ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರ ಪ್ರಕರಣ: ಕಡಿರುದ್ಯಾವರ, ಎರ್ಮಳ ಮಠದ ಆರೋಪಿಗೆ ಶಿಕ್ಷೆ ಪ್ರಕಟ: ಮಂಗಳೂರು ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದಿಂದ ಶಿಕ್ಷೆ ಜಾರಿ..

ಬೆಳ್ತಂಗಡಿ : ಅಪ್ರಾಪ್ತ ವಯಸ್ಸಿನ ಬಾಲಕಿಗೆ ಹಲವಾರು ಬಾರಿ ಲೈಂಗಿಕ ಹಿಂಸೆ ನೀಡಿದ ಬೆಳ್ತಂಗಡಿ ತಾಲೂಕಿನ ಕಡಿರುದ್ಯಾವರ ಗ್ರಾಮದ ಎರ್ಮಾಳ ಪಲ್ಕೆ ನಿವಾಸಿ ಐತಪ್ಪ ನಲಿಕೆ ಮಗನಾದ ಅಪರಾಧಿ ಬಾಬಿ (48) ಎಂಬಾತನಿಗೆ 50 ಸಾವಿರ ರೂಪಾಯಿ ದಂಡ, 20 ವರ್ಷಗಳ ಕಾರಾಗೃಹ ಶಿಕ್ಷೆಯನ್ನು ಮಂಗಳೂರು ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ವಿಧಿಸಿದೆ.

ಕಡಿರುದ್ಯಾವರ ಗ್ರಾಮದ ಎರ್ಮಳ ಮಠ ಎಂಬಲ್ಲಿ 2021 ಡಿ.19. ರಂದು ಅಪ್ರಾಪ್ತ ವಯಸ್ಸಿನ ಬಾಲಕಿ ಮೇಲೆ ಆಕೆಯ ಇಚ್ಛೆಗೆ ವಿರುದ್ಧವಾಗಿ ಹಲವಾರು ಬಾರಿ ಲೈಂಗಿಕ ಸಂಪರ್ಕ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾ. 03 2022 ರಂದು ನೀಡಿದ ದೂರಿನನ್ವಯ ಬೆಳ್ತಂಗಡಿ ಪೊಲೀಸರು ಕಲಂ 4 & 6 ಪೋಕ್ಸೋ ಕಾಯ್ದೆ & 376 ಐಪಿಸಿಯಂತೆ ಪ್ರಕರಣವನ್ನು ದಾಖಲಿಸಿಕೊಂಡಿದ್ದರು. ಬಳಿಕ ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ಅಧೀಕ್ಷಕರಾದ ಋಷಿಕೇಶ್ ಭಗವಾನ್ ಸೋನಾವಣೆ, ಐ.ಪಿ.ಎಸ್ ,ಹೆಚ್ಚುವರಿ ಪೊಲೀಸ್ ಅಧೀಕ್ಷಕರಾದ ಧರ್ಮಪ್ಪ ಮತ್ತು ಬಂಟ್ವಾಳ ಪೊಲೀಸ್ ಉಪಾಧೀಕ್ಷಕರಾದ ಪ್ರತಾಪ್ ಸಿಂಗ್ ಥೋರಾಟ್ ನಿರ್ದೇಶನದಂತೆ ಬೆಳ್ತಂಗಡಿ ಪೊಲೀಸ್ ವೃತ್ತ ನಿರೀಕ್ಷಕರಾದ ಶಿವಕುಮಾರ ಬಿ ರವರು ತನಿಖೆಯನ್ನು ನಡೆಸಿದ್ದರು. ಆರೋಪಿ ಬಾಬಿ (48) ಎಂಬಾತನನ್ನು ಬಂಧಿಸಿ ಸೂಕ್ತ ಸಾಕ್ಷ್ಯಾಧಾರಗಳನ್ನು ಸಂಗ್ರಹಿಸಿ ಆರೋಪಿಯ ವಿರುದ್ಧ ನ್ಯಾಯಾಲಯಕ್ಕೆ ದೋಷಾರೋಪಣಾ ಪತ್ರವನ್ನು ಸಲಿಸಿದ್ದರು.

ನ್ಯಾಯಾಲಯದಲ್ಲಿ ವಿಚಾರಣೆ ನಡೆದ ಬಳಿಕ ಆರೋಪಿತನ ಆರೋಪ ಸಾಬೀತಾಗಿದ್ದು, ಈ ಪ್ರಕರಣದ ವಿಚಾರಣೆ ನಡೆಸಿದ ಮಂಗಳೂರು ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಎಫ್ ಟಿ ಎಸ್ ಸಿ -2 (ಪೋಕ್ಸೋ) ಇದರ ನ್ಯಾಯಾಧೀಶರಾದ ರಾಧಾಕೃಷ್ಣರವರು ಜ.24 ರಂದು ಅಪರಾಧಿಗೆ 20 ವರ್ಷಗಳ ಕಾರಾಗೃಹ ಹಾಗೂ 50 ಸಾವಿರ ರೂಪಾಯಿ ದಂಡ ವಿಧಿಸಿದ್ದು , ದಂಡ ಹಣ ತಪ್ಪಿದಲ್ಲಿ 6 ತಿಂಗಳ ಕಠಿಣ ಕಾರಾಗೃಹ ಶಿಕ್ಷೆ ವಿಧಿಸಿ ಆದೇಶ ಹೊರಡಿಸಿದ್ದಾರೆ.

ನಾಯಾಲಯಕ್ಕೆ ದೋಷಾರೋಪಣಾ ಪತ್ರ ಸಲ್ಲಿಸಲು ಪ್ರಕರಣಗಳ ತನಿಖಾ ಸಹಾಯಕರಾಗಿ ಹೆಡ್ ಕಾನ್ಸ್ಟೇಬಲ್ ವಿಜಯಕುಮಾರ್ ರೈರವರು ಕಾರ್ಯನಿರ್ವಹಿಸಿದ್ದು, ಸರಕಾರದ ಪರವಾಗಿ ಪಬ್ಲಿಕ್ ಪ್ರಾಸಿಕ್ಯೂಟರ್ ವೆಂಕಟ್ರಮಣ ಸ್ವಾಮಿ ರವರು ನ್ಯಾಯಾಲಯದಲ್ಲಿ ವಾದಿಸಿದ್ದಾರೆ.

error: Content is protected !!