ಬೆಳ್ತಂಗಡಿ : ದಲಿತ ನಾಯಕ, ಹಿರಿಯ ಸಾಹಿತಿ ಪಿ ಡೀಕಯ್ಯರವರ ಸಾವಿನ ಬಳಿಕ ಕುಟುಂಬಸ್ಥರು ಸಾಕಷ್ಟು ಅನುಮಾನ ವ್ಯಕ್ತಪಡಿಸಿದ್ದು , ತನಿಖೆ ನಡೆಸುವಂತೆ ಪೊಲೀಸರಿಗೆ ದೂರು ನೀಡಿದ್ದರು. ಆದರೆ ಪೊಲೀಸರು ಸರಿಯಾಗಿ ತನಿಖೆ ನಡೆಸುತ್ತಿಲ್ಲ ಎಂಬ ಕಾರಣಕ್ಕೆ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಿ ಪ್ರಕರಣದ ಬಗ್ಗೆ ತನಿಖೆ ಸರಿಯಾಗಿ ನಡೆಯುತ್ತಿಲ್ಲ ಎಂದು ತಿಳಿಸಿ ಸಿಐಡಿ ತನಿಖೆಗಾಗಿ ಒತ್ತಾಯಿಸಿದ್ದರು. ಇದಿಗ ಸಿಐಡಿ ತಂಡ ಬೆಳ್ತಂಗಡಿ ಆಗಮಿಸಿದೆ.
ಕಳೆದ ಜುಲೈ 6 ರಂದು ಮನೆಯಲ್ಲಿ ಒಬ್ಬಂಟಿಯಾಗಿದ್ದ ಸಂದರ್ಭದಲ್ಲಿ ಪಿ ಡೀಕಯ್ಯ ರವರು ಕುಸಿದು ಬಿದ್ದು ಬಳಿಕ ಮಣಿಪಾಲದ ಕೆಎಂಸಿ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದರು. ಆಸ್ಪತ್ರೆಯಲ್ಲಿರುವಾಗ ತಲೆಯ ಹಿಂದೆ ಗಾಯವಾಗಿದ್ದನ್ನು ಕಂಡು ಡೀಕಯ್ಯರವರ ಕುಟುಂಬಸ್ಥರು ಅನುಮಾನ ವ್ಯಕ್ತಪಡಿಸಿದ್ದರು.
ಜುಲೈ 8 ರಂದು ಡೀಕಯ್ಯರು ನಿಧನರಾಗಿದ್ದು ಬಳಿಕ ಮನೆಯವರ ಒಪ್ಪಿಗೆಯಂತೆ ಅಂಗಾಂಗಗಳ ದಾನ ಮಾಡಿ, ಜುಲೈ 9 ರಂದು ಬೆಳ್ತಂಗಡಿಯಲ್ಲಿ ಸಾರ್ವಜನಿಕ ದರ್ಶನದ ಬಳಿಕ ಬೌದ್ಧ ಧರ್ಮದ ಪ್ರಕಾರ ಹುಟ್ಟೂರು ತಾಲೂಕಿನ ಕಣಿಯೂರು ಗ್ರಾಮದ ಪೊಯ್ಯದಲ್ಲಿ ಧಪನ ಕಾರ್ಯ ನಡೆದಿತ್ತು.
ಆದರೆ ಜುಲೈ 15 ರಂದು ಪಿ ಡೀಕಯ್ಯ ಅವರ ಮನೆಯವರು ಸಾವಿನ ಬಗ್ಗೆ ಸಂಶಯ ವ್ಯಕ್ತಪಡಿಸಿ ಬೆಳ್ತಂಗಡಿ ಪೋಲಿಸ್ ಠಾಣೆಗೆ ದೂರು ನೀಡಿದ್ದು , ಜುಲೈ 18 ರಂದು ಬೆಳ್ತಂಗಡಿ ತಹಶೀಲ್ದಾರ್ ಅವರ ನೇತೃತ್ವದಲ್ಲಿ ಶವವನ್ನು ಹೊರತೆಗೆದು ಜಿಲ್ಲೆಯ ವೈದ್ಯಕಾರಿಗಳ ತಂಡದ ಜೊತೆಗೆ ಶವ ಪರೀಕ್ಷೆ ಮಾಡಲಾಗಿತ್ತು .
ಘಟನೆಯ ಬಗ್ಗೆ ವಿಸ್ತೃತ ತನಿಖೆ ನಡೆಸಿದ ಬೆಳ್ತಂಗಡಿ ಪೋಲಿಸರು ಮನೆಯವರ ದೂರಿನ ಆಧಾರದಲ್ಲಿ ತನಿಖೆ ನಡೆಸಿ ಹಲವರನ್ನು ತನಿಖೆಗೆ ಒಳಪಡಿಸಿದರು. ಈ ಮಧ್ಯೆ ಡೀಕಯ್ಯ ಅವರು ಕುಟುಂಬಸ್ಥರು ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಿ ಪ್ರಕರಣದ ಬಗ್ಗೆ ತನಿಖೆ ಸರಿಯಾಗಿ ನಡೆಯುತ್ತಿಲ್ಲ ಎಂದು ಸಿಐಡಿ ತನಿಖೆಗೆ ಒತ್ತಾಯಿಸಿದ್ದರು. ಹೀಗಾಗಿ ನವೆಂಬರ್ 4 ರಂದು ಘಟನೆಯ ಬಗ್ಗೆ ರಾಜ್ಯ ಸರ್ಕಾರ ಸಿಐಡಿ ತನಿಖೆಗೆ ಆದೇಶಿಸಿತ್ತು.
ಸರ್ಕಾರದ ಆದೇಶದಂತೆ ಸಿಐಡಿಯ ಇನ್ಸ್ಪೆಕ್ಟರ್ ಶಿವರಾಜ್ ತಂಡದ ಮೂವರು ಪೊಲೀಸರು ಡಿ.22 ರಂದು ಬೆಂಗಳೂರಿನಿಂದ ಬೆಳ್ತಂಗಡಿ ಪೊಲೀಸ್ ಠಾಣೆಗೆ ಆಗಮಿಸಿ ಸಬ್ ಇನ್ಸ್ಪೆಕ್ಟರ್ ನಂದ ಕುಮಾರ್ ಅವರಿಂದ ಮಾಹಿತಿ ಪಡೆದು ತನಿಖೆಗೆ ಆರಂಭಿಸಿದ್ದಾರೆ. ಮಂಗಳೂರಿನ ಎಫ್ ಎಸ್ ಎಲ್ ತಂಡದ ಜೊತೆ ಗರ್ಡಾಡಿ ಮನೆ ಪರಿಶೀಲನೆಯಲ್ಲಿ ನಡೆಸಿದ್ದಾರೆ.