ಬೆಳ್ತಂಗಡಿ : ಸ್ಯಾಟಲೈಟ್  ಕಾಲ್ ಸದ್ದು ಹಿನ್ನೆಲೆ ಧರ್ಮಸ್ಥಳ ಪೊಲೀಸರಿಂದ ಅರಣ್ಯ ಪ್ರದೇಶದಲ್ಲಿ ಚುರುಕುಗೊಂಡ ತನಿಖೆ ಸ್ಥಳೀಯರಿಂದ ಮಾಹಿತಿ ಸಂಗ್ರಹ

 

 

ಬೆಳ್ತಂಗಡಿ : ಮಂಗಳೂರಿನಲ್ಲಿ ಶಂಕಿತ ಉಗ್ರ ಶಾರೀಕ್ ನಿಂದ ಆಟೋದಲ್ಲಿ ಕುಕ್ಕರ್ ಬಾಂಬ್ ಸ್ಫೋಟ ನಡೆಸಿದ ಹಿಂದಿನ ದಿನ ಬೆಳ್ತಂಗಡಿಯ ಬೆಂದ್ರಾಳದಲ್ಲಿ ನಿಷೇಧಿತ ಸ್ಯಾಟಲೈಟ್ (ತುರಾಯ) ಫೋನ್ ಹೋಗಿರುವುದು ಬೆಳಕಿಗೆ ಬಂದಿದೆ.‌ಈ ಹಿನ್ನಲೆ ಧರ್ಮಸ್ಥಳ ಪೊಲೀಸರು ಬೆಂದ್ರಾಳ ಪ್ರದೇಶದಲ್ಲಿ ತನಿಖೆಯನ್ನು ಮತ್ತಷ್ಟು ಚುರುಕುಗೊಳಿಸಿದ್ದಾರೆ.

ಧರ್ಮಸ್ಥಳ ಪೊಲೀಸರು ಹಾಗೂ ಮಂಗಳೂರು ಆಂತರಿಕ ಭದ್ರತಾ ಇಲಾಖೆಯ ಇನ್ಸ್ಪೆಕ್ಟರ್ ಚಿಂದನಂದ್ ಮತ್ತು ತಂಡ ಶುಕ್ರವಾರ ಬೆಳ್ತಂಗಡಿ ತಾಲೂಕಿನ ತೋಟತ್ತಾಡಿ ಗ್ರಾಮದ ಬೆಂದ್ರಾಳ ಪ್ರದೇಶಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು. ಇಂದು ಮತ್ತೆ ಧರ್ಮಸ್ಥಳ ಪೊಲೀಸ್ ಠಾಣೆಯ ಪಿಎಸ್ಐ ಅನಿಲ್ ಕುಮಾರ್ ಡಿ ಮತ್ತು ತಂಡ ತೋಟತ್ತಾಡಿ ಗ್ರಾಮದ ಬಾರೆಮನೆ ನಿವಾಸಿಗಳಾದ ರುಕ್ಮಯ ಗೌಡ ಮನೆ ಮತ್ತು ಚೆಲುವಮ್ಮ ಮನೆಯಲ್ಲಿ ಮಾಹಿತಿ ಸಂಗ್ರಹಿಸಿ ಬೆಂದ್ರಾಳ ಸುತ್ತಮುತ್ತಲಿನ ಸುಮಾರು ಐದು ಕಿಮೀ ಅರಣ್ಯ ಪ್ರದೇಶದೊಳಗೆ ಹುಡುಕಾಟ ನಡೆಸಿ ನಂತರ ಸ್ಯಾಟಲೈಟ್ ಕರೆ ಹೋದ ಸ್ಥಳಕ್ಕೆ ಹೋಗಿ ಪರಿಶೀಲನೆ ನಡೆಸಿದ್ದಾರೆ.

ನವಂಬರ್ 18 ರಂದು ನಿಷೇಧಿತ ಸ್ಯಾಟಲೈಟ್ ಫೋನ್(ತುರಾಯ) ಕರೆ ಹೋಗಿರುವ ಬಗ್ಗೆ ಕೇಂದ್ರ RAW ಅಧಿಕಾರಿಗಳಿಗೆ ಮಾಹಿತಿ ಲಭಿಸಿದ ಕಾರಣ ಆಂತರಿಕ ಭದ್ರತಾ ಇಲಾಖೆ ಹಾಗೂ ಸ್ಥಳೀಯ ಪೊಲೀಸರಿಗೆ ತನಿಖೆ ಮಾಡಲು ಮಾಹಿತಿ ರವಾನಿಸಿದ್ದಾರೆ.

ಸಾಟಲೈಟ್ ಕರೆ ಹೋದ ಪ್ರದೇಶಕ್ಕೆ ಧರ್ಮಸ್ಥಳ ಪೊಲೀಸ್ ಠಾಣೆಯ ಪಿಎಸ್ಐ ಅನಿಲ್ ಕುಮಾರ್ ಡಿ ನೇತೃತ್ವದಲ್ಲಿ ಸಿಬ್ಬಂದಿಗಳಾದ ಮಹಮ್ಮದ್ ಅಸ್ಲಾಮ್ , ಪ್ರಶಾಂತ್ , ರಾಜೇಶ್ ತೆರಳಿ ತನಿಖೆ ಚುರುಕುಗೊಳಿಸಿದ್ದಾರೆ. ಸ್ಥಳೀಯರಾದ ಮೋಹನ್ ಗೌಡ, ಉಮೇಶ್.ಬಿ , ಸತೀಶ್ ಬಳ್ಳಿ , ಕಾರ್ತಿಕ್ ಪೊಲೀಸರಿಗೆ ಸಹಕರಿಸಿದ್ದಾರೆ.

error: Content is protected !!