ಬೆಳ್ತಂಗಡಿ: ಇತಿಹಾಸ ಪ್ರಸಿದ್ಧ ತಾಲೂಕಿಗೆ ಮುಕುಟಪ್ರಾಯದಂತಿರುವ ನಡ ಗ್ರಾಮದ ನರಸಿಂಹ ಗಡ ಗಡಾಯಿಕಲ್ಲು ಪ್ರವಾಸಿಗರ ಆಕರ್ಷಣೆಯ ಕೇಂದ್ರವಾಗಿದೆ. ದಿನದಿಂದ ದಿನೇ ಇಲ್ಲಿಗೆ ಬರುವ ಪ್ರವಾಸಿಗರ ಸಂಖ್ಯೆ ಅಷ್ಟಿಷ್ಟಲ್ಲ.ಇದು ರಾಷ್ಟ್ರೀಯ ಉದ್ಯಾನವನದ ವ್ಯಾಪ್ತಿಯೊಳಗೆ ಬರುವುದರಿಂದ ಬರುವ ಪ್ರವಾಸಿಗರಿಗೆ ಮಕ್ಕಳಿಗೆ 25 ದೊಡ್ಡವರಿಗೆ 50 ರೂ ದರವನ್ನು ಇಲಾಖೆ ನಿಗದಿ ಪಡಿಸಿದೆ. ಅದರೆ ಇಲ್ಲಿ ಮಾತ್ರ ಹಣದ ಅವ್ಯವಹಾರ ನಡೆಯುತ್ತಿದೆ ಎಂದು ಸಾರ್ವಜನಿಕರು ಹಾಗೂ ಪ್ರವಾಸಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ.ಪ್ರವಾಸಿಗರು ಎಷ್ಟು ಬಂದರೂ ಬೆರಳೆಣಿಕೆಯ ಲೆಕ್ಕಚ್ಚಾರ ಮಾತ್ರ ಸರ್ಕಾರಕ್ಕೆ ನೀಡಲಾಗುತ್ತಿದೆ.ಉಳಿದಂತೆ ಹಣವನ್ನು ಇಲ್ಲಿ ಇರುವ ಅಧಿಕಾರಿಗಳು ಜೇಬಿಗಿಳಿಸಿಕೊಳ್ಳುತಿದ್ದಾರೆ. ಯಾವುದೇ ಮೂಲಭೂತ ಸೌಕರ್ಯ ಇಲ್ಲ ಇದರಿಂದ ಪ್ರವಾಸಿಗರಿಗೆ ಅದರಲ್ಲೂ ಮಹಿಳೆಯರಿಗೆ ತೊಂದರೆಯಾಗುತ್ತಿದೆ ಸಮರ್ಪಕವಾದ ಶೌಚಾಲಯ ಕುಡಿಯುವ ನೀರು ಇಲ್ಲ ಇದರ ಬಗ್ಗೆ ತಲೆಕೆಡಿಸದ ಇಲಾಖೆ ದುಡ್ಡು ಮಾತ್ರ ಸಾರ್ವಜನಿಕರಿಂದ ವಸೂಲಿ ಮಾಡುತ್ತಿದೆ. ಅದರಲ್ಲೂ ಸರ್ಕಾರಕ್ಕೆ ವಂಚಿಸಿ ರಶೀದಿ ನೀಡದೇ ಪ್ರವಾಸಿರಿಗೆ ಮೋಸ ಮಾಡಲಾಗುತ್ತಿದೆ.ಈ ಬಗ್ಗೆ ಪ್ರಶ್ನಿಸಿದರೆ ಅಧಿಕಾರಿಗಳು ಉಡಾಫೆ ಉತ್ತರ ನೀಡುತ್ತಾರೆ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದರು.
ಈ ಬಗ್ಗೆ ಸ್ಥಳೀಯರು ಶಾಸಕ ಹರೀಶ್ ಪೂಂಜ ಅವರಿಗೆ ಮಾಹಿತಿ ನೀಡಿದ್ದಾರೆ ಅವರು ತಕ್ಷಣ ಸ್ಥಳಕ್ಕೆ ಬೇಟಿ ನೀಡಿ ಪರಿಶೀಲಿಸಿದಾಗ ಮೇಲ್ನೋಟಕ್ಕೆ ಟಿಕೇಟ್ ನೀಡದೆ ಹಣ ಪಡೆದಿರುವುದು ಅವರ ಗಮನಕ್ಕೆ ಬಂದ್ದ ಹಿನ್ನೆಲೆಯಲ್ಲಿ ಮೇಲಾಧಿಕಾರಿಗಳಿಗೆ ಪೋನ್ ಮೂಲಕ ಸಂಪರ್ಕಿಸಿ ತರಾಟೆಗೆ ತೆಗೆದುಕೊಂಡು ಬರುವಂತಹ ಪ್ರವಾಸಿಗರಿಗೆ ಯಾವುದೇ ರೀತಿಯಲ್ಲೂ ಸಮಸ್ಯೆ ಆಗಬಾರದು ವಸೂಲಿ ದಂಧೆ ಹಾಗೂ ಸರ್ಕಾರಕ್ಕೆ ವಂಚಿಸುವ ತಪಿತಸ್ಥ ಅಧಿಕಾರಿಗಳ ವಿರುದ್ಧ ಸರಿಯಾದ ಕ್ರಮ ಕೈಗೊಂಡು ಅಮಾನತು ಮಾಡುವಂತೆ ಆಗ್ರಹಿಸಿದರಲ್ಲದೇ ಸ್ಥಳಕ್ಕೆ ತಕ್ಷಣ ಬಂದು ಪರಿಶೀಲಿಸುವಂತೆ ಸೂಚನೆ ನೀಡಿದರು.
ಸ್ಥಳಕ್ಕೆ ವನ್ಯಜೀವಿ ವಿಭಾಗದ ಬೆಳ್ತಂಗಡಿ ವಲಯ ಆರ್.ಎಫ್.ಓ ಸ್ವಾತಿ ಅವರು ಭೇಟಿ ನೀಡಿ ಪರಿಶೀಲಿಸಿದರು ಈ ಸಂದರ್ಭದಲ್ಲಿ ಸಾರ್ವಜನಿಕರು ಹಾಗೂ ಸ್ಥಳೀಯರು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು ಫಾರೆಸ್ಟ್ ಅವರು ಉಡಾಫೆ ರೀತಿಯಲ್ಲಿ ಮಾತನಾಡುತ್ತಾರೆ. ಬೆದರಿಕೆಗಳನ್ನು ಹಾಕುತ್ತಾರೆ ಎಂದು ದೂರು ನೀಡಿದರು. ಅದಲ್ಲದೇ ಬಂದ ಪ್ರವಾಸಿಗರ ಕೈಯಿಂದ ದುಡ್ಡು ಪಡೆದುಕೊಂಡಿದ್ದಾರೆ ಯಾವುದೇ ರಶೀದಿ ನೀಡುವುದಿಲ್ಲ ರಜಾ ದಿನಗಳಂದು ನೂರಕ್ಕಿಂತಲೂ ಅಧಿಕ ಮಂದಿ ವೀಕ್ಷಣೆಗಾಗಿ ಬರುತ್ತಾರೆ.ಅದರೆ ಟಿಕೇಟ್ ಮಾತ್ರ ಸೀಮಿತ ಜನರಿಗೆ ನೀಡಲಾಗುತ್ತದೆ. ಅದೇ ರೀತಿ ಕಿರಣ್ ಪಾಟೇಲ್ ಎಂಬ ಮಹಿಳಾ ಫಾರೆಸ್ಟರ್ ಸ್ಥಳೀಯರಲ್ಲಿ ಉಡಾಫೆಯಾಗಿ ಮಾತನಾಡುವುದಲ್ಲದೇ ಬೆದರಿಕೆಯನ್ನು ಒಡ್ಡುತಿದ್ದಾರೆ ಎಂದು ಆರೋಪಿಸಿದರು. ಜೊತೆಗೆ ಒಂದು ವೇಳೆ ಮುಂದಿನ ದಿನಗಳಲ್ಲಿ ವ್ಯವಸ್ಥೆಗಳು ಸರಿ ಪಡಿಸದೇ ಇದ್ದಲ್ಲಿ ಅಧಿಕಾರಿಗಳ ವಿರುದ್ಧ ಹೋರಾಟದ ಎಚ್ಚರಿಕೆಯನ್ನೂ ಸಾರ್ವಜನಿಕರು ನೀಡಿದರು.
ಈ ಬಗ್ಗೆ ಪ್ರತಿಕ್ರಿಯಿಸಿದ ಅರಣ್ಯಾಧಿಕಾರಿ ಸ್ವಾತಿ ಅವರು ಪರಿಶೀಲನೆ ನಡೆಸಿ ತಪ್ಪು ಎಸಗಿದ್ದರೆ ಅವರ ಮೇಲೆ ಶಿಸ್ತು ಕ್ರಮ ಕೈಗೊಳ್ಳಲಾಗುತ್ತದೆ. ಅದೇ ರೀತಿ ಮೂಲಭೂತ ಸೌಕರ್ಯ ಕಲ್ಪಿಸುವ ದೃಷ್ಟಿಯಿಂದ ಮೇಲಾಧಿಕಾರಿಗಳ ಗಮನಕ್ಕೆ ತರಲಾಗುವುದು ಎಂದರು.
ಕೇವಲ ಗಡಾಯಿಕಲ್ಲು ಮಾತ್ರವಲ್ಲದೆ ಎಳನೀರು ಹಾಗೂ ಇನ್ನಿತರ ಫಾಲ್ಸ್ ಸೇರಿದಂತೆ ಬೆಳ್ತಂಗಡಿ ತಾಲೂಕಿನ ಇತರೆ ಅರಣ್ಯ ಇಲಾಖೆ ವ್ಯಾಪ್ತಿಗೊಳಪಟ್ಟ ಚಾರಣ ತಾಣಗಳಲ್ಲಿ ಅರಣ್ಯಾಧಿಕಾರಿಗಳಿಂದ ಹಗಲು ದರೋಡೆ ನಡೆಯುತ್ತಿದೆ ಎಂಬ ಆರೋಪ ಕೇಳಿಬರುತ್ತಿದೆ. ತಮ್ಮ ತಪ್ಪಿದ್ದರೂ ಅರಣ್ಯಾಧಿಕಾರಿಗಳು ಸಾರ್ವಜನಿಕರ ಜೊತೆ ವಾದಕ್ಕಿಳಿಯುತ್ತಿದ್ದಾರೆ. ಈ ಬಗ್ಗೆ ಸಂಬಂಧಪಟ್ಟ ಮೇಲಾಧಿಕಾರಿಗಳು ಪರಿಶೀಲಿಸಿ ಸೂಕ್ತ ಕ್ರಮ ಕೈಗೊಂಡು ಪ್ರವಾಸಿಗರ ಹಾಗೂ ಚಾರಣಿಗರ ಹಿತ ಕಾಪಾಡಬೇಕಿದೆ.