ಬೆಳ್ತಂಗಡಿ : ಸರಕಾರಿ ಬಸ್- ಬೊಲೆರೋ ವಾಹನಕ್ಕೆ ಡಿಕ್ಕಿ ಹೊಡೆದು ಓರ್ವ ಸಾವನ್ನಪ್ಪಿ ಏಳು ಜನರಿಗೆ ಗಾಯಗೊಂಡ ಪ್ರಕರಣ ಸಂಬಂಧ ಸರಕಾರಿ ಬಸ್ ಚಾಲಕನಿಗೆ ಮೂರ್ಛೆ ರೋಗ ಬಂದಿದ್ದರಿಂದ ನಿಯಂತ್ರಣ ಕಳೆದುಕೊಂಡು ಅವಘಡ ಸಂಭವಿಸಿರುವುದು ಬೆಳಕಿಗೆ ಬಂದಿದೆ. ಇದೆ ವೇಳೆ ನಿರ್ವಾಹಕನಿಂದ ದೊಡ್ಡ ಅನಾಹುತ ತಪ್ಪಿದೆ.
ಮಂಡ್ಯ ಜಿಲ್ಲೆಯ ಹತ್ತು ಮಂದಿ ನಿನ್ನೆ ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ಬಂದಿದ್ದರು. ಬೊಲೋರೊದಲ್ಲಿ ಶಿಶಿಲ ಮತ್ತು ಸೌತಡ್ಕ ದೇವಸ್ಥಾನಕ್ಕೆ ಹೋಗಿ ವಾಪಸ್ ಧರ್ಮಸ್ಥಳಕ್ಕೆ ಬರುವಾಗ ಬೆಳ್ತಂಗಡಿ ತಾಲೂಕಿನ ನಿಡ್ಲೆ ಗ್ರಾಮದ ಕುದ್ರಾಯ ಬಳಿ ರಸ್ತೆ ಪಕ್ಕ ಇದ್ದ ಅಂಗಡಿಗೆ ಹೋಗಲು ವಾಹನ ನಿಲ್ಲಿಸಿದ್ದರು. ಈ ವೇಳೆ ಮೈಸೂರು ಗ್ರಾಮಾಂತರ ಜಿಲ್ಲೆಯ ಪಿರಿಯಾಪಟ್ಟಣ ಡಿಪೋಗೆ ಸೇರಿದ ಬಸ್ ಉಡುಪಿಯಿಂದ ಮೈಸೂರಿಗೆ 16 ಮಂದಿ ಪ್ರಯಾಣಿಕರೊಂದಿಗೆ ಬರುತ್ತಿದ್ದ ಸಂದರ್ಭದಲ್ಲಿ ಸರಕಾರಿ ಬಸ್ ಏಕಾಏಕಿ ಅಂಗಡಿಗೆ, ವಿದ್ಯುತ್ ಕಂಬಕ್ಕೆ, ಬಳಿಕ ಬೊಲೋರೊ ವಾಹನಕ್ಕೆ ಹಾಗೂ ಜನರಿಗೆ ಡಿಕ್ಕಿ ಹೊಡೆದು ಬಲಭಾಗಕ್ಕೆ ತಿರುಗಿದೆ. ಈ ವೇಳೆ ಚಾಲಕನ ಬಳಿಗೆ ನಿರ್ವಾಹಕ ಪ್ರಕಾಶ್ ಬಂದು ನೋಡಿದಾಗ ಚಾಲಕ ಸ್ಟೇರಿಂಗ್ ಮೇಲೆ ಮೂರ್ಛೆ ತಪ್ಪಿ ಬಿದ್ದಿದ್ದರು. ತಕ್ಷಣ ನಿರ್ವಾಹಕ ಎಡಭಾಗಕ್ಕೆ ಸ್ಟೇರಿಂಗ್ ತಿರುಗಿಸಿದ್ದು, ಪ್ರಯಾಣಿಕರೊಬ್ಬರು ಬಂದು ಹ್ಯಾಡ್ ಬ್ರೇಕ್ ಹಾಕಿ ನಿಲ್ಲಿಸಿದ್ದಾರೆ. ಒಂದು ವೇಳೆ ನಿರ್ವಾಹಕ ಪ್ರಕಾಶ್ ಎಚ್ಚೆತ್ತುಕೊಳ್ಳದಿದ್ದಾರೆ ಬಸ್ ಬಲಭಾಗದಲ್ಲಿದ್ದ ನೆರಿಯ ಹೊಳೆಗೆ ಬಿದ್ದು ದೊಡ್ಡ ಅನಾಹುತ ಸಂಭವಿಸುತ್ತಿತ್ತು.
ಘಟನೆಯಲ್ಲಿ ಬೊಲೋರೊ ವಾಹನದಿಂದ ಇಳಿದ್ದಿದ್ದ ಮಂಡ್ಯ ಜಿಲ್ಲೆಯ ಓರ್ವ ಸಾವನ್ನಪ್ಪಿದ್ದು ಏಂಟು ಮಂದಿಗೆ ಗಾಯವಾಗಿದೆ. ಗಾಯಾಳುಗಳನ್ನು ಉಜಿರೆ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಸರಕಾರಿ ಬಸ್ ಚಾಲಕ ಕುಶಲನಗರದ ನಿವಾಸಿ ವಿಜಯಕುಮಾರ್(43) ಮಂಗಳೂರು ಆಸ್ಪತ್ರೆಗೆ ದಾಖಲಿಸಲಾಗಿದ್ದು ಚಿಕಿತ್ಸೆ ಪಡೆಯುತ್ತಿದ್ದಾರೆ. ಘಟನೆ ಬಗ್ಗೆ ಬೆಳ್ತಂಗಡಿ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.