ಗುರುವಾಯನಕೆರೆಯ ಎಕ್ಸೆಲ್ ಪದವಿ ಪೂರ್ವ ಕಾಲೇಜಿನಲ್ಲಿ ಅ.29 ಮತ್ತು 30ರಂದು ರಾಜ್ಯ ಮಟ್ಟದ ‘ಶೋಧ’ ವಿಜ್ಞಾನ ಮೇಳ ಹಾಗೂ ಅಕ್ಷರೋತ್ಸವ-ಸಾಹಿತ್ಯ ಮೇಳ: ವಿವಿಧ ಸಾಧಕರಿಗೆ ಸನ್ಮಾನ

ಬೆಳ್ತಂಗಡಿ: ವಿದ್ಯಾರ್ಥಿಗಳಿಗೆ ವಿಜ್ಞಾನದ ಜೊತೆಗೆ ತಂತ್ರಜ್ಞಾನ, ಕಲೆ, ಸಾಹಿತ್ಯದ ಅಭಿರುಚಿ ಬೆಳೆಸುವ ನಿಟ್ಟಿನಲ್ಲಿ ಅ. 29 ರಂದು ಪ್ರೌಢ ಶಾಲಾ ಮಕ್ಕಳಿಗೆ ರಾಜ್ಯ ಮಟ್ಟದ ‘ಶೋಧ’ ವಿಜ್ಞಾನ ಮೇಳ ಹಾಗೂ ಅ. 30 ರಂದು ರಾಜ್ಯಮಟ್ಟದ ‘ಅಕ್ಷರೋತ್ಸವ’ ಸಾಹಿತ್ಯ ಮೇಳ ಗುರುವಾಯನಕೆರೆಯ ಎಕ್ಸೆಲ್ ಪದವಿ ಪೂರ್ವ ಕಾಲೇಜಿನ ಎಕ್ಸೆಲ್ ಕಾಲೇಜಿನ ಸಭಾಂಗಣದಲ್ಲಿ ನಡೆಯಲಿದೆ ಎಂದು ಕಾಲೇಜಿನ ಆಡಳಿತ ಮಂಡಳಿ ಅಧ್ಯಕ್ಷ ಸುಮಂತ್ ಕುಮಾರ್ ಜೈನ್ ತಿಳಿಸಿದರು.
ಗುರುವಾರ ಗುರುವಾಯನಕೆರೆ ಎಕ್ಸೆಲ್ ಕಾಲೇಜಿನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಕಾರ್ಯಕ್ರಮದ ಕುರಿತು ಮಾಹಿತಿ ನೀಡಿದರು.

2016ರಲ್ಲಿ ಉಜಿರೆಯಲ್ಲಿ ಸಣ್ಣ ಮಟ್ಟದಲ್ಲಿ ಕೋಚಿಂಗ್ ಸೆಂಟರ್ ಆರಂಭಿಸಿ, 2019ರಲ್ಲಿ ಗುರುವಾಯನಕೆರೆಯಲ್ಲಿ ಎಕ್ಸೆಲ್ ಪಿಯು ಕಾಲೇಜು ಸ್ಥಾಪಿಸಲಾಗಿದೆ. ಕಳೆದ ಮೂರು ವರ್ಷಗಳಲ್ಲಿ ರಾಜ್ಯದಲ್ಲಿ ಶಿಕ್ಷಣದ ಗುಣಮಟ್ಟದಲ್ಲಿ ಕಾಲೇಜು ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಪ್ರಸ್ತುತ ಪಿಯುಸಿಯಲ್ಲಿ ಇದೇ ಕಾಲೇಜಿನ ವಿದ್ಯಾರ್ಥಿ 4ನೇ ರ್ಯಾಂಕ್ ಪಡೆದಿದ್ದಳು. ಸಂಸ್ಥೆಯಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗೆ ವಿಶೇಷ ತರಬೇತಿ ನೀಡಲಾಗುತ್ತಿದೆ. ವಿದ್ಯಾರ್ಥಿಗಳಿಗೆ ವಿಜ್ಞಾನದ ಜೊತೆಗೆ ಸಾಹಿತ್ಯದ ಅಭಿರುಚಿ ಬೆಳೆಸುವ ನಿಟ್ಟಿನಲ್ಲಿ ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆಯವರ ಶುಭಾಶೀರ್ವಾದದೊಂದಿಗೆ ರಾಜ್ಯಮಟ್ಟದ ವಿಜ್ಞಾನ ಹಾಗೂ ಸಾಹಿತ್ಯ ಮೇಳ ಆಯೋಜಿಸಲಾಗಿದೆ ಎಂದು ತಿಳಿಸಿದರು.

‘ಶೋಧ’ ವಿಜ್ಞಾನ ಮೇಳ
ಅ. 29ರಂದು ಬೆಳಗ್ಗೆ 9-30 ಕ್ಕೆ ಶೋಧ’ ವಿಜ್ಞಾನ ಮೇಳವನ್ನು ಸಹ್ಯಾದ್ರಿ ಕಾಲೇಜಿನ ಅಧ್ಯಕ್ಷ, ವಿಧಾನ ಪರಿಷತ್ ಶಾಸಕ ಡಾ. ಮಂಜುನಾಥ ಭಂಡಾರಿ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ಬಿಇಒ ವಿರೂಪಾಕ್ಷಪ್ಪ, ಉಜಿರೆ ಅನುಗ್ರಹ ಕಾಲೇಜಿನ ಪ್ರಿನ್ಸಿಪಾಲ್ ಫಾ. ವಿಜಯ್ ಲೋಬೋ, ಹೋಲಿ ರಿಡೀಮರ್ ಶಾಲೆಯ ಮುಖ್ಯಶಿಕ್ಷಕ ಫಾ. ಕ್ಲಿಫರ್ಡ್ ಸಿಮೊನ್ ಪಿಂಟೋ, ಮಡಂತ್ಯಾರು ಸೆ.ಹಾ. ಶಾಲೆಯ ಮುಖ್ಯಶಿಕ್ಷಕ ಮೋಹನ್ ನಾಯಕ್ ಅವರು ಮುಖ್ಯ ಅತಿಥಿಗಳಾಗಿ ಭಾಗವಹಿಸುವರು.
ಕಾರ್ಯಕ್ರಮದಲ್ಲಿ ವೈದ್ಯ ಡಾ. ವೇಣುಗೋಪಾಲ್ ಶರ್ಮ, ಉದ್ಯಮಿ ಉಡುಪಿಯ ಶ್ರೀನಿವಾಸ್ ಶೆಟ್ಟಿಗಾರ್, ಪ್ರಾಧ್ಯಾಪಕ ಪುತ್ತೂರಿನ ಹರೀಶ್ ಶಾಸ್ತ್ರಿ, ನಾಟಿ ವೈದ್ಯ ತೆಂಕಕಾರಂದೂರಿನ ಕೃಷ್ಣ ನಾಯ್ಕ್ ಇವರನ್ನು ಸನ್ಮಾನಿಸಲಾಗುವುದು ಎಂದರು.
ಅಪರಾಹ್ನ 3-30ಕ್ಕೆ ಸಮಾರೋಪ ಸಮಾರಂಭ ಕಾರ್ಯಕ್ರಮದಲ್ಲಿ ಸಚಿವ ಎಸ್. ಅಂಗಾರ ಪ್ರಶಸ್ತಿ ವಿತರಿಸಲಿದ್ದಾರೆ. ಮಂಗಳೂರು ಡಿಡಿಪಿಯು ಜಯಣ್ಣ, ಪಿಲಿಕುಳ ನಿಸರ್ಗಧಾಮದ ನಿರ್ದೇಶಕ ಡಾ. ಕೆ.ವಿ. ರಾವ್, ಮೂಡುಬಿದಿರೆ ಮಹಾವೀರ ಪಿಯು ಕಾಲೇಜಿನ ಪ್ರಿನ್ಸಿಪಾಲ್ ರಮೇಶ್ ಭಟ್, ಉಜಿರೆ ಎಸ್.ಡಿ.ಎಂ. ಸೆಕೆಂಡರಿ ಶಾಲೆಯ ಮುಖ್ಯ ಶಿಕ್ಷಕ ಪದ್ಮರಾಜ್, ಗುರುದೇವ ಪಿಯು ಕಾಲೇಜಿನ ಪ್ರಿನ್ಸಿಪಾಲ್ ಸುಕೇಶ್ ಕುಮಾರ್, ಬೆಳ್ತಂಗಡಿ ವಾಣಿ ಶಾಲೆಯ ಮುಖ್ಯ ಶಿಕ್ಷಕ ಲಕ್ಷ್ಮೀನಾರಾಯಣ ಉಪಸ್ಥಿತಲಿರಲಿದ್ದಾರೆ.

ಅಕ್ಷರೋತ್ಸವ-ಸಾಹಿತ್ಯ ಮೇಳ

ವಿಜ್ಞಾನ ಮತ್ತು ತಂತ್ರಜ್ಞಾನದ ಬೆಳವಣಿಗೆ-ಸಾಹಿತ್ಯ ಸಾಧ್ಯತೆ, ಸವಾಲುಗಳು ಎಂಬ ಪರಿಕಲ್ಪನೆಯಲ್ಲಿ ಅ.30 ರಂದು ಬೆಳಗ್ಗೆ 9 ಗಂಟೆಗೆ ನಡೆಯಲಿದೆ.
‘ಅಕ್ಷರೋತ್ಸವ’ ಕಾರ್ಯಕ್ರಮದಲ್ಲಿ ಮಡಂತ್ಯಾರು ಸೆ.ಹಾ. ಪದವಿ ಕಾಲೇಜಿನ ಪ್ರಾಂಶುಪಾಲ ಡಾ. ಜೋಸೆಫ್ ಎನ್.ಎಂ. ಅವರು ರಾಷ್ಟ್ರ ಧ್ವಜವನ್ನು, ಪುಂಜಾಲಕಟ್ಟೆ ಸ.ಪ. ಕಾಲೇಜಿನ ಪ್ರಿನ್ಸಿಪಾಲ್ ಡಾ. ಟಿ.ಕೆ. ಶರತ್ ಕುಮಾರ್ ಅವರು ಕನ್ನಡ ಧ್ವಜವನ್ನು, ಬೆಳ್ತಂಗಡಿ ಗುರುದೇವ ಪ. ಕಾಲೇಜಿನ ಪ್ರಿನ್ಸಿಪಾಲ್ ಡಾ. ಸವಿತ ಕಾಲೇಜು ಧ್ವಜಾರೋಹಣ ನೆರವೇರಿಸಲಿರುವರು.
ಬೆಂಗಳೂರು ಕುವೆಂಪು ಭಾಷಾ ಭಾರತಿ ಪ್ರಾಧಿಕಾರ ಅಧ್ಯಕ್ಷ ಡಾ. ಅಜಕ್ಕಳ ಗಿರೀಶ್ ಭಟ್ ಕಾರ್ಯಕ್ರಮಕ್ಕೆ ಚಾಲನೆ ನೀಡಲಿದ್ದು, ಉಜಿರೆ ಎಸ್.ಡಿ.ಎಂ. ಕಾಲೇಜಿನ ಪ್ರಿನ್ಸಿಪಾಲ್ ಡಾ. ಪಿ.ಎನ್. ಉದಯಚಂದ್ರ ಅವರು ಅಕ್ಷರೋತ್ಸವ ಕವಿತೆಗಳು ಭಾಗ-1 ಲೋಕಾರ್ಪಣೆ ಮಾಡಲಿದ್ದಾರೆ. ಉಜಿರೆ ಎಸ್.ಡಿ.ಎಂ. ಕಾಲೇಜಿನ ವಿಶ್ರಾಂತ ಕುಲಸಚಿವ ಡಾ. ಬಿ.ಪಿ. ಸಂಪತ್ ಕುಮಾರ್ ಅವರು ಕಾವ್ಯಯಾನ ಕವನ ಸಂಕಲನ ಬಿಡುಗಡೆ ಮಾಡಲಿದ್ದಾರೆ. ಕನ್ನಡ ಸಾಹಿತ್ಯ ಅಕಾಡೆಮಿ ಸದಸ್ಯ ಕೇಶವ ಬಂಗೇರ ಮುಖ್ಯ ಅತಿಥಿಯಾಗಿ ಉಪಸ್ಥಿತರಿದ್ದು, ನವ ಮಾಧ್ಯಮ-ಭಾಷೆ ಮತ್ತು ಸಾಹಿತ್ಯ ಭವಿಷ್ಯದ ಕುರಿತು ಸಾಹಿತಿ ಡಾ. ನರೇಂದ್ರ ರೈ ದೇರ್ಲ ಉಪನ್ಯಾಸ ನೀಡಲಿದ್ದಾರೆ ಎಂದರು.

ಮಧ್ಯಾಹ್ನ 12 ಗಂಟೆಗೆ ಎಕ್ಸೆಲ್ ಅಕ್ಷರ ಗೌರವ ಸಮರ್ಪಣಾ ಸಮಾರಂಭ ನಡೆಯಲಿದ್ದು, ಕಸಾಪ ರಾಜ್ಯಾಧ್ಯಕ್ಷ ನಾಡೋಜ ಡಾ. ಮಹೇಶ್ ಜೋಶಿ ಅಧ್ಯಕ್ಷತೆ ವಹಿಸಲಿದ್ದು, ಶಾಸಕ ಹರೀಶ್ ಪೂಂಜ ಎಕ್ಸೆಲ್ ಅಕ್ಷರ ಗೌರವ ಸಮರ್ಪಿಸಲಿರುವರು ಎಂದರು.
ಬರೋಡ ತುಳು ಸಂಘದ ಅಧ್ಯಕ್ಷ, ಉದ್ಯಮಿ ಶಶಿಧರ ಶೆಟ್ಟಿ ನವಶಕ್ತಿ, ಕನಾಪ ಜಿಲ್ಲಾಧ್ಯಕ್ಷ ಡಾ. ಎಂ.ಪಿ. ಶ್ರೀನಾಥ್, ತಾಲೂಕು ಕಸಾಪ ಅಧ್ಯಕ್ಷ ಯದುಪತಿ ಗೌಡ ಮುಖ್ಯ ಅತಿಥಿಯಾಗಿ ಉಪಸ್ಥಿತರಿರುವರು. ಬೆಳ್ತಂಗಡಿ ಸ.ಪ.ಕಾಲೇಜಿನ ಪ್ರಿನ್ಸಿಪಾಲ್ ಡಾ. ಸುಬ್ರಹ್ಮಣ್ಯ ಭಟ್ ಅಭಿನಂದನಾ ಭಾಷಣ ಮಾಡಲಿರುವರು ಎಂದರು.

ಹಿರಿಯ ಪತ್ರಕರ್ತ ಆರ್.ಎನ್. ಪೂವಣಿ, ಸಾಹಿತಿ ಡಾ. ಎಚ್.ಜಿ. ಶ್ರೀಧರ್ ಮುಂಡಿಗೆ ಹಳ್ಳಿ, ಹಿರಿಯ ಸಂಶೋಧಕ ಡಾ. ತುಕರಾಮ ಪೂಜಾರಿ ಬಂಟ್ವಾಳ, ಮೈಸೂರು ಸೃಷ್ಠಿ ಪ್ರಕಾಶನದ ಸೃಷ್ಠಿ ನಾಗೇಶ್, ತಾಂತ್ರಿಕ ಪರಿಣಿತ ಡಾ. ಶಿವಪ್ರಸಾದ್, ಯಕ್ಷಗಾನ ಭಾಗವತ ರವಿಚಂದ್ರ ಕನ್ನಡಿಕಟ್ಟೆ, ಚಲನಚಿತ್ರ ನಟ ಪ್ರಕಾಶ್ ತೂಮಿನಾಡು, ಗ್ರಂಥಾಲಯ ಅಧಿಕಾರಿ ನಳಿನಿ, ಕೃಷಿಕ ಧನಕೀರ್ತಿ ಬಲಿಪ ಮೂಡಬಿದಿರೆ, ದೈವನರ್ತಕ ಅಶೋಕ ಪರವ ವಗ್ಗ ಇವರಿಗೆ ಎಕ್ಸೆಲ್ ಅಕ್ಷರ ಗೌರವ ಸಮರ್ಪಿಸಲಾಗುವುದು ಎಂದರು.
ಮಧ್ಯಾಹ್ನ 2 ಗಂಟೆಗೆ ವಿಮರ್ಶಕಿ ಡಾ. ವಿಜಯಲಕ್ಷ್ಮೀ ಬಸವರಾಜ ಪಲೋಟಿಯವರ ಸಮನ್ವಯಕಾರರ ಉಪಸ್ಥಿತಿಯಲ್ಲಿ ಆಯ್ದ ಕವನಗಳ ವಾಚನ-ಗಾಯನ-ನೃತ್ಯ-ಕುಂಚದ ರಾಜ್ಯ ಮಟ್ಟದ ಕವಿ ಗೋಷ್ಠಿ, ಸಂಶೋಧಕ ಡಾ. ರತ್ನಾಕರ್ ಮಲ್ಲಮೂಲೆ ಉಪಸ್ಥಿತಿಯಲ್ಲಿ ಸಾಹಿತ್ಯ ಭಾವ-ಭಾಷೆ-ಬದುಕು ಕುರಿತು ಉಪನ್ಯಾಸ ನಡೆಯಲಿದೆ. ಸಂಜೆ 4 ಗಂಟೆಗೆ ಕುಂದಾಪುರ ಮೂರು ಮುತ್ತು ಕಲಾವಿದರಿಂದ ಮೂರುಮುತ್ತು ಹಾಸ್ಯಮಯ ನಾಟಕದ 2300ನೇ ಪ್ರಯೋಗದೊಂದಿಗೆ ಪ್ರದರ್ಶನಗೊಳ್ಳಲಿದೆ ಎಂದರು.

ಪತ್ರಿಕಾಗೋಷ್ಠಿಯಲ್ಲಿ ಕಾಲೇಜಿನ ಪ್ರಿನ್ಸಿಪಾಲ್ ಡಾ. ನವೀನ್ ಕುಮಾರ್ ಮರಿಕೆ, ಪ್ರಾಧ್ಯಾಪಕ ಸತ್ಯನಾರಾಯಣ ಭಟ್ ಉಪಸ್ಥಿತರಿದ್ದರು.

error: Content is protected !!