಲು ಸುಮಾರು 2 ಗಂಟೆ ಅವಧಿ ತೆಗೆದುಕೊಂಡಿದ್ದು, 20 ನಿಮಿಷಗಳ ವಿರಾಮವನ್ನಷ್ಟೇ ಪಡೆದುಕೊಂಡಿದ್ದಾರೆ.
ಈ ಮೂಲಕ ತಮ್ಮ ಸಾಧನೆಗೆ ಮತ್ತೊಂದು ಗರಿ ಸೇರಿಸಿಕೊಂಡಿದ್ದಾರೆ. ಜ್ಯೋತಿ ರಾಜ್ ಇನ್ನಷ್ಟು ಸಾಧನೆ ಮೆರೆಯಲಿ, ಕರುನಾಡ ಕೀರ್ತಿ ಪತಾಕೆ ಇನ್ನಷ್ಟು ಎತ್ತರಕ್ಕೆ ಹಾರಿಸಲಿ ಎಂಬುದು “ಪ್ರಜಾಪ್ರಕಾಶ ನ್ಯೂಸ್” ತಂಡದ ಹಾರೈಕೆಯಾಗಿದೆ.