ಮಲೆಕುಡಿಯರು ಪ್ರಕೃತಿಯ ಆರಾಧಕರು: ವಿ. ಪ. ಶಾಸಕ ಪ್ರತಾಪ್‌ಸಿಂಹ ನಾಯಕ್: ಕೊಯ್ಯೂರು ಉಚಿತ ಆರೋಗ್ಯ ತಪಾಸಣೆ ಮತ್ತು ಕಾರ್ಡ್ ವಿತರಣಾ ಕಾರ್ಯಕ್ರಮ:

 

ಬೆಳ್ತಂಗಡಿ:ಮಲೆಕುಡಿಯರು ಪ್ರಕೃತಿಯ ಆರಾಧಕರು. ದೈವ ಮತ್ತು ದೇವರ ಬಗ್ಗೆ ಅಪಾರ ನಂಬಿಕೆ-ಶ್ರದ್ಧೆಯಿರುವ ಮಲೆಕುಡಿಯರು ಶ್ರಮಜೀವಿಗಳಾಗಿದ್ದು, ಈ ಸಮುದಾಯವು ಇನ್ನಷ್ಟು ಅಭಿವೃದ್ಧಿ ಹೊಂದಬೇಕು. ನಾವೆಲ್ಲ ಉತ್ತಮ ಆರೋಗ್ಯವನ್ನು ಹೊಂದಿದ್ದರೆ ಮಾತ್ರ ಸಂತಸ ಹಾಗೂ ನೆಮ್ಮದಿಯ ಜೀವನ ನಡೆಸಲು ಸಾಧ್ಯ. ಆರೋಗ್ಯವನ್ನೇ ಸಂರಕ್ಷಿಸಿಕೊಳ್ಳದಿದ್ದರೆ ಯಾವ ಸುಖ-ಭಾಗ್ಯಗಳನ್ನು ಅನುಭವಿಸಲು ಸಾಧ್ಯವಾಗದು. ಈ ನಿಟ್ಟಿನಲ್ಲಿ ಉಚಿತ ಶಿಬಿರದ ಮೂಲಕ ಮಲೆಕುಡಿಯರ ಆರೋಗ್ಯ ತಪಾಸಣೆಗೆ ಮುಂದಾಗಿರುವ ಮಲೆಕುಡಿಯ ಸಂಘವು ಉತ್ತಮವಾದ ಕಾರ್ಯ ಮಾಡಿದೆ ಎಂದು ವಿಧಾನ ಪರಿಷತ್ ಶಾಸಕ ಪ್ರತಾಪ್‌ಸಿಂಹ ನಾಯಕ್ ಅವರು ಹೇಳಿದರು.
ಅವರು ಯೆನೆಪೋಯ (ಪರಿಗಣಿಸಲ್ಪಟ್ಟ ವಿ.ವಿ.) ಮತ್ತು ಸಮಗ್ರ ಬುಡಕಟ್ಟು ಅಭಿವೃದ್ಧಿ ಯೋಜನೆ ಸಹಯೋಗದೊಂದಿಗೆ ಹಾಗೂ ಮಲೆಕುಡಿಯರ ಸಂಘ ದ.ಕ. ಜಿಲ್ಲಾ ಸಮಿತಿ ನೇತೃತ್ವದಲ್ಲಿ ಬೆಳ್ತಂಗಡಿ, ಕೊಯ್ಯೂರು-ಶಿವಗಿರಿಯಲ್ಲಿರುವ ಮಲೆಕುಡಿಯರ ಸಭಾಭವನದಲ್ಲಿ ನಡೆದ ಉಚಿತ ಆರೋಗ್ಯ ತಪಾಸಣೆ ಹಾಗೂ ಆರೋಗ್ಯ ಕಾರ್ಡ್ ವಿತರಣಾ ಸಮಾರಂಭದಲ್ಲಿ ಆರೋಗ್ಯ ಕಾರ್ಡ್‌ನ್ನು ವಿತರಿಸಿ ಮಾತನಾಡಿದರು.
ಹೆಚ್ಚಿನ ಮಲೆಕುಡಿಯ ಕುಟುಂಬಗಳು ಸಾಕಷ್ಟು ಕಷ್ಟಪಡುತ್ತಾ, ಅರಣ್ಯ ಮತ್ತು ಕಾಡಿನಂಚಿನಲ್ಲಿ ವಾಸಿಸುತ್ತಾ ಇದ್ದಾರೆ. ಸರಕಾರ ಹಾಗೂ ಸಂಘ-ಸಂಸ್ಥೆಗಳ ಮೂಲಕ ಸಹಕಾರವನ್ನು ಪಡೆದು ಆರ್ಥಿಕ, ಸಾಮಾಜಿಕವಾಗಿ ಸಶಕ್ತರಾಗಬೇಕೆಂದು ತಿಳಿಸುತ್ತಾ ಕೊಯ್ಯೂರಿನಲ್ಲಿರುವ ಮಲೆಕುಡಿಯರ ಸಮುದಾಯ ಭವನಕ್ಕೆ ಮೂಲಭೂತ ಸೌಕರ್ಯ ಒದಗಿಸಲು ಸಾಧ್ಯವಾದಷ್ಟು ಪ್ರಯತ್ನಿಸುತ್ತೇನೆ ಎಂದು ಭರವಸೆ ನೀಡಿದರು.
ಯೆನೆಪೋಯ ವಿ. ವಿ. ವೈದ್ಯಕೀಯ ತಂಡದ ನೇತೃತ್ವ ವಹಿಸಿ, ಕ್ಯಾಂಪ್ ನಡೆಸಿಕೊಟ್ಟ ಅಸೋಶಿಯಟ್ ಪ್ರೊಫೆಸರ್ ಡಾ. ಅಶ್ವಿನಿ ಶೆಟ್ಟಿ ಆರೋಗ್ಯ ಕಾಳಜಿಯ ಬಗ್ಗೆ ಮಾಹಿತಿ ನೀಡಿದರು. ಬೆಳ್ತಂಗಡಿ ತಾಲೂಕು ಸಮಾಜ ಕಲ್ಯಾಣ ಅಧಿಕಾರಿ ಹೇಮಚಂದ್ರ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು. ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಮಲೆಕುಡಿಯರ ಸಂಘದ ಅಧ್ಯಕ್ಷ ಹರೀಶ್ ಎಳನೀರು ಮಾತನಾಡಿ, ಮಲೆಕುಡಿಯ ಸಮುದಾಯದ ಅಭಿವೃದ್ಧಿ ದೃಷ್ಟಿಯಿಂದ ಸಂಘವು ಇನ್ನಷ್ಟು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಿದೆ. ನಮ್ಮ ಸಮುದಾಯವೂ ಕೂಡ ಎಲ್ಲ ಕ್ಷೇತ್ರಗಳಲ್ಲಿ ಮುಂದೆ ಬರಬೇಕೆಂದು ಹೇಳಿದರು.
ಸಮಾರಂಭದಲ್ಲಿ ರಾಜ್ಯ ಮಲೆಕುಡಿಯರ ಸಂಘದ ಅಧ್ಯಕ್ಷ ಶ್ರೀಧರ ಗೌಡ ಈದು, ಕರ್ನಾಟಕ ಅರಣ್ಯ ಮೂಲ ಬುಡಕಟ್ಟು ಸಮುದಾಯಗಳ ಒಕ್ಕೂಟ ದ.ಕ. ಜಿಲ್ಲೆಯ ಸಂಚಾಲಕ ಬಾಲಕೃಷ್ಣ ಪೊಳಲಿ, ಮಲೆಕುಡಿಯರ ಸಂಘದ ಬೆಳ್ತಂಗಡಿ ತಾ. ಸಮಿತಿಯ ಅಧ್ಯಕ್ಷ ಶಿವರಾಮ್ ಕೆ. ಉಜಿರೆ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಮಲೆಕುಡಿಯರ ಸಂಘ ದ.ಕ. ಜಿಲ್ಲಾ ಸಮಿತಿಯ ಪ್ರಧಾನಕಾರ್ಯದರ್ಶಿ ಜಯೇಂದ್ರ ಎಂ. ನಿಡ್ಲೆ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಕೋಶಧಿಕಾರಿ ಕೃಷ್ಣ ಪೂರ್ಜೆ ಕಾರ್ಯಕ್ರಮ ನಿರೂಪಿಸಿ, ಮೋಹನ್ ನಿಡ್ಲೆ ವಂದಿಸಿದರು

error: Content is protected !!