ಬೆಳ್ತಂಗಡಿ:ರಿಷಬ್ ಶೆಟ್ಟಿ ನಿರ್ದೇಶಿಸಿ, ನಟಿಸಿರುವ ಕಾಂತಾರ ಸಿನಿಮಾ ಅದ್ಧೂರಿಯಾಗಿ ಬಿಡುಗಡೆಯಾಗಿ ಭರ್ಜರಿ ಪ್ರದರ್ಶನ ಕಾಣುತ್ತಿದೆ.ಎಲ್ಲ ಚಿತ್ರ ಮಂದಿರಗಳು ಭರ್ತಿಯಾಗಿವೆ. ಬೆಳ್ತಂಗಡಿಯ ಭಾರತ್ ಟಾಕೀಸಿನಲ್ಲಿ ಚಲನ ಚಿತ್ರ ವೀಕ್ಷಣೆಗೆ ನಾನಾ ಕಡೆಗಳಿಂದ ಚಿತ್ರ ಪ್ರೇಮಿಗಳು ಆಗಮಿಸುತಿದ್ದು ಜನ ಜಾತ್ರೆಯಂತೆ ಕಂಡು ಬರುತ್ತಿದೆ ಟಿಕೆಟ್ ಪಡೆದುಕೊಳ್ಳಲು ಗಂಟೆಗಟ್ಟಲೇ ಸರದಿ ಸಾಲಿನಲ್ಲಿ ನಿಂತು ಟಿಕೆಟ್ ಪಡೆದುಕೊಳ್ಳುತ್ತಿರುವುದು ಈ ಚಿತ್ರದ ಜನಪ್ರಿಯತೆಗೆ ಸಾಕ್ಷಿಯಾಗಿದೆ. ಇಂದು ರಾತ್ರಿ ಕೂಡ ಸಾವಿರಾರು ಜನ ಸಿನಿಮಾ ವೀಕ್ಷಣೆಗಾಗಿ ಬಂದಿರುವುದಲ್ಲದೇ ಟಿಕೆಟ್ ಸಿಗದೇ ಹಿಂದಿರುಗುತ್ತಿರುವುದು ಸಿನಿಮಾದ ಜನಪ್ರಿಯತೆ ಮತ್ತಷ್ಟು ಹೆಚ್ಚಿಸಿದೆ.
ಊರಿನ ನಾಯಕ ರಿಷಬ್ ಶೆಟ್ಟಿ ಹಾಗೂ ಅರಣ್ಯ ಅಧಿಕಾರಿ ಕಿಶೋರ್ ನಡುವಿನ ಸಂಘರ್ಷ, ಕರಾವಳಿ ಭಾಗದ ಭೂತರಾಧನೆ, ಕರಾವಳಿ ಕ್ರೀಡೆ ಕಂಬಳವನ್ನು ಕಾಂತಾರ ಸಿನಿಮಾ ಒಳಗೊಂಡಿದೆ. ದಕ್ಷಿಣ ಭಾಗದ ಸಂಸ್ಕೃತಿ ಬಿಂಬಿಸುವ ಕಾಂತಾರ ಸಿನಿಮಾವನ್ನು ಹೊಂಬಾಳೆ ಫಿಲ್ಮ್ಸ್ ಅಡಿ ನಿರ್ಮಾಪಕ ವಿಜಯ್ ಕಿರಗಂದೂರು ನಿರ್ಮಿಸಿದ್ದಾರೆ.
ಕಾಂತಾರ ಎಂದರೆ ಒಂದು ದಟ್ಟಾರಣ್ಯ ಎಂಬ ಅರ್ಥವಿದೆ. ಈ ಸಿನಿಮಾದಲ್ಲೂ ಕಾಡು ಸಾಕಷ್ಟು ಪ್ರಮುಖ ಪಾತ್ರ ವಹಿಸಿದೆ. ಕಾಡಿನೊಂದಿಗೆ ಬೆಸೆದುಕೊಂಡು ಬದುಕುವ ಊರಿನ ಜನರು ಒಂದು ಕಡೆ. ಕಾಡಿನಿಂದ ಒಂದು ಮರದ ತುಂಡು ಆಚೆ ಹೋಗದಂತೆ ಕಾಡಿನ ಒಂದಡಿ ಭೂಮಿಯನ್ನು ಯಾರೂ ಒತ್ತುವರಿ ಮಾಡದಂತೆ ಅರಣ್ಯವನ್ನು ಕಾಯುವ ಅರಣ್ಯಾಧಿಕಾರಿ ಮತ್ತೊಂದು ಕಡೆ.
ಇವರ ಜೊತೆಗೆ ರಾಜಕಾರಣಿಯ ಕುಕೃತ್ಯಗಳು. ಊರಿನ ಪರವಾಗಿ ಶಿವ (ರಿಷಬ್), ಕಾನೂನು ಎಲ್ಲರಿಗೂ ಒಂದೇ ಎಂದು ಹೇಳುವ ಅಧಿಕಾರಿ ಮುರಳಿಧರ್ (ಕಿಶೋರ್) ಅತ್ಯದ್ಭುತ ನಟನೆ ಮಾಡಿದ್ದಾರೆ. ಅರಣ್ಯ ಭೂಮಿಯ ಒತ್ತುವರಿ, ಒಕ್ಕಲೆಬ್ಬಿಸುವಿಕೆ, ಅರಣ್ಯ ಸಂಪತ್ತಿನ ಲೂಟಿ, ಅರಣ್ಯ ಅಧಿಕಾರಿಗಳು ಮತ್ತು ಗ್ರಾಮಸ್ಥರ ನಡುವಿನ ತಿಕ್ಕಾಟ ಹೈಲೈಟ್ ಆಗಿವೆ. ಕರಾವಳಿ ಸಂಸ್ಕೃತಿಯ ಅನಾವರಣ ಈ ಸಿನಿಮಾದ ಪ್ರಮುಖ ಅಂಶವಾಗಿದೆ.