ಮಳೆಬಿಟ್ಟು ವಾರ ಕಳೆದರೂ‌ ಬಿಡದ ಅಧಿಕಾರಿಗಳ ನಿದ್ದೆ!”: “ಮಳೆಗಾಲದಲ್ಲಿ ಚರಂಡಿ ನಿರ್ವಹಣೆ ಮಾಡದೆ ನಿರ್ಲಕ್ಷ್ಯ, ಚರಂಡಿ ನೀರು ರಸ್ತೆಯಲ್ಲಿ ಹರಿದು ಹೊಂಡ”: “ರಸ್ತೆಯಲ್ಲಿ ಹೊಂಡ ಬಿದ್ದರೂ ಮತ್ತೆ ಮುಂದುವರಿದ ನಿರ್ಲಕ್ಷ್ಯ”: “ಡಿ.ಎಲ್., ಎಮಿಷನ್, ಇನ್ಶುರೆನ್ಸ್ ಇಲ್ಲದಿದ್ದರೆ ಸವಾರರಿಗೆ ದಂಡ, ತೆರಿಗೆ ಕಟ್ಟಿದರೂ ಸಿಗುತ್ತಿಲ್ಲ ಸೇವೆ”: “ರಸ್ತೆ ಸರಿಪಡಿಸದ, ಚರಂಡಿ ಸರಿಪಡಿಸದ ಅಧಿಕಾರಿಗಳಿಗಿಲ್ಲ ದಂಡ, ಶಿಸ್ತು ಕ್ರಮ”: “ಧೂಳು, ಹೊಂಡಮಯ ರಸ್ತೆಯಿಂದ ಅನಾರೋಗ್ಯ, ವಾಹನ ರಿಪೇರಿ ಭಾಗ್ಯ”: “ಸ್ಥಳೀಯರು ಹೊಂಡ ಮುಚ್ಚಿದರೂ ಸುಮ್ಮನಿರುವ ಅಧಿಕಾರಿಗಳಿಗೆ ನಾಚಿಕೆ ಇಲ್ಲವೇ…?”: “ಅಧಿಕಾರಿಗಳಿಗಿಲ್ಲ ಜನಸಾಮಾನ್ಯರ ಚಿಂತೆ” ಬೆಳ್ತಂಗಡಿ ಜನರ ಆಕ್ರೋಶ

 

 

ಬೆಳ್ತಂಗಡಿ: “ಹೊಸ ಸೀರೆ ಬರುತ್ತದೆಂದು‌ ಹಳೆ ಸೀರೆ ಸುಟ್ಟು ಹಾಕಿ ಕೂತ ಹಾಗೆ ಆಗಿದೆ ಅಧಿಕಾರಿಗಳ ಪರಿಸ್ಥಿತಿ”, ” ಮಳೆ ಬಿಡಬೇಕು ಎಂಬ ಕಾರಣ ನೀಡಿದರು, ಇದೀಗ‌ ಮಳೆ ನಿಂತು‌ ವಾರ ಕಳೆದರೂ ಹೆದ್ದಾರಿ ಇಲಾಖೆ ಅಧಿಕಾರಿಗಳ ನಿದ್ದೆ ಬಿಟ್ಟಿಲ್ಲವೇ…?” ಇದು ದಿನಂಪ್ರತಿ ಪುಂಜಾಲಕಟ್ಟೆಯಿಂದ ಚಾರ್ಮಾಡಿ ರಸ್ತೆಯಲ್ಲಿ ಪ್ರಯಾಣಿಸುವ ಸವಾರರು ಹಾಗೂ ಸಾರ್ವಜನಿಕರಿಂದ ಪ್ರತಿದಿನ ಕೇಳಿ ಬರುತ್ತಿರುವ ಮಾತು.

 

ರಸ್ತೆಯ ಹುಡುಕಾಟ:

ಮಂಗಳೂರು- ವಿಲ್ಲುಪುರಂ ರಾಷ್ಟ್ರೀಯ ಹೆದ್ದಾರಿಯಲ್ಲಿ ಪುಂಜಾಲಕಟ್ಟೆಯಿಂದ ಚಾರ್ಮಾಡಿವರೆಗಿನ  ಸ್ಥಿತಿ ಚಿಂತಾಜನಕವಾಗಿದೆ. ಸುಮಾರು ಎರಡು ತಿಂಗಳಿಂದ ಈ ರಸ್ತೆಯಲ್ಲಿ ಪ್ರಾಣ ಕೈಯಲ್ಲಿ ಹಿಡಿದು ವಾಹನ ಸವಾರರು ಓಡಾಡುವಂತಾಗಿದೆ.‌ ದ್ವಿ ಚಕ್ರ ವಾಹನ ಸವಾರರು ಹಗ್ಗದ ಮೇಲಿನ ನಡಿಗೆಯಂತೆ ರಸ್ತೆಯನ್ನು ಹುಡುಕುತ್ತಾ ಸಂಚಾರ ನಡೆಸುವುದು ಸಾಮಾನ್ಯವಾಗಿದ್ದು, ಇದರಿಂದ ಇತರೆ ವಾಹನ ಸವಾರರೂ ಪರದಾಡುವಂತಾಗಿದೆ‌.

 

 

ನಿರ್ವಹಣೆ ನಡೆಸದ ಇಲಾಖೆ:

“ರಸ್ತೆಯನ್ನು ಸಮರ್ಪಕವಾಗಿ ನಿರ್ವಹಣೆ ಮಾಡಿದಲ್ಲಿ ಇಂತಹಾ ಸಮಸ್ಯೆ ಎದುರಾಗುವುದಿಲ್ಲ ಎನ್ನುವುದು” ಸಾರ್ವಜನಿಕರ ಆಕ್ರೋಶ. “ಮಳೆಗಾಲದಲ್ಲಿ ಜನ ಸಿಗುತ್ತಿಲ್ಲ, ಒಂದು ಮಳೆಯ ಬಳಿಕ ಚರಂಡಿ ನಿರ್ವಹಣೆ ಮಾಡುತ್ತೇವೆ ಎನ್ನುವ ಹೆದ್ದಾರಿ ಇಲಾಖೆ ಅಧಿಕಾರಿಗಳು ಬಳಿಕ ಯಾವುದೇ ನಿರ್ವಹಣೆ ನಡೆಸದೆ ಸುಮ್ಮನಾಗುತ್ತಾರೆ. ಚರಂಡಿ ನಿರ್ವಹಣೆ ಮಾಡದೆ ನಿರ್ಲಕ್ಷ್ಯ ವಹಿಸುತ್ತಿರುವುದರಿಂದಲೇ ಹೊಂಡ ಸೃಷ್ಟಿಯಾಗುತ್ತಿದೆ” ಎನ್ನುವುದು ಜನಸಾಮಾನ್ಯರ ಆಕ್ರೋಶ.

 

 

ಹೊಂಡ ಬಿದ್ದಾಗ ನಿರ್ಲಕ್ಷ್ಯ:

“ಚರಂಡಿ ನೀರು ರಸ್ತೆಯಲ್ಲಿ ಹರಿದು ಹೊಂಡ ನಿರ್ಮಾಣವಾಗುತ್ತಿದೆ ಎನ್ನುವುದಕ್ಕೆ ಗುರುವಾಯನಕೆರೆ ಸ್ಪಷ್ಟ ಉದಾಹರಣೆ. ಉಪ್ಪಿನಂಗಡಿ ಕ್ರಾಸ್ ಬಳಿ ಹೆದ್ದಾರಿಯಲ್ಲಿ  ಹರಿಯಲು ಶುರುವಾದ ನೀರು ಬಂಟರ ಭವನದ ಬಳಿ ಬಂದು ಬಳಿಕ ಚರಂಡಿ‌ ಸೇರುತ್ತದೆ. ಕಾರ್ಕಳ, ವೇಣೂರು ತಿರುಗುವ ಸ್ಥಳದಲ್ಲಿಯೂ ಮಳೆ ನೀರು ಹರಿದು ದೊಡ್ಡ ಮಟ್ಟದ ಹೊಂಡ ಸೃಷ್ಟಿಯಾಗಿದೆ. ಈ ಮಳೆ ನೀರು ರಸ್ತೆಯಲ್ಲಿ ‌ಹರಿದಿರುವುದರಿಂದಲೇ ರಸ್ತೆ ಹೊಂಡಮಯವಾಗಿದೆ. ಇಲ್ಲಿ ಅಧಿಕಾರಿಗಳ ನಿರ್ಲಕ್ಷ್ಯ ಕಂಡರೂ ಯಾರೂ ಚಕಾರವೆತ್ತುತ್ತಿಲ್ಲ” ಎಂಬುದು ಸವಾರರ ಆಕ್ರೋಶ.

 

 

ವೆಟ್ ಮಿಕ್ಸನ್ನೂ ಹಾಕುತ್ತಿಲ್ಲ:

“ಅಧಿಕಾರಿಗಳ ನಿರ್ಲಕ್ಷ್ಯದಿಂದ ರಸ್ತೆಯಲ್ಲಿ ಸಣ್ಣ ಹೊಂಡ ಬಿದ್ದರೂ, ಸಣ್ಣ ಹೊಂಡ ಬಿದ್ದಾಗಲೇ  ಕಾಮಗಾರಿ ನಡೆಸಿ ಮುಚ್ಚುವ ಕೆಲಸ ನಿರ್ವಹಿಸಿದಲ್ಲಿ ಹೊಂಡ ದೊಡ್ಡದಾಗುವ ಪ್ರಮೇಯ ಕಡಿಮೆ. ಹೊಂಡ ದೊಡ್ಡದಾಗಿದ್ದರೂ ಮಳೆ ಬರುತ್ತಿರುವ ಸಂದರ್ಭದಲ್ಲಿ ವೆಟ್ ಮಿಕ್ಸ್ ಹಾಕಿ ತಾತ್ಕಾಲಿಕ ಹೊಂಡ ಮುಚ್ಚುವ ಕಾರ್ಯ ನಡೆಸಲಾಗುತ್ತದೆ. ಆದರೆ ಅದನ್ನೂ ನಡೆಸದೆ ನಿರ್ಲಕ್ಷ್ಯ ಮುಂದುವರಿಸಿದ ಪರಿಣಾಮವಾಗಿಯೇ ಪರಿಸ್ಥಿತಿ ವಿಕೋಪಕ್ಕೆ ತಿರುಗಿ ಸಾರ್ವಜನಿಕರು ಪರದಾಡುವಂತಾಗಿದೆ” ಎಂಬುದು ಸವಾರರ ಮಾತು.

 

 

ಅಧಿಕಾರಿಗಳಿಗಿಲ್ಲ ದಂಡದ ಹೊರೆ:

“ಜನಸಾಮಾನ್ಯರ ಬಳಿ ಡಿ.ಎಲ್., ಎಮಿಷನ್, ಇನ್ಶುರೆನ್ಸ್ ಇಲ್ಲದಿದ್ದರೆ ಟ್ರಾಫಿಕ್ ಪೊಲೀಸ್, ಅಥವಾ ಆರಕ್ಷಕರು ಅಲ್ಲಲ್ಲಿ ಕಾದು ಕುಳಿತು ಸವಾರರಿಗೆ ದಂಡ ಹಾಕುತ್ತಾರೆ‌. ವಾಹನಗಳ ಮಾಲೀಕರು ಸಮರ್ಪಕ ರಸ್ತೆ ತೆರಿಗೆ ಪಾವತಿಸಿದರೂ ರಸ್ತೆ ಸೇವೆ ಸಮರ್ಪಕವಾಗಿ ಸಿಗದಂತೆ ಆಗಿದೆ. ಇತ್ತ ಕೆಟ್ಟ ರಸ್ತೆಯಲ್ಲಿ ವಾಹನ ಚಲಾಯಿಸಬೇಕಾಗಿದೆ. ಆದರೆ ರಸ್ತೆ ಸರಿಪಡಿಸದ, ಚರಂಡಿ ಸರಿಪಡಿಸದ ಅಧಿಕಾರಿಗಳು ಯಾರೆಂದು ತಿಳಿದಿದ್ದರೂ ಅಧಿಕಾರಿಗಳಿಗೆ ದಂಡ ಅಥವಾ ಯಾವುದೇ ರೀತಿಯ ಶಿಸ್ತು ಕ್ರಮ‌ಕೈಗೊಳುವುದಿಲ್ಲ…? ಹೆಚ್ಚಿನ ಮಳೆಯಿಂದ ಹಾನಿ ಸಂಭವಿಸಿದ್ದಲ್ಲಿ, ಅತಿವೃಷ್ಠಿಯ ಕಾರಣ ನೀಡಿ ಹೆಚ್ಚುವರಿ ಅನುದಾನ ಪಡೆಯಬಹುದಾಗಿದ್ದರೂ ನಿರ್ಲಕ್ಷ್ಯ ಏಕೆ…? ಸಾರ್ವಜನಿಕರ ತೆರಿಗೆ ಹಣದಿಂದ ಸಂಬಳ ಪಡೆಯುವ ಅಧಿಕಾರಿಗಳಿಗೆ ಸಾರ್ವಜನಿಕರ ಆರೋಗ್ಯದ ಬಗ್ಗೆ ಕಾಳಜಿ ಇಲ್ಲ…” ಎಂದು ವಾಹನಗಳ ಮಾಲೀಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

 

ಅನಾರೋಗ್ಯ ಭಾಗ್ಯ:

“ಧೂಳು ಹಾಗೂ ಹೊಂಡಮಯ ರಸ್ತೆಯಿಂದ ಸವಾರರಲ್ಲಿ ಅನಾರೋಗ್ಯ ತಲೆದೋರುತ್ತಿದೆ. ಧೂಳಿನಿಂದ ಕೆಮ್ಮು, ಶೀತ ಬಾಧೆ ಸವಾರರು, ಪ್ರಯಾಣಿಕರಲ್ಲಿ ಅದರಲ್ಲೂ ಶಾಲಾ ಮಕ್ಕಳಲ್ಲಿ ಕಂಡು ಬರುತ್ತಿದೆ. ಕೆಲವರಿಗೆ ಬೆನ್ನು ನೋವಿನಂತಹಾ ಪ್ರಕರಣಗಳೂ ಕಂಡುಬಂದಿವೆ. ಇನ್ನು ವೃದ್ಧರು ಪ್ರಯಾಣ ನಡೆಸಿದರೆ ಯಮರಾಜನ ಬಳಿಯೇ ನೇರವಾಗಿ ತೆರಳಬಹುದು  ಎಂದು ಹಾಸ್ಯಾತ್ಮಕವಾಗಿ ಹೇಳುತ್ತಾರೆ, ಪರಿಸ್ಥಿತಿ ದಿನಂಪ್ರತಿ ವೀಕ್ಷಿಸುತ್ತಿರುವ ಸ್ಥಳೀಯರು.

ವಾಹನ ರಿಪೇರಿ ಭಾಗ್ಯ:

“ಕಿತ್ತುಹೋದ ರಸ್ತೆಯಲ್ಲಿ ಪ್ರಯಾಣಿಸಿ ಹಲವಾರು ವಾಹನಗಳಿಗೆ ರಿಪೇರಿ ಭಾಗ್ಯ ಲಭಿಸಿದೆ‌. ಬೈಕ್, ಕಾರುಗಳು ಕೆಟ್ಟು ಹೋಗುತ್ತಿವೆ. ವಾಹನಗಳ ಚಕ್ರಗಳ ಬಾಳಿಕೆಯೂ ಕಡಿಮೆಯಾಗುತ್ತಿದೆ. ಆದರೆ ಸ್ಥಳೀಯ ವಾಹನ ರಿಪೇರಿ ಗ್ಯಾರೇಜ್ ಗಳಿಗೆ ವ್ಯಾಪಾರ ಉತ್ತಮವಾಗಿ ಆಗುತ್ತಿದೆ. ಪುತ್ತೂರಿನ ಪತ್ರಕರ್ತರ ಕಾರೊಂದು ಇತ್ತೀಚೆಗೆ ಇದೇ ರಸ್ತೆಯಲ್ಲಿ ‌ಸಂಚರಿಸಿ ಅರ್ಧದಲ್ಲಿ ಬಾಕಿಯಾಗಿ ಉಳಿದಿತ್ತು. ಜನಸಾಮಾನ್ಯರೂ ನಿತ್ಯ ವಾಹನ ರಿಪೇರಿಗಾಗಿ ಹಣ ವ್ಯಯಿಸುವಂತಾಗಿದೆ” ಎನ್ನುತ್ತಾರೆ ಸ್ಥಳೀಯ ದ್ವಿಚಕ್ರ ವಾಹನ ರಿಪೇರಿ ಮಾಡುವ ಮೆಕ್ಯಾನಿಕ್ ಒಬ್ಬರು.

 

 

ಸ್ಥಳೀಯರು ಹೊಂಡ ಮುಚ್ಚಿದರೂ ಅಧಿಕಾರಿಗಳು ಮೌನ:

“ಸಾರ್ವಜನಿಕರ ಸಮಸ್ಯೆ ಕಂಡು ಸ್ಥಳೀಯ ಸಂಘ ಸಂಸ್ಥೆಗಳ ಕಾರ್ಯಕರ್ತರು ಹೊಂಡ ಮುಚ್ಚುವ ಯತ್ನ ನಡೆಸಿದ್ದಾರೆ. ಆದರೆ ಅಧಿಕಾರಿಗಳು ಮಾತ್ರ ಮಳೆಯ ಕಾರಣ ನೀಡಿ ಸುಮ್ಮನಿದ್ದಾರೆ. ಅಧಿಕಾರಿಗಳಿಗೆ ನಾಚಿಕೆ ಇಲ್ಲವೇ…?” ಎಂದು ‘ಪ್ರಜಾಪ್ರಕಾಶ’ ತಂಡ ಸಾರ್ವಜನಿಕರಿಂದ ಅಭಿಪ್ರಾಯ ಸಂಗ್ರಹಿಸುತ್ತಿದ್ದ ವೇಳೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಗೊಂದಲ, ಅಪಘಾತ ಸಾಮಾನ್ಯ:

“ವಾಹನ ಸಂಚಾರ ಸರ್ಕಸ್‌‌ ಮಾಡುವಂತೆ ಆಗಿದ್ದು, ದ್ವಿಚಕ್ರ ವಾಹನ ಸವಾರರ ಪರಿಸ್ಥಿತಿ ಶೋಚನೀಯವಾಗಿದೆ. ದಿನ ನಿತ್ಯ ಗೊಂದಲ ಸೃಷ್ಟಿಯಾಗಿ ಹಲವು ಅಪಘಾತಗಳು ಸಂಭವಿಸುತ್ತಿದ್ದರೂ ಅಧಿಕಾರಿಗಳಿಗೆ ಹಿಡಿಶಾಪ ಹಾಕಿ ಮುಂದೆ ಸಾಗುತ್ತಿರುವುದು ಸಾಮಾನ್ಯವಾಗಿದೆ.” ಎನ್ನುತ್ತಾರೆ ಪ್ರತ್ಯಕ್ಷದರ್ಶಿಗಳು.
“ದಿನಂಪ್ರತಿ ಸಾವಿರಾರು ವಾಹನಗಳು ಈ ರಸ್ತೆಯಲ್ಲಿ ಓಡಾಟ ಮಾಡುತ್ತಿವೆ. ಆದರೆ ಅಧಿಕಾರಿಗಳು ಮಾತ್ರ ತಮಗೆ ಹಣ, ಸಂಬಳ ಸಿಕ್ಕರೆ ಸಾಕು ಎಂಬ ಅಭಿಪ್ರಾಯದಲ್ಲಿ ಇರುವಂತೆ ಇದೆ. ಅಧಿಕಾರಿಗಳಿಗೆ ಜನಸಾಮಾನ್ಯರ ಸಮಸ್ಯೆಯ ಚಿಂತೆ ಇಲ್ಲ…, ಇವತ್ತಲ್ಲ ನಾಳೆ ರಸ್ತೆ ಸರಿಪಡಿಸುತ್ತಾರೆ ಎಂಬ ನಂಬಿಕೆಯಿಂದ ಸುಮ್ಮನಿದ್ದೇವೆ. ಇನ್ನಾದರೂ ಅಧಿಕಾರಿಗಳಿಗೆ ದೇವರು ಒಳ್ಳೆಯ ಬುದ್ಧಿ ಕೊಟ್ಟು ರಸ್ತೆ ಸರಿಪಡಿಸುವಂತಾಗಲಿ” ಎಂಬುದು ಒಟ್ಟಾರೆಯಾಗಿ ಸಾರ್ವಜನಿಕರಿಂದ ಸಂಗ್ರಹವಾದ ಅಭಿಪ್ರಾಯ.
ಸಾರ್ವಜನಿಕರು ಬಹಿರಂಗವಾಗಿ ತಮ್ಮ ಆಕ್ರೋಶ ಹೊರ ಹಾಕುವ ಮೊದಲು ಅಧಿಕಾರಿಗಳು ರಸ್ತೆ ಹೊಂಡಗಳನ್ನು ಮುಚ್ಚಿಸಲು ಸಮರ್ಪಕ ಕ್ರಮ ಕೈಗೊಳ್ಳಬೇಕಾದ ಅನಿವಾರ್ಯತೆ ಎದುರಾಗಿರುವುದು ಸ್ಪಷ್ಟವಾಗಿದೆ.

error: Content is protected !!