ಬ್ರಹ್ಮಕಲಶೋತ್ಸವದ ಸಿದ್ಧತೆಯಲ್ಲಿ ಅಳದಂಗಡಿ ಶ್ರೀ ಮಹಾಗಣಪತಿ ದೇವಸ್ಥಾನ: ಡಾl ಪದ್ಮಪ್ರಸಾದ ಅಜಿಲರ ಅಧ್ಯಕ್ಷತೆಯಲ್ಲಿ ಪೂರ್ವಭಾವಿ ಸಭೆ

ಬೆಳ್ತಂಗಡಿ: ಅಳದಂಗಡಿ ಶ್ರೀ ಮಹಾಗಣಪತಿ ದೇವಸ್ಥಾನದ ಬ್ರಹ್ಮಕಲಶೋತ್ಸವ ಫೆಬ್ರುವರಿ ಮೊದಲ ವಾರದಲ್ಲಿ ನಡೆಯಲಿದ್ದು, ಬ್ರಹ್ಮಕಲಶೋತ್ಸವ ಸಮಿತಿ ರಚನೆಗಾಗಿ, ಪೂರ್ವಭಾವಿಯಾಗಿ ಡಿ.11 ರಂದು ಸಾರ್ವಜನಿಕ ಸಭೆಯು ದೇವಸ್ಥಾನದ ವಠಾರದಲ್ಲಿ ನಡೆಯಿತು.

ಜೀರ್ಣೋದ್ಧಾರ ಸಮಿತಿ ಗೌರವಾಧ್ಯಕ್ಷ ಅಳದಂಗಡಿ ಅರಮನೆಯ ಡಾl ಪದ್ಮಪ್ರಸಾದ ಅಜಿಲ ಅವರ ಅಧ್ಯಕ್ಷತೆಯಲ್ಲಿ ಸಭೆ ನಡೆದಿದ್ದು, ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷರಾಗಿ ಶಾಸಕ ಹರೀಶ್ ಪೂಂಜ ಅವರನ್ನು ಆಯ್ಕೆ ಮಾಡಲಾಯಿತು. ಕಾರ್ಯಾಧ್ಯಕ್ಷ ರಾಗಿ ಸದಾನಂದ ಪೂಜಾರಿ ಉಂಗಿಲಬೈಲು, ಪ್ರಧಾನ ಕಾರ್ಯದರ್ಶಿಗಾಗಿ ಸಂತೋಷ್ ಕಾಪಿನಡ್ಕ, ಸ್ವಾಗತ ಸಮಿತಿ ಅಧ್ಯಕ್ಷರಾಗಿ ಶಿವಪ್ರಸಾದ ಅಜಿಲ ಅವರು ಆಯ್ಕೆಮಾಡಲಾಯಿತು.

ಈ ಸಂದರ್ಭದಲ್ಲಿ ಸಭೆಯನ್ನುದ್ದೇಶಿಸಿ ಮಾತನಾಡಿದ ಶಾಸಕರು, ಯಾವುದೇ ಜಾತಿ, ಮತ, ಪಕ್ಷ ಬೇಧವಿಲ್ಲದೆ ಶ್ರೀ ಮಹಾಗಣಪತಿಯ ಸೇವೆಯನ್ನು ಮಾಡೋಣ. ಹೊರೆಕಾಣಿಕೆ, ಅನ್ನದಾನ ಸೇವೆಯ ಬಗ್ಗೆ ಹೆಚ್ಚಿನ ಗಮನ ಹರಿಸುವಂತಾಗಬೇಕು ಎಂದರು.

ನಾವೂರು ಶ್ರೀಗೋಪಾಲಕೃಷ್ಣ ದೇವಸ್ಥಾನ ಟ್ರಸ್ಟ್ ಅಧ್ಯಕ್ಷ ಡಾl ಪ್ರದೀಪ್ ನಾವೂರು ಬ್ರಹ್ಮಕಲಶೋತ್ಸವವನ್ನು ಯಶಸ್ವಿಯಾಗಿ, ಮಾದರಿಯಾಗಿ ಹೇಗೆ ನೆರವೇರಿಸಬಹುದು, ನಮ್ಮೆಲ್ಲರ ನಡವಳಿಕೆ ಹೇಗಿರಬೇಕು ಎಂಬುದನ್ನು ಪ್ರವಚನದ ಮೂಲಕ‌‌ ವಿವರಿಸಿದರು.

ಸಭೆಯಲ್ಲಿ ಪ್ರಧಾನ ಅರ್ಚಕ ಸೋಮನಾಥ ಮಯ್ಯ, ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಡಾl ಶಶಿಧರ ಡೋಂಗ್ರೆ, ಎಸ್.ಕೆ.ಡಿ.ಆರ್.ಡಿ.ಪಿ. ಗುರುವಾಯನಕೆರೆ ಯೋಜನಾಧಿಕಾರಿ ಯಶವಂತ್ ಉಪಸ್ಥಿತರಿದ್ದರು.

ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಗಂಗಾಧರ ಸ್ವಾಗತಿಸಿದರು. ಜೀರ್ಣೋದ್ಧಾರ ಸಮಿತಿ ಪ್ರಧಾನ ಕಾರ್ಯದರ್ಶಿ ನಿತ್ಯಾನಂದ ಶೆಟ್ಟಿ ನೊಚ್ಚ ವಂದಿಸಿದರು. ಪ್ರಕಾಶ್ ಶೆಟ್ಟಿ ನೊಚ್ಚ ಕಾರ್ಯಕ್ರಮ ನಿರ್ವಹಿಸಿದರು.

error: Content is protected !!