ಒಂಭತ್ತು ವರ್ಷಗಳಿಂದ ನ್ಯಾಯಾಲಯಕ್ಕೆ ಹಾಜರಾಗದೆ ತಲೆಮರೆಸಿಕೊಂಡಿದ್ದ ಖತರ್‌ನಾಕ್: ಬೆಳ್ತಂಗಡಿ, ಧರ್ಮಸ್ಥಳ ಪೊಲೀಸ್ ಜಂಟಿ ಕಾರ್ಯಾಚರಣೆಯಲ್ಲಿ ಆರೋಪಿ ಬಂಧನ

ಬೆಳ್ತಂಗಡಿ : ಸುಮಾರು ಒಂಭತ್ತು ವರ್ಷಗಳಿಂದ ನ್ಯಾಯಾಲಯಕ್ಕೆ ಹಾಜರಾಗದೆ ತಲೆಮರೆಸಿಕೊಂಡಿದ್ದ ಆರೋಪಿಯನ್ನು ಧರ್ಮಸ್ಥಳ ಮತ್ತು ಬೆಳ್ತಂಗಡಿ ಪೊಲೀಸರು ಜಂಟಿಯಾಗಿ ಕಾರ್ಯಾಚರಣೆ ನಡೆಸಿ ಬಂಧಿಸಿದ್ದಾರೆ.

ಬೆಳ್ತಂಗಡಿ ತಾಲೂಕಿನ ಧರ್ಮಸ್ಥಳ ಗ್ರಾಮದ ಕನ್ಯಾಡಿ ಹಡಿಲು ನಿವಾಸಿ ಚನ್ನಪ್ಪ ಎಂಬವರ ಮಗನಾದ ಸತೀಶ್ (38) 2013ರಲ್ಲಿ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಪೋಕ್ಸೋ ಪ್ರಕರಣ ದಾಖಲಾಗಿದ್ದ ಸಂಬಂಧ ಬೆಳ್ತಂಗಡಿ ಪೊಲೀಸರು ಭದ್ರತೆಯಲ್ಲಿ ಬೆಳ್ತಂಗಡಿ ಸರಕಾರಿ ಆಸ್ಪತ್ರೆಗೆ ಮೆಡಿಕಲ್ ಮಾಡಿಸಲು ಕರೆತಂದಾಗ ಪೊಲೀಸರ ಕೈಯಿಂದ ತಪ್ಪಿಸಿಕೊಂಡಿದ್ದ. ಈ ಕುರಿತು ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಕಸ್ಟಡಿ ಪರಾರಿ ಪ್ರಕರಣ ದಾಖಲಾಗಿತ್ತು. 4 ದಿನದ ನಂತರ ಉಜಿರೆ ಸಮೀಪ ಪೊಲೀಸರ ಕೈಗೆ ಸಿಕ್ಕಿಬಿದ್ದು ಜೈಲು ಪಾಲಾಗಿದ್ದ. ಬಳಿಕ ಜಾಮೀನು ಪಡೆದುಕೊಂಡು ಹೊರಬಂದಿದ್ದ.

ಜೊತೆಗೆ ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ವರದಕ್ಷಿಣೆ ಪ್ರಕರಣ ಸಂಬಂಧ ಬೆಳ್ತಂಗಡಿ ನ್ಯಾಯಾಲಯಕ್ಕೆ ಹಾಜರಾಗದೆ ತಲೆಮರೆಸಿಕೊಂಡಿದ್ದ. ಧರ್ಮಸ್ಥಳ ಠಾಣೆಗೆ ಮತ್ತು ಬೆಳ್ತಂಗಡಿ ಪೊಲೀಸ್ ಠಾಣೆಯ ಎರಡು ಪ್ರಕರಣಕ್ಕೆ ಸಂಬಂಧಿಸಿ ಪೊಲೀಸರು ತನಿಖೆಯಲ್ಲಿದ್ದಾಗ, ಈತ ಹಾಸನ ಜಿಲ್ಲೆಯ ಅರಕಲಗೂಡು ತಾಲೂಕಿನ ಹೋನವಳ್ಳಿ ಕೊಪ್ಪಲ್ಲು ಎಂಬಲ್ಲಿ ಕೂಲಿ ಕೆಲಸ ಮಾಡಿಕೊಂಡಿರುವ ಬಗ್ಗೆ ಖಚಿತ ಮಾಹಿತಿ ಪಡೆದ ಪೊಲೀಸರು ಫೆ.14 ರಂದು ಧರ್ಮಸ್ಥಳ ಠಾಣೆಯ ಸಬ್ ಇನ್ಸ್ಪೆಕ್ಟರ್ ಅನಿಲ್ ಕುಮಾರ್.ಡಿ ಮತ್ತು ಬೆಳ್ತಂಗಡಿ ಠಾಣೆಯ ಸಬ್ ಇನ್ಸ್ಪೆಕ್ಟರ್ ಅರ್ಜುನ್ ನೇತೃತ್ವದ ಸಿಬ್ಬಂದಿ ರಾಜೇಶ್, ಬೆಳ್ತಂಗಡಿ ಠಾಣಾ ಸಿಬ್ಬಂದಿ ವ್ರಷಭ , ಬಸವರಾಜ್ ರವರು ಜಂಟಿಯಾಗಿ ಕಾರ್ಯಾಚರಣೆ ನಡೆಸಿ ಬಂಧಿಸಿ ಬೆಳ್ತಂಗಡಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ. ನ್ಯಾಯಾಲಯವು ಆರೋಪಿಗೆ ನ್ಯಾಯಾಂಗ ಬಂಧನ ವಿಧಿಸಿದೆ.

error: Content is protected !!