ಧರ್ಮಸ್ಥಳದಲ್ಲಿ ಧರ್ಮಾಧಿಕಾರಿ ಡಾ. ಡಿ ವೀರೇಂದ್ರ ಹೆಗ್ಗಡೆಯವರ 55ನೇ ಪಟ್ಟಾಭಿಷೇಕ ವರ್ಧಂತ್ಯುತ್ಸವ: ಹೊಸ ಯೋಜನೆಗಳನ್ನು ಪ್ರಕಟಿಸಿದ ರಾಜರ್ಷಿ

 

ಉಜಿರೆ: ಧರ್ಮಸ್ಥಳದಲ್ಲಿ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರ 55ನೇ ವರ್ಷದ ಪಟ್ಟಾಷೇಕ ವರ್ಧಂತ್ಯುತ್ಸವ ಸಂಭ್ರಮ-ಸಡಗರದಿಂದ ನೆರವೇರಿದೆ. ಈ ವೇಳೆ ಸಂಪ್ರದಾಯದಂತೆ ಹೆಗ್ಗಡೆಯವರು ತಮ್ಮ ಹೊಸ ಯೋಜನೆಗಳನ್ನು ಪ್ರಕಟಿಸಿದ್ದಾರೆ.

ಗ್ರಾಮೀಣ ಪ್ರದೇಶಗಳಲ್ಲಿ ಆಪತ್ತು ಸಂಭವಿಸಿದಾಗ ತುರ್ತು ನೆರವು ಮತ್ತು ರಕ್ಷಣೆಗಾಗಿ ಮೂರು ಸಾವಿರ “ಶೌರ್ಯ” ಸ್ವಯಂ ಸೇವಕರ ತಂಡಗಳನ್ನು ರಚಿಸಲಾಗಿದೆ. ಸದ್ಯದಲ್ಲಿಯೇ ರಾಜ್ಯದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಇದನ್ನು ಉದ್ಘಾಟಿಸಲಿದ್ದಾರೆ ಎಂದು ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರು ಪ್ರಕಟಿಸಿದರು.

ರಾಜ್ಯಸಭಾ ಸದಸ್ಯನ ನೆಲೆಯಲ್ಲಿ ಬೀದರ್ ಜಿಲ್ಲೆಯಲ್ಲಿ ಹಾಲು ಉತ್ಪಾದನೆಗೆ ಪ್ರೋತ್ಸಾಹ ನೀಡುವ ಉದ್ದೇಶದಿಂದ ಈಗಾಗಲೇ ಸಮೀಕ್ಷೆ ನಡೆಸಲಾಗಿದೆ.ಸರ್ಕಾರದ ಸೇವೆಗಳನ್ನು ಜನರಿಗೆ ತಲುಪಿಸಲು ಆರು ಸಾವಿರದ ಐದುನೂರು ಸಾಮಾನ್ಯ ಸೇವಾ ಕೇಂದ್ರಗಳನ್ನು ಪ್ರಾರಂಭಿಸಿದ್ದು ಈ ವರ್ಷ ಇನ್ನೂ ಒಂದು ಸಾವಿರ ಸಾಮಾನ್ಯ ಸೇವಾ ಕೇಂದ್ರಗಳನ್ನು ಪ್ರಾರಂಭಿಸಲಾಗುವುದು.

ಕಳೆದ ವರ್ಷ ಆರು ಕೋಟಿ ರೂ. ವೆಚ್ಚದಲ್ಲಿ ಮೂರು ಆಸ್ಪತ್ರೆಗಳಿಗೆ ಮೂರು ಸಿ.ಟಿ. ಸ್ಕ್ಯಾನ್ ಯಂತ್ರಗಳನ್ನು ನೀಡಿದ್ದು ಈ ವರ್ಷ ಇನ್ನೂ ಮೂರು ಸಿ.ಟಿ. ಸ್ಕ್ಯಾನ್ ಯಂತ್ರಗಳನ್ನು ನೀಡಲಾಗುವುದು.

ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಮೂಲಕ ಐವತ್ತು ಲಕ್ಷ ಕುಟುಂಬಗಳ ಫಲಾನುಭವಿಗಳು ಸ್ವಾವಲಂಬಿ ಜೀವನ ನಡೆಸುತ್ತಿದ್ದಾರೆ. ಮಹಿಳಾ ಸಬಲೀಕರಣಕ್ಕೆ ಒತ್ತು ನೀಡಲಾಗುತ್ತಿದೆ.

365 ಸರ್ಕಾರಿ ಶಾಲೆಗಳಿಗೆ 2700 ಬೆಂಚು-ಡೆಸ್ಕುಗಳನ್ನು ವಿತರಿಸಲಾಗುವುದು.

ಈ ವರ್ಷ 100 ಕೆರೆಗಳ ಹೂಳೆತ್ತಿ ಪುನಶ್ಚೇತನಕ್ಕೆ ಯೋಜನೆ ರೂಪಿಸಲಾಗಿದೆ.

40 ಶುದ್ಧಗಂಗಾ ಘಟಕಗಳ ಮೂಲಕ ಶುದ್ಧ ಕುಡಿಯುವ ನೀರು ಪೂರೈಸಲಾಗುವುದು.

ಉಜಿರೆಯಲ್ಲಿ ಘನ ತ್ಯಾಜ್ಯ ನಿರ್ವಹಣಾ ಘಟಕಕ್ಕೆ 47 ಲಕ್ಷ ರೂ. ನೆರವು ನೀಡಲಾಗುವುದು.

ಅನಾಥ ಹಿರಿಯ ನಾಗರಿಕರ ಪಾಲನೆ ಮತ್ತು ಪೋಷಣೆಗಾಗಿ 5 ಕೋಟಿ ರೂ. ವೆಚ್ಚದಲ್ಲಿ 500 ಮನೆಗಳನ್ನು ನಿರ್ಮಿಸಲಾಗುವುದು ಎಂದು ಧರ್ಮಾಧಿಕಾರಿಯವರು ಪ್ರಕಟಿಸಿದರು.

ಇನ್ನೂ, ಈ ವರ್ಷ ಈಗಾಗಲೇ 7312 ದೇವಸ್ಥಾನಗಳಿಗೆ 89 ಕೋಟಿ ರೂ. ನೆರವು ನೀಡಲಾಗಿದೆ.
ಧಾರವಾಡದಲ್ಲಿ 200 ಹಾಸಿಗೆಗಳ ಸಾಮಥ್ರ್ಯದ ಕ್ಯಾನ್ಸರ್ ಚಿಕಿತ್ಸಾ ಕೇಂದ್ರ ಸದ್ಯದಲ್ಲಿಯೇ ಪ್ರಾರಂಭಗೊಳ್ಳಲಿದೆ.
ಧರ್ಮಸ್ಥಳದಲ್ಲಿ ಭಕ್ತಾದಿಗಳ ಸೇವೆ ಮತ್ತು ಅನುಕೂಲಕ್ಕಾಗ ಕ್ಯೂ ಕಾಂಪ್ಲೆಕ್ಸ್ ಕಾಮಗಾರಿ ಪ್ರಗತಿಯಲ್ಲಿದ್ದು ಒಂದು ವರ್ಷದೊಳಗೆ ಪೂರ್ಣಗೊಳ್ಳಲಿದೆ.
ದೇವರ ಅನುಗ್ರಹ, ಕುಟುಂಬವರ್ಗದವರ ಸಹಕಾರ ಹಾಗೂ ಸಿಬ್ಬಂದಿಯ ಶ್ರದ್ಧಾ-ಭಕ್ತಿಯ ಕಾರ್ಯನಿಷ್ಠೆಯಿಂದ ಎಲ್ಲಾ ಸೇವಾ ಕಾರ್ಯಗಳು ಸುಗಮವಾಗಿ ನಡೆಯುತ್ತವೆ ಎಂದರು.

ಈ ಸಂದರ್ಭದಲ್ಲಿ ಹೇಮಾವತಿ ವಿ ಹೆಗ್ಗಡೆ, ಡಿ. ಸುರೇಂದ್ರ ಕುಮಾರ್, ಪ್ರೊ.ಎಸ್. ಪ್ರಭಾಕರ್, ಡಿ. ರಾಜೇಂದ್ರ ಕುಮಾರ್, ಮಾಣಿಲದ ಮೋಹನದಾಸ ಸ್ವಾಮೀಜಿ ಶಾಸಕ ಕೆ. ಹರೀಶ್ ಪೂಂಜ, ವಿಧಾನಪರಿಷತ್ ಸದಸ್ಯ ಕೆ. ಪ್ರತಾಪಸಿಂಹ ನಾಯಕ್, ಮಾಜಿ ಸಚಿವ ಕೆ. ಅಭಯಚಂದ್ರ ಜೈನ್ ಮತ್ತು ಎಸ್.ಡಿ. ಸಂಪತ್ ಸಾಮ್ರಾಜ್ಯ ಶಿರ್ತಾಡಿ ಉಪಸ್ಥಿತರಿದ್ದರು.

error: Content is protected !!