ಉಜಿರೆ: ನಡು ರಸ್ತೆಯಲ್ಲಿ ಬಸ್ ನಿಲ್ಲಿಸಿ ಅಂಗಡಿಗೆ ಖರೀದಿಗೆ ತೆರಳಿದ ಕೆ.ಎಸ್.ಆರ್.ಟಿ.ಸಿ. ಬಸ್ ಡ್ರೈವರ್: ಹೆದ್ದಾರಿಯಲ್ಲಿ ಸಂಚಾರದಲ್ಲಿ ಕೆಲ ಕಾಲ ಗೊಂದಲ

 

 

ಬೆಳ್ತಂಗಡಿ: ಉಜಿರೆಯ ಅಶ್ವಿನಿ ಕ್ಲಿನಿಕ್ ಬಳಿಯ ನಾಗ ಬನ ಬಳಿ ರಾಷ್ಟ್ರೀಯ ಹೆದ್ದಾರಿಯಲ್ಲಿ, ನಡು ರಸ್ತೆಯಲ್ಲಿ ಬಸ್ ನಿಲ್ಲಿಸಿ ಕೆ.ಎಸ್.ಆರ್.ಟಿ.ಸಿ., ವಾಯುವ್ಯ ಸಾರಿಗೆಯ ಬಸ್ ಚಾಲಕ ಅಂಗಡಿಗೆ ಸಾಮಗ್ರಿ ಖರೀದಿಗೆ ತೆರಳಿದ ಘಟನೆ ನಡೆದಿದೆ.
ಅಗಲ ಕಿರಿದಾದ ರಸ್ತೆ ಬಳಿಯೇ ವಾಯುವ್ಯ ಕರ್ನಾಟಕ ಸಾರಿಗೆ ಬಸ್ ನಿಲ್ಲಿಸಿದ್ದು ಏಕ‌ಮುಖ ಸಂಚಾರದಿಂದ ಇತರೆ ವಾಹನ ಸವಾರರು ಅನಗತ್ಯ ಗೊಂದಲ‌ ಅನುಭವಿಸುವಂತಾಯಿತು. ಬಸ್ ನಿಲ್ಲಸಿದ್ದ ವೇಳೆ ವ್ಯಕ್ತಿಯೊಬ್ಬರು ರಸ್ತೆ ದಾಟಲು ಯತ್ನಿಸಿದ್ದು, ಈ ವೇಳೆ ಇನ್ನೊಂದು ದಿಕ್ಕಿನಿಂದ ಬಂದ ಬುಲೇರೋ ವಾಹನ ಚಾಲಕ ಕೊನೆ ಕ್ಷಣದಲ್ಲಿ ಹಠಾತ್ ಬ್ರೇಕ್ ಹಾಕಿ ಸಂಭಾವ್ಯ ಅಪಾಯ ತಪ್ಪಿಸಿದರು.
ಘಟನೆ 3.15 ರ ಸುಮಾರಿಗೆ ನಡೆದಿದ್ದು, ಸುಮಾರು 5 ನಿಮಿಷಗಳ ಕಾಲ ಹೆದ್ದಾರಿಯಲ್ಲಿಯೇ ನಿಂತಿತ್ತು.ಬಸ್  ಕೆಟ್ಟು ನಿಂತಿದೆಯೇ ಅಥವಾ ಏನಾದರೂ ಸಮಸ್ಯೆಯೇ ಎಂದು ಸ್ಥಳೀಯರು ಪರಿಶೀಲಿಸುವ ಸಂದರ್ಭದಲ್ಲಿ ಬಸ್ ಚಾಲಕ ರಸ್ತೆಯಲ್ಲಿಯೇ ಬಸ್ ನಿಲ್ಲಿಸಿ, ಸ್ಥಳೀಯ ಹಾರ್ಡ್ ವೇರ್ ಅಂಗಡಿಗೆ ಸಾಮಗ್ರಿ ಖರೀದಿಸಲು ತೆರಳಿರುವುದು ಗಮನಕ್ಕೆ ಬಂದಿದೆ. ರಸ್ತೆ ನಿಯಮ ಪಾಲಿಸಬೇಕಾದ ಸರಕಾರಿ ರಸ್ತೆ ಸಾರಿಗೆ ನಿಗಮದ ನೌಕರರೇ ಈ ರೀತಿಯ ನಿರ್ಲಕ್ಷ್ಯ ವಹಿಸಿದರೆ ಹೇಗೆ ಎಂದು ಸಾರ್ವಜನಿಕರು ಪ್ರಶ್ನಿಸುವಂತಾಗಿದೆ. ಒಂದು ವೇಳೆ ನಿಲ್ಲಿಸುವ ಅಗತ್ಯವಿದ್ದಲ್ಲಿ ಸ್ಥಳಾವಕಾಶ ಇರುವ ಜಾಗದಲ್ಲಿ ಬಸ್ಸನ್ನು ರಸ್ತೆ ಬದಿಯಲ್ಲಿ ನಿಲ್ಲಿಸಬಹುದಿತ್ತಲ್ಲವೇ ಎಂಬ ಪ್ರಶ್ನೆಯೂ ಉದ್ಭವಿಸಿದೆ. ಈ ಹೆದ್ದಾರಿಯಲ್ಲಿ ಸಾವಿರಾರು ವಾಹನಗಳು ಸಾಗುತ್ತಿದ್ದು, ಕ್ಷುಲ್ಲಕ ವಿಚಾರಗಳಿಂದ ಇತರೆ ವಾಹನ ಸವಾರರು ಸಂಕಷ್ಟ ಅನುಭವಿಸುವಂತಾಗಿದೆ‌ ಎಂದು ಸಾರ್ವಜನಿಕರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

error: Content is protected !!