‘ಶೂಲ’ವಾದ ಸಾಲ, 9 ತಿಂಗಳ ಬಳಿಕ ಪ್ರಕರಣ ಬೆಳಕಿಗೆ: ನಡುಕ ಹುಟ್ಟಿಸುತ್ತೆ ಶರತ್ ಭೀಕರ ಕೊಲೆ ಸ್ಟೋರಿ: ಸುಳಿವು ನೀಡಿದ ಪತ್ರ, ದೃಶ್ಯ ಹೊಂದಿದ್ದ ಪೆನ್ ಡ್ರೈವ್: ಸಾಲ ಕಟ್ಟದ ಯುವಕನಿಗೆ ಕೈ, ಕಾಲು ಕಟ್ಟಿ ಟಾರ್ಚರ್, ಚಾರ್ಮಾಡಿ ಘಾಟಿಯಲ್ಲಿ ಶವ ಎಸೆದ ಶಂಕೆ..?

 

ಬೆಂಗಳೂರು: ಆ ಯುವಕನ ಕೊಲೆಗೆ ಕಾರಣವಾಗಿದ್ದು ಸಾಲ…! ಬೆಂಗಳೂರಿನ ಕೋಣನಕುಂಟೆ ನಿವಾಸಿ ಶರತ್ ಎಂಬಾತ ಸಾಲ ಪಡೆದು ಹಿಂತಿರುಗಿಸದೆ ಓಡಾಡುತ್ತಿದ್ದ. ಇದರಿಂದ ರೊಚ್ಚಿಗೆದ್ದ ಗ್ಯಾಂಗ್ ಶರತ್ ನನ್ನು ಕಿಡ್ನಾಪ್ ಮಾಡಿ ಕೊಲೆ ಮಾಡಿದ್ದಾರೆ.

ಈ ಕೊಲೆಯ‌ ಹಿಂದೆ ಇರೋ‌ ಮುಖ್ಯ ಕಾರಣ ವಂಚನೆ. ಕೊಲೆಯಾದ ಎಚ್ ಶರತ್ ಚಿಕ್ಕಬಳ್ಳಾಪುರ ಹಾಗೂ ಯಲಹಂಕ ನಿವಾಸಿಗಳಿಂದ ಲಕ್ಷಾಂತರ ರೂಪಾಯಿ ಹಣ ಪಡೆದು ಸಬ್ಸಿಡಿ ದರದಲ್ಲಿ ಸರ್ಕಾರದಿಂದ ಕಾರು ಕೊಡಿಸುವುದಾಗಿ ನಂಬಿಸಿದ್ದ. ಆದರೆ ಕಾರು ಕೊಡಿಸದೆ ಅಲ್ಲಿನ‌ ಜನರಿಗೆ ವಂಚಿಸಿದ. ಹೀಗಾಗಿ ಆತನ ವಿರುದ್ಧ ತಿರುಗಿ ಬಿದ್ದ ಗ್ರಾಹಕರು ಎಚ್ ಶರತ್ ವಿರುದ್ಧ ವಂಚನೆ ಪ್ರಕರಣ ದಾಖಲಿಸಿದ್ದರು. ಅಷ್ಟೇ ಅಲ್ಲದೆ ಚಿಕ್ಕಬಳ್ಳಾಪುರದ ಕರ್ನಾಟಕ ರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷ ಎಚ್ .ಜಿ ವೆಂಕಟಾಜಲಪತಿ ಅವರ ಬಳಿ ಹಣ ಕೊಡಿಸುವಂತೆ ಜನ ಕೇಳಿಕೊಂಡಿದ್ದಾರೆ. ಜನರ‌ ಮನವಿ‌ ಕೇಳಿ ವೆಂಕಟಾಜಲಪತಿ ತನ್ನ ಮಗನಾದ ಎ.ವಿ ಶರತ್ ಗೆ ಹಣ ವಸೂಲಿ ಮಾಡುವಂತೆ ಹೇಳಿದ್ದ. ಇಲ್ಲಿಂದ ಶರತ್ ಕಿಡ್ನಾಪ್ ಆ್ಯಂಡ್ ಮರ್ಡರ್ ಪ್ಲಾನ್ ಆರಂಭವಾಯಿತು.

ಎ.ವಿ ಶರತ್ ಹಾಗೂ ಆತನ‌ ಸ್ನೇಹಿತರು ಜೊತೆಗೆ ಹಣ ಪಡೆದುಕೊಂಡ ಕೆಲವರು ಸೇರಿ ಶರತ್‌ನನ್ನು ಕಿಡ್ನಾಪ್ ಮಾಡಿ ಆತನ ಮೊಬೈಲ್ ನಿಂದಲೇ ಯುವಕನ ತಂದೆ ತಾಯಿಗೆ ಗ್ಯಾಂಗ್‌ನವರು ‘ನಾನು ದುಡಿಯಲು ಹೋಗುತ್ತಿದ್ದೇನೆ ಹುಡುಕಬೇಡಿ ಎಂದು ಮೆಸೇಜ್’ ಹಾಕಿ ಬಳಿಕ ಮೊಬೈಲನ್ನು ಲಾರಿ ಮೇಲೆ ಎಸೆದಿದ್ದಾರೆ. ಲಾರಿ ಮೈಸೂರು ಮಾರ್ಗವಾಗಿ ಸಾಗಿ ಹೊರರಾಜ್ಯಕ್ಕೆ ಪ್ರಯಾಣವಾಗಿದ್ದು ಬಳಿಕ ಮೊಬೈಲ್ ಸ್ವಿಚ್‌ಆಫ್ ಆಗಿದೆ. ಇಷ್ಟರಲ್ಲಿ ಶರತ್‌ನನ್ನು ಬನಶಂಕರಿಯಿಂದ ಅಪಹರಿಸಿದ ಗ್ಯಾಂಗ್ ಚಿಕ್ಕಬಳ್ಳಾಪುರದ ಗೌರಿಬಿದನೂರಿನ ವಾಟದ ಹೊಸಹಳ್ಳಿಯ ಮಾವಿನ ತೋಟದ ಮನೆಯಲ್ಲಿ ಬಂಧನದಲ್ಲಿ ಇಡಲಾಗಿತ್ತು. ಬಳಿಕ ಆತನಿಗೆ ನೀಡಿದ ಚಿತ್ರಹಿಂಸೆ ನೋಡಿದ್ರೆ ಎಂತವರಿಗಾದ್ರ ಒಮ್ಮೆ ನಡುಕ ಹುಟ್ಟಿಸುತ್ತೆ.

ಶರತ್‌ನನ್ನು ಅರೆ ನಗ್ನಗೊಳಿಸಿ ಕೈ, ಕಾಲು ಕಟ್ಟಿ ಮನಸೋ ಇಚ್ಚೆ ಥಳಿಸಿದ್ದಾರೆ. ಒಂದು ಕಾಲು 2 ಕೈಯನ್ನು ಮರಕ್ಕೆ ಕಟ್ಟಿ ಹೊಡೆದಿದ್ದಾರೆ. ನರರಾಕ್ಷಸರ ಚಿತ್ರಹಿಂಸೆಯ ಅಟ್ಟಹಾಸಕ್ಕೆ ಯುವಕ ಕೊನೆಯುಸಿರೆಳೆದಿದ್ದಾನೆ. ಕೊಲೆಯಾದ ಶರತ್‌ನನ್ನು ಚಾರ್ಮಾಡಿ ಘಾಟ್‌ನಲ್ಲಿ ಎಸೆದು ಯಾರಿಗೂ ಶವದ ಸುಳಿವು ಸಿಗದಂತೆ ಮಾಡಿದ್ದರು. ಆರಂಭದಲ್ಲಿ ಈ ಕೇಸ್ ದಾಖಲಿಸಿಕೊಳ್ಳಲು ಪೊಲೀಸರು ಹಿಂದೇಟು ಹಾಕಿದ್ದು ಬಳಿಕ ಖತರ್ನಾಕ್ ಐಡಿಯಾ ಮೂಲಕ ಗ್ಯಾಂಗ್ ಈ ಮರ್ಡರ್ ಕೇಸ್‌ನ್ನು ಕ್ಲೋಸ್ ಮಾಡಿದ್ದರು. ಸದ್ಯ ಕಬ್ಬನ್ ಪಾರ್ಕ್ ಪೊಲೀಸರು 5 ಮಂದಿ ಆರೋಪಿಗಳನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿಸುತ್ತಿದ್ದಾರೆ.

ಈ ಕಿಡ್ನಾಪ್, ಕೊಲೆ 9 ತಿಂಗಳ ಹಿಂದೆಯೇ ನಡೆದಿದೆ. ಆದರೆ ಪ್ರಕರಣ ನಡೆದು ಕೆಲವು ತಿಂಗಳ ನಂತರ ಕೇಂದ್ರ ವಿಭಾಗದ ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಗೆ ಬಂದ ಪತ್ರ ಹಾಗೂ ಚಿತ್ರಹಿಂಸೆ ನೀಡಿದ ದೃಶ್ಯದ ಪೆನ್ ಡ್ರೈವ್ ಕೊಲೆಯ ಸುಳಿವು ನೀಡಿದೆ.‌ ಬಳಿಕ‌ ಪೊಲೀಸರು ವಿಶೇಷ ತಂಡ ರಚಿಸಿ ರಹಸ್ಯ ಕಾರ್ಯಾಚರಣೆ ನಡೆಸಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಚಿಕ್ಕಬಳ್ಳಾಪುರದ ಕರ್ನಾಟಕ ರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷ ಎಚ್ .ಜಿ ವೆಂಕಟಾಜಲಪತಿ, ಎ.ವಿ ಶರತ್, ಆರ್.‌ಶ್ರೀಧರ್, ಕೆ.ಧನುಷ್, ಯಲಹಂಕದ ಎಂ.ಪಿ ಮಂಜುನಾಥ್ ರವರನ್ನು ಪೊಲೀಸರು ಬಂಧಿಸಿದ್ದಾರೆ.‌

ಶವವನ್ನು ಚಾರ್ಮಾಡಿ ಘಾಟ್‌ನಲ್ಲಿ ಬಿಸಾಕಿದ ಚಾರ್ಮಾಡಿ ಘಾಟ್‌ನ ಸ್ಥಳ ಯಾವ ಠಾಣಾ ವ್ಯಾಪ್ತಿಗೆ ಬರುತ್ತದೆ ಎಂದು ಖಚಿತವಾಗಿಲ್ಲದ ಕಾರಣ ಡಿ.28 ಅಥವ 29 ರಂದು ಬೆಂಗಳೂರು ಪೊಲೀಸರು ಆರೋಪಿಗಳನ್ನು ಸ್ಥಳಕ್ಕೆ ಕರೆತಂದು ಶವದ ಹುಡುಕಾಟ ನಡೆಸಲಿದ್ದಾರೆ.

error: Content is protected !!