ಸಿಪಿಐ(ಎಂ) ಬೆಳ್ತಂಗಡಿ ತಾಲೂಕು ಸಮಿತಿ ಮಾಜಿ ಸದಸ್ಯ ಪರಮೇಶ್ವರನ್ ನಾಯರ್  ನಿಧನ..!: ಮೃತದೇಹ ಮೆಡಿಕಲ್ ಕಾಲೇಜ್ ಗೆ ದಾನ..!

ಬೆಳ್ತಂಗಡಿ: ಕೇರಳ ರಾಜ್ಯದ ಹಿರಿಯ ಕಮ್ಯೂನಿಸ್ಟ್‌ ನಾಯಕರೊಂದಿಗೆ ನಿಕಟ ಸಂಬಂಧ ಹೊಂದಿದ್ದ ,
ಭಾರತ ಕಮ್ಯೂನಿಸ್ಟ್‌ ಪಕ್ಷ (ಮಾರ್ಕ್ಸ್‌ವಾದಿ)- ಸಿಪಿಐ(ಎಂ) ಬೆಳ್ತಂಗಡಿ ತಾಲೂಕು ಸಮಿತಿ ಮಾಜಿ ಸದಸ್ಯ , ಕರ್ನಾಟಕ ಪ್ರಾಂತ ರೈತ ಸಂಘದ ಮಾಜಿ ಅಧ್ಯಕ್ಷ ಪರಮೇಶ್ವರನ್ ನಾಯರ್ (84) ಇಂದು ಬೆಳಗ್ಗೆ ಲಾಯಿಲ ಜ್ಯೋತಿ ಆಸ್ಪತ್ರೆಯಲ್ಲಿ ನಿಧನರಾದರು.

ಮೂಲತಃ ಕೇರಳದವರಾಗಿದ್ದು , ಸರ್ಕಾರಗಳ ಜನ ವಿರೋಧಿ ನೀತಿಗಳ ಬಗ್ಗೆ ಜನಸಾಮಾನ್ಯರಿಗೆ ಅಚ್ಚುಕಟ್ಟಾಗಿ ತಿಳಿಸುತ್ತಾ , ಹೋರಾಟಕ್ಕೆ ಸಹಕಾರ ನೀಡುವಂತೆ ಪ್ರೇರಣೆ ನೀಡುತ್ತಿದ್ದುದರ ಜೊತೆಗೆ ಜನಸಾಮಾನ್ಯರ ಸಮಸ್ಯೆಗಳ ಬಗ್ಗೆ ಆಳವಾದ ಅಧ್ಯಯನ ಮಾಡಿ , ಅದಕ್ಕೆ ಕಾರಣ ಮತ್ತು ಪರಿಹಾರವನ್ನು ಕಂಡುಹಿಡಿಯುತ್ತಿದ್ದರು.ಅರಳಿ ಸೌಜನ್ಯ ನಗರದ ಭೂ ಹೋರಾಟ ಸೇರಿದಂತೆ ಹಲವಾರು ರೈತರ ಹೋರಾಟದ ನೇತೃತ್ವವನ್ನು ವಹಿಸಿದ್ದರು. ಕಳೆದ 30 ವರ್ಷಗಳಿಂದ ಕಳೆಂಜ ಗ್ರಾಮದ ಕೋಡಿಕುಲತ್ ಎಂಬಲ್ಲಿ ವಿವಿಧ ಕೃಷಿ ಚಟುವಟಿಕೆಗಳನ್ನು ನಡೆಸಿಕೊಂಡಿದ್ದರು. ಹೋರಾಟ, ಜನರೊಂದಿಗಿನ ಒಡನಾಟದ ಮೂಲಕ ನಾಯರ್ ಅವರು ಜನಸಾಮಾನ್ಯರ ಮೆಚ್ಚುಗೆ ಗಳಿಸಿದ್ದರು.


ಸಾವಿನ ಮೊದಲೇ ತನ್ನ ಮೃತದೇಹವನ್ನು ಯಾವುದಾದರೂ ಮೆಡಿಕಲ್ ಕಾಲೇಜ್ ವಿದ್ಯಾರ್ಥಿಗಳಿಗಾಗಿ ದಾನ ಮಾಡಬೇಕು ಎಂದು ಮಕ್ಕಳಲ್ಲಿ ತಿಳಿಸಿದ್ದರು. ಹೀಗಾಗಿ ಅವರ ಇಚ್ಛೆಯಂತೆ ಮೃತದೇಹದ ಅಂತಿಮ ದರ್ಶನದ ಬಳಿಕ ಸಂಜೆ ಮೃತದೇಹವನ್ನು ಮಂಗಳೂರಿನ ಫಾ. ಮುಲ್ಲರ್ಸ್ ಮೆಡಿಕಲ್ ಕಾಲೇಜ್ ಗೆ ದಾನ ಮಾಡಲಾಗುತ್ತದೆ ಎಂದು ಸಿಪಿಐ(ಎಂ) ಪಕ್ಷದ ಬೆಳ್ತಂಗಡಿ ತಾಲೂಕು ಸಮಿತಿ ಕಾರ್ಯದರ್ಶಿ, ನ್ಯಾಯವಾದಿ ಶಿವಕುಮಾರ್ ಎಸ್. ಎಂ ತಿಳಿಸಿದ್ದಾರೆ.

ಬೆಳ್ತಂಗಡಿ ತಾಲೂಕಿನ ಹಲವಾರು ರೈತ ಚಳವಳಿಗೆ ನೇತೃತ್ವ ವಹಿಸಿದ್ದ ನಾಯರ್ ಅವರು ಪಕ್ಷದ ತತ್ವ ಸಿದ್ದಾಂತಗಳ ಬಗ್ಗೆ ಅಪಾರ ಜ್ಞಾನ ಹೊಂದಿದ್ದರು. ಪಕ್ಷದ ಕಾರ್ಯಕರ್ತರನ್ನು ಉತ್ತಮ ರೀತಿಯಲ್ಲಿ ಗೌರವಿಸುತ್ತಿದ್ದರು. ಅವರ ನಿಧನದಿಂದ ಎಡಪಂಥೀಯ , ಪ್ರಗತಿಪರ ಚಳವಳಿಗೆ ತುಂಬಲಾರದ ನಷ್ಟ ಉಂಟಾಗಿದೆ ಎಂದು ಪಕ್ಷದ ತಾಲೂಕು ಸಮಿತಿ ಕಾರ್ಯದರ್ಶಿ, ನ್ಯಾಯವಾದಿ ಶಿವಕುಮಾರ್ ಎಸ್.ಎಂ , ಮುಖಂಡರಾದ ಜಯಂತಿ ನೆಲ್ಲಿಂಗೇರಿ , ವಸಂತ ನಡ , ಸುಕನ್ಯಾ ಹರಿದಾಸ್ , ರೋಹಿಣಿ ಪೆರಾಡಿ , ಸುಜೀತ್ ಉಜಿರೆ , ಶೇಖರ್ ಲಾಯಿಲ ಬೇಸರ ವ್ಯಕ್ತಪಡಿಸಿದ್ದಾರೆ.

ಮೃತರು ಪತ್ನಿ ಮಲ್ಲಿಕಾ , ಮಗ ಮಧುಸೂದನ್ , ಮಗಳು ಸೂರ್ಯಗಾಯತ್ರಿ ಸೇರಿದಂತೆ ಅಪಾರ ಸಂಖ್ಯೆಯ ಅಭಿಮಾನಿಗಳನ್ನು ಅಗಲಿದ್ದಾರೆ.

error: Content is protected !!