ಬೆಳ್ತಂಗಡಿ:ನೇತ್ರಾವತಿ ಬಚಾವೋ ಆಂದೋಲನ ಸಮಿತಿ, ಬೆಳ್ತಂಗಡಿ ತಾಲೂಕು ಇದರ ವತಿಯಿಂದ ಡಿಸೆಂಬರ್ 18,19 ಮತ್ತು 20 ರಂದು ಮುಂಡಾಜೆ ಯಿಂದ ಉಪ್ಪಿನಂಗಡಿ ವರೆಗೆ ನಡೆಯಲಿರುವ ‘ನೇತ್ರಾವತಿ ಬಚಾವೋ ಪಾದಯಾತ್ರೆ’ ಯ ಪೂರ್ವಭಾವಿ ಸಭೆಯು ನ 26 ಶನಿವಾರ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಲಾಭವನದಲ್ಲಿ ನಡೆಯಿತು. ಸಭೆಯ ಅಧ್ಯಕ್ಷತೆಯನ್ನು ಸಮಿತಿಯ ಪ್ರಧಾನ ಸಂಚಾಲಕ , ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ರಕ್ಷಿತ್ ಶಿವರಾಂ ವಹಿಸಿದ್ದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು ” ನಮ್ಮ ಜಿಲ್ಲೆಯ ಜೀವನದಿ ನೇತ್ರಾವತಿ ನದಿಯ ಮೇಲೆ ಮರಳು ದರೋಡೆಕೋರರಿಂದ ವ್ಯವಸ್ಥಿತವಾಗಿ ಅತ್ಯಾಚಾರ ನಡೆಯುತ್ತಿರುವ ವಿಚಾರ ತಮಗೆಲ್ಲ ತಿಳಿದಿದ್ದು ಇದನ್ನು ನೋಡಿಯೂ ಸುಮ್ಮನಿರುವುದು ಸರಿಯಲ್ಲ. ಇದರ ವಿರುದ್ಧ ಹೋರಾಟ ನಡೆಸುವುದು ನಮ್ಮ ಕರ್ತವ್ಯ ಎಂದರು. ಅದೇ ರೀತಿ ತಾಲೂಕಿನಲ್ಲಿ 40% ಕಮಿಷನ್, ಭೃಷ್ಟಾಚಾರ, ಸರಕಾರಿ ಭೂಮಿಯಿಂದ ಮರ ಕಳ್ಳತನ, ಅಕ್ರಮ-ಸಕ್ರಮ ಯೋಜನೆಯ ಕಡತ ಮಂಜೂರಾತಿಯಲ್ಲಿ ವ್ಯಾಪಕ ಭ್ರಷ್ಟಾಚಾರ, ಪಕ್ಷಪಾತ, ಕಸ್ತೂರಿರಂಗನ್ ವರದಿ ಜಾರಿಗೆ ನಡೆಸುತ್ತಿರುವ ಹುನ್ನಾರದ ವಿರುದ್ದ, ಕುದುರೆಮುಖ ರಾಷ್ಟ್ರೀಯ ಉದ್ಯಾನವನವಾಸಿಗಳಿಗೆ ಮೂಲಭೂತ ಸೌಕರ್ಯಗಳಿಗಾಗಿ ಅಗ್ರಹಿಸಿ ಈ ಹೋರಾಟ ನಡೆಯಲಿದೆ ಎಂದರು. ಇದೊಂದು ತಾಲೂಕಿನ ಐತಿಹಾಸಿಕ ಹೋರಾಟ , ಈ ಹೋರಾಟ ಇತಿಹಾಸದ ಪುಟಗಳಲ್ಲಿ ದಾಖಲಾಗಲಿದೆ ಎಂದ ಅವರು ಈ ಕಾಲ್ನಡಿಗೆ ಜಾಥವನ್ನು ಯಶಸ್ವಿಗೊಳಿಸಲು ಗ್ರಾಮ ಗ್ರಾಮಗಳಲ್ಲಿ ದುಡಿಯುವ ಅಗತ್ಯವಿದೆ ಎಂದರು. ಹೋರಾಟ ಜನಪ್ರತಿನಿಧಿಗಳ ಮುಂದಾಳತ್ವದಲ್ಲಿ ನಡೆಯುವ ಅಕ್ರಮ ಚಟುವಟಿಕೆಗಳ ವಿರುದ್ದ ಹೊರತು ಬೇರೆ ಯಾವುದೇ ಉದ್ದೇಶದಿಂದ ಅಲ್ಲ ಎಂದರು.
ವೇದಿಕೆಯಲ್ಲಿ ಸಮಿತಿಯ ಸಂಚಾಲಕರುಗಳಾದ ಮಾಜಿ ಜಿಲ್ಲಾ ಪಂಚಾಯತ್ ಸದಸ್ಯರುಗಳಾದ ಶೇಖರ್ ಕುಕ್ಕೇಡಿ , ಕೆ.ಕೆ ಶಾಹುಲ್ ಹಮೀದ್ , ಧರಣೇಂದ್ರ ಕುಮಾರ್ ಮತ್ತು ನಮೀತಾ ಪೂಜಾರಿ ಉಪಸ್ಥಿತರಿದ್ದರು.
ನ್ಯಾಯವಾದಿ ಮನೋಹರ ಕುಮಾರ್,ಇಳಂತಿಲ ಕಾರ್ಯಕ್ರಮ ನಿರ್ವಹಿಸಿದರು.