ಸ್ಟೇಟ್ ಬ್ಯಾಂಕ್ – ಧರ್ಮಸ್ಥಳ ಮಧ್ಯೆ ಪದೇ ಪದೇ ಕೆಟ್ಟು ನಿಲ್ಲುವ ಕೆ.ಎಸ್.ಆರ್.ಟಿ.ಸಿ ಬಸ್ಸುಗಳು: ಬಸ್ ತಾಪತ್ರೆಗೆ ಪ್ರಯಾಣಿಕರು ಗರಂ..!: ಮಂಗಳೂರು- ಧರ್ಮಸ್ಥಳದ ನಡುವೆ ಡಕೋಟಾ ಬಸ್ ಗಳದ್ದೇ ಓಡಾಟ..?

ಬೆಳ್ತಂಗಡಿ : ಧರ್ಮಸ್ಥಳ ಕೆ.ಎಸ್.ಆರ್.ಟಿ.ಸಿ ಡಿಪೋದಿಂದ ಹೊರಡುವ ಧರ್ಮಸ್ಥಳ -ಸ್ಟೇಟ್ ಬ್ಯಾಂಕ್ ಬಸ್ ಗಳು ಆಗಾಗ ರಾಷ್ಟ್ರೀಯ ಹೆದ್ದಾರಿ ಮಧ್ಯೆ ಕೆಟ್ಟು ನಿಲ್ಲುತ್ತಿದ್ದು ಡಿ.28ರಂದು ಮಧ್ಯಾಹ್ನ ಮತ್ತೆ ಪುಂಜಾಲಕಟ್ಟೆ ಸಮೀಪ ಬಸ್ ಕೈಕೊಟ್ಟು ಪ್ರಯಾಣಿಕರು ಪರದಾಡುವಂತಾಯಿತು.

ಸ್ಟೇಟ್ ಬ್ಯಾಂಕ್ ನಿಂದ ಧರ್ಮಸ್ಥಳಕ್ಕೆ ಬರುತ್ತಿದ್ದ ಕೆಎಸ್ ಆರ್ ಟಿ ಸಿ ಬಸ್ ಪುಂಜಾಲಕಟ್ಟೆಯಲ್ಲಿ ಕೆಟ್ಟು ನಿಂತು ಪ್ರಯಾಣಿಕರು ಬಸ್ಸಿನಿಂದ ಇಳಿದು ಗಂಟೆಗಟ್ಟಲೆ ಕಾಯುವಂತಾಯಿತು. ಮಂಗಳೂರು-ಧರ್ಮಸ್ಥಳ ರಾಷ್ಟ್ರೀಯ ಹೆದ್ದಾರಿಯ ಮಧ್ಯೆ ಕೆಎಸ್ ಆರ್ ಟಿಸಿ ಬಸ್ಸು ಬಾಕಿಯಾಗುವ ಇಂಥ ಸಮಸ್ಯೆ ಪದೇ ಪದೇ ನಡೆಯುತ್ತಿದ್ದು ಇಲಾಖಾಧಿಕಾರಿಗಳ ನಿರ್ಲಕ್ಷ್ಯವೇ ಇದಕ್ಕೆ ಕಾರಣವೆಂಬ ಆರೋಪ ನೊಂದ ಪ್ರಯಾಣಿಕರಿಂದ ಕೇಳಿ ಬರುತ್ತಿದೆ.


ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಇಲಾಖೆಯ ಅಧಿಕಾರಿಗಳು ಧರ್ಮಸ್ಥಳ-ಸ್ಟೇಟ್ ಬ್ಯಾಂಕ್ ಮಧ್ಯೆ ಹಳೆಯ ಬಸ್ಸುಗಳನ್ನೇ ಹೆಚ್ಚಾಗಿ ರಾಷ್ಟ್ರೀಯ ಹೆದ್ದಾರಿಗೆ ಇಳಿಸುತ್ತಿದ್ದು ಚಿಕ್ಕಮಗಳೂರು ಕಡೆಗೆ ಹೊಸ ಬಸ್ಸುಗಳನ್ನು ಬಿಡುತ್ತಿದ್ದು ಯಾರದೋ ರಾಜಕೀಯ ಒತ್ತಡಕ್ಕೆ ಮಣಿದು ಅಧಿಕಾರಿಗಳು ಇಂಥ ತಾರತಮ್ಯ ಮಾಡುತ್ತಿದ್ದಾರೆ ಎಂಬ ದೂರುಗಳು ಕೇಳಿ ಬರುತ್ತಿದೆ. ಬಹುತೇಕ ಆಗಾಗ ಕೆಟ್ಟು ನಿಲ್ಲುವ ಬಸ್ಸುಗಳೇ ಮಂಗಳೂರು – ಧರ್ಮಸ್ಥಳ ರಾಷ್ಟ್ರೀಯ ಹೆದ್ದಾರಿ ಮಧ್ಯೆ ಓಡಾಡುತ್ತಿದ್ದು ಪ್ರಯಾಣಿಕರ ಆಕ್ರೋಶಕ್ಕೆ ಕಾರಣವಾಗಿದೆ.

error: Content is protected !!