ಭುವನೇಶ್ವರ : ಪೊಲೀಸ್ ಅಧಿಕಾರಿಯಿಂದ ಗುಂಡಿನ ದಾಳಿಗೆ ಒಳಗಾಗಿದ್ದ ಒಡಿಶಾದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ನಬಾ ಕಿಶೋರ್ ದಾಸ್ ಸಾವನ್ನಪ್ಪಿದ ಘಟನೆ ನಡೆದಿದೆ. ಭುವನೇಶ್ವರದ ಅಪೋಲೋ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ಸ್ಪಂದಿಸದ ಸಚಿವರು ಕೊನೆಯುಸಿರೆಳೆದಿದ್ದಾರೆ.
ಇಂದು ಝಾರ್ಸುಗುಡಾ ಜಿಲ್ಲೆಯ ಗಾಂಧಿ ಚೌಕ್‌ನಲ್ಲಿ ಆರೋಗ್ಯ ಸಚಿವ ನಬಾ ದಾಸ್ ಮೇಲೆ ಎಎಸ್‌ಐ ಗುಂಡು ಹಾರಿಸಿದ್ದರು. ತಕ್ಷಣ ಅವರನ್ನು ಸ್ಥಳೀಯ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ನಂತರ ಗಂಭೀರ ಸ್ಥಿತಿಯಲ್ಲಿದ್ದ ಅವರನ್ನು ಏರ್ ಆಂಬ್ಯುಲೆನ್ಸ್ ಮೂಲಕ ಭುವನೇಶ್ವರದ ಅಪೋಲೋ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಮುಖ್ಯಮಂತ್ರಿ ನವೀನ್ ಪಟ್ನಾಯಕ್ ಸೇರಿದಂತೆ ಅನೇಕರು ಆಸ್ಪತ್ರೆಗೆ ಭೇಟಿ ನೀಡಿ ಸಚಿವರ ಆರೋಗ್ಯ ವಿಚಾರಿಸಿದ್ದರು. ಆದರೆ, ಅಪೋಲೋ ಆಸ್ಪತ್ರೆಯಲ್ಲೇ ಸಚಿವ ನಬಾ ದಾಸ್ ಕೊನೆಯುಸಿರೆಳೆದರು ಎಂದು ಅಪೋಲೋ ಆಸ್ಪತ್ರೆ ಅಧಿಕಾರಿಗಳು ತಿಳಿಸಿದ್ದಾರೆ.ಕಾರ್ಯಕ್ರಮವೊಂದರಲ್ಲಿ ಪಾಲ್ಗೊಳ್ಳಲು ಸಚಿವ ನಬಾ ಕಿಶೋರ್ ದಾಸ್ ತೆರಳುತ್ತಿದ್ದರು. ಈ ವೇಳೆ ಝಾರ್ಸುಗುಡಾ ಜಿಲ್ಲೆಯ ಬ್ರಜರಾಜನಗರದ ಗಾಂಧಿ ಛಾಕ್ ಬಳಿ ಪೊಲೀಸ್ ಸಮವಸ್ತ್ರದಲ್ಲಿದ್ದ ಎಎಸ್‌ಐ ಗೋಪಾಲ್ ದಾಸ್ ಇದ್ದಕ್ಕಿದ್ದಂತೆ ಸಚಿವರ ವಾಹನದ ಬಳಿ ಬಂದು ತಮ್ಮ ಸರ್ವಿಸ್ ರಿವಾಲ್ವರ್‌ನಿಂದ ಗುಂಡು ಹಾರಿಸಿದ್ದರು. ಪರಿಣಾಮ ಸ್ಥಳದಲ್ಲೇ ಸಚಿವರು ಕುಸಿದು ಬಿದ್ದಿದ್ದರು. ಈ ಗುಂಡಿನ ದಾಳಿಯಿಂದ ಗಂಭೀರ ಸ್ಥಿತಿಯಲ್ಲಿದ್ದ ಸಚಿವರನ್ನು ಝಾರ್ಸುಗುಡಾದಿಂದ ಭುವನೇಶ್ವರಕ್ಕೆ ಏರ್ ಲಿಫ್ಟ್ ಮಾಡಲಾಗಿತ್ತು.
ಅಪೋಲೋ ಆಸ್ಪತ್ರೆ ಮತ್ತು ಎಸ್‌ಸಿಬಿ ವೈದ್ಯಕೀಯ ಕಾಲೇಜು ಮತ್ತು ಕ್ಯಾಪಿಟಲ್ ಆಸ್ಪತ್ರೆಯ ಅತ್ಯುತ್ತಮ ತಜ್ಞರ ತಂಡವು ಸಚಿವರಿಗೆ ಚಿಕಿತ್ಸೆ ನೀಡಿ, ಆರೋಗ್ಯದ ಮೇಲೆ ನಿಗಾ ವಹಿಸಿತ್ತು. ಅಲ್ಲದೇ, ಸಚಿವರು ದಾಖಲಾಗಿದ್ದ ಅಪೋಲೋ ಆಸ್ಪತ್ರೆಗೆ ಭೇಟಿ ನೀಡಿ, ನಂತರ ಮುಖ್ಯಮಂತ್ರಿ ನವೀನ್ ಪಟ್ನಾಯಕ್ ಅವರು, ಸಚಿವ ನಬಾ ದಾಸ್ ಅವರ ಮೇಲಿನ ದಾಳಿಯು ದುರದೃಷ್ಟಕರವಾಗಿದೆ. ಈ ಘಟನೆಯಿಂದ ನಾನು ಆಘಾತಕ್ಕೊಳಗಾಗಿದ್ದೇನೆ. ಸಚಿವರ ಮೇಲಿನ ದಾಳಿಯನ್ನು ನಾನು ಬಲವಾಗಿ ಖಂಡಿಸುತ್ತೇನೆ ಎಂದು ತಿಳಿಸಿದ್ದರು.
ತನಿಖೆಗೆ ಆದೇಶ: ಸಚಿವರ ಮೇಲೆ ಗುಂಡಿನ ದಾಳಿ ಮಾಡಿದ್ದ ಎಎಸ್‌ಐ ಗೋಪಾಲ್ ದಾಸ್ ಅವರನ್ನು ತಕ್ಷಣವೇ ಪೊಲೀಸರು ತಮ್ಮ ವಶಕ್ಕೆ ಪಡೆದಿದ್ದರು. ಆದರೆ, ಹಾಲಿ ಸಚಿವರು, ಬಿಜೆಡಿಯ ಹಿರಿಯ ನಾಯಕರು ಆಗಿದ್ದ ನಬಾ ಕಿಶೋರ್ ದಾಸ್ ಮೇಲೆ ಈ ಗುಂಡಿನ ದಾಳಿ ನಡೆಸಲು ಕಾರಣವೇನು ಎಂದು ಇನ್ನೂ ತಿಳಿದು ಬಂದಿಲ್ಲ. ಮತ್ತೊಂದೆಡೆ, ಈ ಪ್ರಕರಣದ ಬಗ್ಗೆ ಸಮಗ್ರ ತನಿಖೆ ನಡೆಸುವಂತೆ ಪೊಲೀಸ್ ಅಪರಾಧ ವಿಭಾಗಕ್ಕೆ ಮುಖ್ಯಮಂತ್ರಿ ಪಟ್ನಾಯಕ್ ಆದೇಶಿಸಿದ್ದಾರೆ.
ಇನ್ನೊಂದೆಡೆ, ಹಿರಿಯ ಪೊಲೀಸ್ ಅಧಿಕಾರಿಗಳು ಮತ್ತು ಅಪರಾಧ ವಿಭಾಗದ ಅಧಿಕಾರಿಗಳಿಗೆ ಅಧಿಕಾರಿಗಳು ಘಟನಾ ಸ್ಥಳಕ್ಕೆ ವಿಧಿವಿಜ್ಞಾನ ತಂಡದೊಂದಿಗೆ ಭೇಟಿ ನೀಡಿ ತನಿಖೆ ಆರಂಭಿಸಿದ್ದಾರೆ. ಅಪರಾಧ ವಿಭಾಗದ ಎಡಿಜಿ ಅರುಣ್ ಬೋತ್ರಾ ನೇತೃತ್ವದಲ್ಲಿ ಅಧಿಕಾರಿಗಳ ತಂಡ ಬ್ರಜರಾಜನಗರಕ್ಕೆ ಘಟನೆಯ ಬಗ್ಗೆ ಮಾಹಿತಿ ಕಲೆ ಹಾಕಿ ತನಿಖೆ ಕೈಗೊಂಡಿದೆ.