‘ಅಭಿವೃದ್ಧಿ’ ವಿಚಾರದಲ್ಲಿ ಕೈ, ಕಮಲ ನಾಯಕರ ವಾಕ್ ಸಮರ..!: ‘ರಸ್ತೆ ಕಾಮಗಾರಿ, ಚರಂಡಿ ಅಭಿವೃದ್ಧಿ ಎಂಬ ಸಣ್ಣ ವಿಷಯದ ಬಗ್ಗೆ ಮಾತನಾಡಬೇಡಿ, ಲವ್ ಜಿಹಾದ್ ವಿರುದ್ಧ ಹೋರಾಡಿ’ – ನಳಿನ್ ಕುಮಾರ್ ಕಟೀಲ್ : ‘ಈ ಡಬಲ್ ಇಂಜಿನ್ ಸರ್ಕಾರವನ್ನು ಕಾಲ ಬಂದಾಗ ಜನರು ಗುಜರಿಗೆ ಹಾಕುತ್ತಾರೆ’- ಯು.ಟಿ ಖಾದರ್

ಮಂಗಳೂರು : ಬಿಜೆಪಿಯ ಬೂತ್ ವಿಜಯ ಅಭಿಯಾನದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ನೀಡಿರುವ ಹೇಳಿಕೆಯೊಂದು ಚರ್ಚೆಗೆ ಕಾರಣವಾಗಿದ್ದು, ವಿರೋಧ ಪಕ್ಷದ ನಾಯಕರು ತಿರುಗೇಟು ನೀಡಲು ಆರಂಭಿಸಿದ್ದಾರೆ.

ಕಾರ್ಯಕ್ರಮದಲ್ಲಿ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ‘ರಸ್ತೆ ಕಾಮಗಾರಿ, ಚರಂಡಿ ಅಭಿವೃದ್ಧಿ ಎಂಬ ಸಣ್ಣ ವಿಷಯದ ಬಗ್ಗೆ ಮಾತನಾಡಬೇಡಿ, ನಿಮ್ಮ ಮಕ್ಕಳ ಬದುಕಿನ ಪ್ರಶ್ನೆಯಾಗಿರುವ ಲವ್ ಜಿಹಾದ್ ತಡೆಯಲು ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬರಬೇಕು’ ಎಂದು ಜನರ ಬಳಿ ಚರ್ಚೆಯಲ್ಲಿ ತೊಡಗುವಂತೆ ಕಾರ್ಯಕರ್ತರಿಗೆ ಕಟೀಲ್ ಕರೆ ಕೊಟ್ಟಿದ್ದರು. ಈ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ವಿಪಕ್ಷ ಉಪನಾಯಕ ಯು.ಟಿ.ಖಾದರ್ ಡಬಲ್ ಇಂಜಿನ್ ಸರ್ಕಾರದ ಇಂಧನದಲ್ಲಿ ಕಮ್ಯುನಲ್ ಫ್ಯೂಲ್ ತುಂಬಿಕೊಂಡಿದೆ. ಸೈಲೆನ್ಸರ್‌ನ ಹೊಗೆಯಲ್ಲಿ ವಿಷವಿದೆ. ಇಂಜಿನ್ ಮತ್ತು ಬಾಡಿಯಲ್ಲಿ ಜನಸಾಮಾನ್ಯರ ರಕ್ತ ತುಂಬಿಕೊಂಡಿದೆ, ಈ ಡಬಲ್ ಇಂಜಿನ್ ಸರ್ಕಾರವನ್ನು ಕಾಲ ಬಂದಾಗ ಜನರು ಗುಜರಿಗೆ ಹಾಕುತ್ತಾರೆ’ ಎಂದು ಟೀಕಿಸಿದ್ದಾರೆ. ಜೊತೆಗೆ ಚರಂಡಿ ಅಭಿವೃದ್ಧಿ, ಗುಂಡಿ ಮುಚ್ಚುವಂತಹ ಅಭಿವೃದ್ಧಿ ಕೆಲಸ ಮಾಡುವ ಅರ್ಹತೆ ಮತ್ತು ಯೋಗ್ಯತೆ ಬಿಜೆಪಿ ಸರ್ಕಾರಕ್ಕೆ ಇಲ್ಲ. ಇಷ್ಟು ವರ್ಷದಲ್ಲಿ ಅವರು ಅಭಿವೃದ್ಧಿ ಕೆಲಸ ಮಾಡಿಲ್ಲ. ಕುಚ್ಚಲಕ್ಕಿ ತರಲು ಸಿಎಂಗೆ ಮನವಿ ಕೊಟ್ಟದ್ದೇ ಬಂತು. ಜನರಿಗೆ ರೇಷನ್ ಕಾರ್ಡ್ ಕೊಡುವ ಯೋಗ್ಯತೆ ಇಲ್ಲ. ಅಭಿವೃದ್ಧಿ ಕೆಲಸ ಮಾಡುವ ಸ್ವಭಾವವಿಲ್ಲ. ಇವರು ಜನರನ್ನು ದಾರಿ ತಪ್ಪಿಸುವ ಕೆಲಸ ಮಾಡುತ್ತಿದ್ದು, ಜನರಿಗೆ ಇದೀಗ ಎಲ್ಲಾ ಅರ್ಥವಾಗಿದೆ’ ಎಂದರು.

‘ಗೋವುಗಳ ಬಗ್ಗೆ ಭಾರಿ ಮಾತನಾಡಿದವರು ಗೋವುಗಳ ಅಭಿವೃದ್ಧಿಗೆ ಶ್ರಮಿಸಿಲ್ಲ. ಸೇವೆ ಕೊಡುವ ಹೆಸರಿನಲ್ಲಿ ಲೂಟಿ ಹೊಡೆದಿದ್ದಾರೆ. ಪಶು ವೈದ್ಯರುಗಳು ನಿವೃತ್ತಿಯಾದರೂ ಹೊಸ ನೇಮಕಾತಿ ಮಾಡಿಲ್ಲ. ಸರಿಯಾದ ಸಮಯದಲ್ಲಿ ಚಿಕಿತ್ಸೆ ನೀಡದೆ 21 ಸಾವಿರ ಹಸುಗಳು ಸಾವನ್ನಪ್ಪಿದೆ. ಈಗ 14 ಲಕ್ಷ ಹಸುಗಳು ಕಡಿಮೆಯಾಗಿದೆ. ಅವರು ಉತ್ತರ ಕೊಡುವ ಪರಿಸ್ಥಿತಿಯಲ್ಲಿ ಇಲ್ಲ. ಹೈನುಗಾರಿಕೆ ಕಡಿಮೆಯಾಗುತ್ತಿದೆ. ಈ ಹಿಂದೆ 8 ಲಕ್ಷ ಲೀಟರ್ ಹಾಲು ಉತ್ಪಾದನೆ ಆಗುತ್ತಿದ್ದರೆ, ಈಗ 7 ಲಕ್ಷದ 20 ಸಾವಿರಕ್ಕೆ ಇಳಿದಿದೆ. ಗೋ ಸಂತತಿ ಜಾಸ್ತಿ ಮಾಡಲು ಏನು ಕ್ರಮ ಕೈಗೊಂಡಿಲ್ಲ. ಕೇವಲ ಭಾವನಾತ್ಮಕ ವಿಚಾರದ ಬಗ್ಗೆ ಮಾತನಾಡುತ್ತಾರೆ ಎಂದಿದ್ದಾರೆ.

error: Content is protected !!