ಬೆಳ್ತಂಗಡಿ: ಕೊರಗಜ್ಜ ಚಲನಚಿತ್ರದ ಶೂಟಿಂಗ್ ನಲ್ಲಿರುವ ನಟಿ ಶೃತಿ ಉಜಿರೆಯಲ್ಲಿರುವ ಶ್ರೀ ಧರ್ಮಸ್ಥಳ ಸಿರಿ ಗ್ರಾಮೋದ್ಯೋಗ ಸಂಸ್ಥೆಯ ಪ್ರಧಾನ ಕಛೇರಿಗೆ ಇಂದು ಭೇಟಿ ನೀಡಿದರು. ಸಿರಿ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕರಾದ ಕೆ.ಎನ್ ಜನಾರ್ಧನರವರು ಚಿತ್ರ ನಟಿಯನ್ನು ಸ್ವಾಗತಿಸಿ, ಬಳಿಕ ಸಂಸ್ಥೆಯ ಕಿರು ಪರಿಚಯ ಮಾಡಿಕೊಟ್ಟರು.
ಈ ವೇಳೆ ಮಾತನಾಡಿದ ನಟಿ ಶೃತಿ ‘ಪೂಜ್ಯ ಹೆಗ್ಗಡೆಯವರ ಹಾಗೂ ಮಾತೃಶ್ರೀ ಅಮ್ಮನವರ ಕನಸಿನ ಕೂಸಾಗಿರುವ ಈ ಸಿರಿ ಸಂಸ್ಥೆ, ಪ್ರತೀಯೋರ್ವ ಮಹಿಳೆಗೂ ಸ್ವಾವಲಂಬನೆಯ ಬದುಕು ನೀಡಿ ಸುಖೀ ಜೀವನ ನಡೆಸಲು ಸ್ಪೂರ್ತಿಯಾಗಿದೆ. ಪ್ರತೀ ಯಶಸ್ವೀ ಪುರುಷನ ಹಿಂದೆ ಓರ್ವ ಮಹಿಳೆ ಇದ್ದಾಳೆ ಎಂಬ ಗಾದೆ ಮಾತು ಇಲ್ಲಿ ಸುಳ್ಳಾಗಿದೆ. ಇಲ್ಲಿನ ಪ್ರತೀ ಮಹಿಳೆಯ ಯಶಸ್ಸಿನ ಹಿಂದೆ ಒಬ್ಬ ಪುರುಷ ಇದ್ದಾರೆ. ಅದು ಡಾ.ಡಿ ವೀರೇಂದ್ರ ಹೆಗ್ಗಡೆಯವರು. ಸಿರಿ ಸಂಸ್ಥೆ ಇನ್ನಷ್ಟು ಎತ್ತರಕ್ಕೆ ಬೆಳೆಯಲಿ, ಪೂಜ್ಯ ದಂಪತಿಗಳ ಆಸರೆಯಲ್ಲಿ ಸಹಸ್ರಾರು ಮಹಿಳೆಯರ ಬಾಳು ಬೆಳಗುವಂತಾಗಲಿ’ ಎಂದು ಶುಭ ಹಾರೈಸಿದರು. ಸಂಸ್ಥೆಯ ಪರವಾಗಿ ಸಿರಿ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕರಾದ ಕೆ.ಎನ್ ಜನಾರ್ಧನರವರು ಶೃತಿಯವರಿಗೆ ಶಾಲು ಹೊದಿಸಿ, ಸನ್ಮಾನಿಸಿ ವಿಶೇಷವಾಗಿ ಗೌರವಿಸಿದರು.
ಈ ಸಂದರ್ಭದಲ್ಲಿ ಕೊರಗಜ್ಜ ಚಲನ ಚಿತ್ರದ ನಿರ್ಮಾಪಕರಾದ ವಿಧ್ಯಾದರ್, ಸಿರಿ ಸಂಸ್ಥೆಯ ಆಡಳಿತ ಮಂಡಳಿಯ ನಿರ್ದೇಶಕರಾದ ರಾಜೇಶ್ ಪೈ, ಲೆಕ್ಕಪತ್ರ ವಿಭಾಗದ ನಿರ್ದೇಶಕರಾದ ಪ್ರಸನ್ನ, ಎಸ್.ಕೆ.ಡಿ.ಆರ್.ಡಿ.ಪಿ ಬೆಳ್ತಂಗಡಿ ತಾಲೂಕು ಯೋಜನಾಧಿಕಾರಿ ಸುರೇಂದ್ರ ಹಾಗೂ, ಸಿರಿ ಸಂಸ್ಥೆಯ ಎಲ್ಲಾ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.