ಬೆಳ್ತಂಗಡಿ: ಇನ್‌ಸ್ಟಾಗ್ರಾಂ ಖಾತೆಯ ಮೂಲಕ ಬಂದ ಬೆದರಿಕೆಗೆ ಹೆದರಿ ಕಾಲೇಜ್ ವಿದ್ಯಾರ್ಥಿಯೊಬ್ಬ ಮನನೊಂದು ಆತ್ಮಹತ್ಯೆಗೆ ಶರಣಾದ ಘಟನೆ ಜ.30ರಂದು ಧರ್ಮಸ್ಥಳದ ಅಶೊಕ್ ನಗರದಲ್ಲಿ ನಡೆದಿದೆ.
ಬೆಳ್ತಂಗಡಿಯ ಖಾಸಗಿ ಕಾಲೇಜ್ ನಲ್ಲಿ 2 ನೇ ವರ್ಷದ ಬಿ.ಕಾಂ ಪದವಿ ಪಡೆಯುತ್ತಿದ್ದ ಹರ್ಷಿತ್ (19) ಎಂಬಾತನಿಗೆ ಸುಮಾರು 15 ದಿನಗಳ ಹಿಂದೆ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಓರ್ವ ಅಪರಿಚಿತ ವ್ಯಕ್ತಿಯು ಸಂಪರ್ಕಕ್ಕೆ ಬಂದಿದ್ದು ಚಾಟಿಂಗ್ ಮಾಡಿ, ಮೊಬೈಲ್ ಗೆ ವಿಡಿಯೋ ಕಾಲ್ ಮಾಡಿ ಮಾತನಾಡಿ, ನಿನ್ನ ವೈಯಕ್ತಿಕ ವಿಡಿಯೋ ನನ್ನ ಬಳಿ ಇದ್ದು, ಇದನ್ನು ಸಾರ್ವಜನಿಕವಾಗಿ ವೈರಲ್ ಮಾಡುತ್ತೇನೆ, ವಿಡಿಯೋ ವೈರಲ್ ಮಾಡಬಾರದು ಎಂದಾದರೆ ನನಗೆ 11,000/- ರೂ ಕೊಡಬೇಕೆಂದು ಬೇಡಿಕೆ ಇಟ್ಟಿದ್ದನು. ಆತನ ಬೆದರಿಕೆಗೆ ಹೆದರಿದ ಯುವಕ, ಹಣ ನೀಡಲು ಜ.23ರ ವರೆಗೆ ಸಮಯ ಕೇಳಿದ್ದು, ಆದರೆ ಹರ್ಷಿತ್ ಗೆ ಜ.24 ಮಧ್ಯಾಹ್ನದ ವರೆಗೂ ಹಣ ಹೊಂದಿಸಲು ಸಾಧ್ಯವಾಗದೇ ಇದ್ದುದರಿಂದ ಮಧ್ಯಾಹ್ನದ ನಂತರ ಇಲಿ ಪಾಷಾಣವನ್ನು ಸೇವಿಸಿದ್ದಾನೆ.
ಬಳಿಕ ಅಸ್ವಸ್ಥಗೊಂಡ ಈತನನ್ನು ಚಿಕಿತ್ಸೆಗಾಗಿ ಉಜಿರೆ ಬೆನಕ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದು, ಅಲ್ಲಿನ ವೈದ್ಯರು ಪರೀಕ್ಷಿಸಿ ಹೆಚ್ಚಿನ ಚಿಕಿತ್ಸೆ ಬಗ್ಗೆ ಮಂಗಳೂರು ವೆನ್ ಲಾಕ್ ಆಸ್ಪತ್ರೆಗೆ ಕರೆದುಕೊಂಡು ಹೋಗುವಂತೆ ತಿಳಿಸಿದ್ದಾರೆ. ಬಳಿಕ ಮಂಗಳೂರು ವೆನ್ಲಾಕ್ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಚಿಕಿತ್ಸೆ ನೀಡಲಾಗಿತ್ತು. ಆದರೆ ಯುವಕ ಚಿಕಿತ್ಸೆಗೆ ಸ್ಪಂದಿಸದೇ ಸಾವನಪ್ಪಿದ್ದಾನೆ. ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.