ನಾರಾಯಣ ಗುರುಗಳು ಸರ್ವಕಾಲದಲ್ಲೂ ಪೂಜಿಸಲ್ಪಡಬೇಕಾದ ದೊಡ್ಡ ಶಕ್ತಿ: ಬ್ರಹ್ಮಾನಂದ ಸ್ವಾಮೀಜಿ: ಕನ್ಯಾಡಿ ಗುರುದೇವ ಮಠದಲ್ಲಿ ತಾಲೂಕು ಮಟ್ಟದ ಶ್ರೀ ನಾರಾಯಣ ಗುರು ಜಯಂತಿ ಕಾರ್ಯಕ್ರಮ

 

 

ಬೆಳ್ತಂಗಡಿ:ಒಂದೇ ಜಾತಿ,ಒಂದೇ ಮತ,ಒಂದೇ ದೇವರು ಎಂಬ ಸಂದೇಶವನ್ನು ಸಮಾಜಕ್ಕೆ ಸಾರಿದ ನಾರಾಯಣ ಗುರುಗಳು ಸರ್ವಕಾಲದಲ್ಲೂ ಪೂಜಿಸಲ್ಪಡಬೇಕಾದ ದೊಡ್ಡ ಶಕ್ತಿ ಎಂದು ಕನ್ಯಾಡಿ ಶ್ರೀರಾಮ ಕ್ಷೇತ್ರ ಮಹಾಸಂಸ್ಥಾನದ ಪೀಠಾಧೀಶ ಸದ್ಗುರು ಶ್ರೀ ಬ್ರಹ್ಮಾನಂದ ಸ್ವಾಮೀಜಿ ಹೇಳಿದರು.
ಅವರು ಶನಿವಾರ ಕನ್ಯಾಡಿ ದೇವರಗುಡ್ಡ ಶ್ರೀ ಗುರುದೇವ ಮಠದಲ್ಲಿ ರಾಷ್ಟ್ರೀಯ ಹಬ್ಬ ಹಾಗೂ ಮಹಾ ಪುರುಷರ ಜಯಂತಿ ಆಚರಣಾ ಸಮಿತಿ,ಬೆಳ್ತಂಗಡಿ ತಾಲೂಕು ಇದರ ಆಶ್ರಯದಲ್ಲಿ ಬ್ರಹ್ಮಶ್ರೀ ನಾರಾಯಣ ಗುರುಗಳ 168 ನೇ ಜನ್ಮದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಆಶಿರ್ವಚನ ನೀಡಿದರು.
ಬದುಕು ಮತ್ತು ಬೋಧನೆಯಿಂದ ಜನಮಾನಸದಲ್ಲಿ ಜನರ ಮನಸ್ಸನ್ನು ಗೆಲ್ಲುವರು ದಾರ್ಶನಿಕರು ಬ್ರಹ್ಮಶ್ರೀ ನಾರಾಯಣ ಗುರುಗಳು.ಕೆಳವರ್ಗದ ಜನರಿಗೆ ನಡೆದಾಡಲು,ಸರಿಯಾಗಿ ಬಟ್ಟೆಹಾಕಲು ಅವಕಾಶವಿಲ್ಲ,ದೇವಸ್ಥಾನಗಳಿಗೆ ಪ್ರವೇಶ ಇಲ್ಲ ಎಂಬ ಸ್ಥಳದಲ್ಲಿ ಶಿವನ ದೇವಸ್ಥಾನ ನಿರ್ಮಿಸಿ ಕೆಳವರ್ಗದವರಿಗೆ ದೇವಸ್ಥಾನ ಪ್ರವೇಶಿಸಲು ಅವಕಾಶ ನೀಡುವ ಜತೆ ಶಿಕ್ಷಣ ಕ್ರಾಂತಿಯನ್ನು ಮಾಡಿದವರು  ನಾರಾಯಣ ಗುರುಗಳು.
ಪ್ರತಿಯೊಬ್ಬರಿಗೂ ಬದುಕಿನ ಎಲ್ಲಾ ಆಯಾಮಗಳಲ್ಲಿ ಸ್ವಾತಂತ್ರ್ಯ ಇರಬೇಕು ಎಂದು ಚಿಂತಿಸಿ ಸಂಘರ್ಷಕ್ಕೆ ಅವಕಾಶಮಾಡಿಕೊಡದೆ ಪ್ರತಿಯೊಬ್ಬರು ಶಿಕ್ಷಣವಂತರಾಗಬೇಕು ಎಂದು ಎಲ್ಲಾವರ್ಗದವರಿಗೂ ಸುಲಭವಾಗಿ ಶಿಕ್ಷಣ ಸಿಗಬೇಕು ಎಂದು ಶಿಕ್ಷಣ ಸಂಸ್ಥೆಗಳನ್ನು ಪ್ರಾರಂಭಿಸಿದರು.
ಧಾರ್ಮಿಕ ಪ್ರಜ್ಞೆ ಬೆಳೆಯಲು ದೇವಸ್ಥಾನಗಳನ್ನು ಕಟ್ಟಿದವರು ನಾರಾಯಣ ಗುರುಗಳು.ಸತ್ಯಧರ್ಮವನ್ನು ಪಾಲಿಸಿ ಜಾತಿಯೆಂಬ ಸಂಕೋಲೆಯಿಂದ ಹೊರಬಂದು ನಾವೆಲ್ಲ ಭಾರತೀಯರು ಎಂಭ ಭಾವನೆ ಪ್ರತಿಯೊಬ್ಬರಲ್ಲಿ ಬರಬೇಕು ಆಗ ನಾರಾಯಣ ಗುರುಗಳ ಸಂದೇಶವನ್ನು ಪಾಲಿಸುತ್ತಿದ್ದೇವೆ ಎಂದರ್ಥ ಎಂದರು.

 

 

ಖ್ಯಾತ ವೈದ್ಯರಾದ ಡಾ ಪ್ರದೀಪ್ ನಾವೂರು ಉಪನ್ಯಾಸ ನೀಡುತ್ತಾ ಮಾನವೀಯತೆಯ ಸಂದೇಶ ಸಾರಿದವರು ನಾರಾಯಣ ಗುರುಗಳು. ತಾರತಮ್ಯ ಭವಿಷ್ಯಕ್ಕೆ ಅಪಾಯ ಎಂದು ಅರಿತು ಅದನ್ನು ಸಂಘರ್ಷರಹಿತವಾಗಿ ಹೋಗಲಾಡಿಸಿದವರು.ಇಂದು ಸರ್ವದರ್ಮ ಸಮ್ಮೇಳನಗಳು ನಡೆಯಬೇಕಾರದರೆ ಅದಕ್ಕೆ ಮೂಲ ಪ್ರೇರಣೆ ನಾರಾಯಣಗುರುಗಳು ಎಂದರು.
ಶಾಸಕ ಹರೀಶ್ ಪೂಂಜ ಅದ್ಯಕ್ಷತೆ ವಹಿಸಿ ಮಾತನಾಡಿ ಸಂಘಟಿತರಾಗಬೇಕು ಮತ್ತು ಜ್ಞಾನಾರ್ಜನೆಯ ಮೂಲಕ ಒಂದಾಗಿ ಎಂದು ಶಿಕ್ಷಣಕ್ಕೆ ಒತ್ತು ನೀಡಿದವರು ನಾರಾಯಣ ಗುರುಗಳು.ಜನರಲ್ಲಿ ಧಾರ್ಮಿಕ ಪ್ರಜ್ಞೆ ಬೆಳೆಯಬೇಕು. 85 ಕ್ಕೂ ಹೆಚ್ಚು ಶಿವನ ದೇವಾಲಯ ಸ್ಥಾಪಿಸಿದವರು.ಅದರಲ್ಲಿ ಮಂಗಳೂರಿನ ಕುದ್ರೋಳಿ ದೇವಸ್ಥಾನವು ಒಂದು ಎಂದು ಹೇಳುವುದಕ್ಕೆ ಹೆಮ್ಮೆಯಾಗುತ್ತದೆ.ಕೇರಳದಲ್ಲಿ ಹಿಂದೂ ಸಮಾಜ ಸಶಕ್ತವಾಗಿ ಉಳಿಯಬೇಕಾದರೆ ನಾರಾಯಣಗುರುಗಳೆ ಪ್ರೇರಣೆ .ರಾಷ್ಟ್ರೀಯ ಸ್ವಯಂ ಸೇವಾ ಸಂಘದಲ್ಲೂ ಗುರುಗಳ ಸಂದೇಶಗಳು ಅಳವಡಿಸಲಾಗುತ್ತಿದೆ.ಭಾರತ ಭಾರತ ವಾಗಿ ,ಹಿಂದೂ ಸಮಾಜ ಹಿಂದೂ ಸಮಾಜವಾಗಿ ಉಳಿಯಬೇಕಾದರೆ ನಾರಾಯಣ ಗುರುಗಳ ತತ್ವ ಆದರ್ಶಗಳು ಮುಂದುರೆಯಬೇಕು.ಶ್ರೀ ಗುರುದೇವ ಮಠದಲ್ಲಿ ನಾರಾಯಣ ಗುರುಜಯಂತಿ ಆಚರಿಸುವ ಮೂಲಕ ಹಿರಿಯ ಸ್ವಾಮೀಜಿಗಳಾದ ಶ್ರೀ ಶ್ರೀ ಆತ್ಮಾನಂದ ಸ್ವಾಮೀಜಿಯವರ ಚಿಂತನೆಗಳಿಗೆ ಶಕ್ತಿತುಂಬುವಂತಾಗಿದೆ ಎಂದರು.
ವಿಧಾನ ಪರಿಷತ್ ಶಾಸಕ ಕೆ ಪ್ರತಾಪ್ ಸಿಂಹನಾಯಕ್ ಶುಭಹಾರೈಸಿದರು.ತಹಶೀಲ್ದಾರ್ ಪೃಥ್ವಿಸಾನಿಕಮ್,ಅಕ್ರಮ ಸಕ್ರಮ ಸಮಿತಿಯ ಅಧ್ಯಕ್ಷ ಜಯಂತ್ ಕೋಟ್ಯಾನ್,ಎ ಪಿ ಎಂ ಸಿ ಕಾರ್ಯದರ್ಶಿ ರವೀಂದ್ರ ಮತ್ತು ತಾಲೂಕಿನ ವಿವಿಧ ಗ್ರಾ ಪಂ ಅಧ್ಯಕ್ಷರುಗಳು ಉಪಸ್ಥಿತರಿದ್ದರು.ಬೆಳ್ತಂಗಡಿ ನಗರಪಂಚಾಯತ್ ಮುಖ್ಯಾದಿಕಾರಿ ರಾಜೇಶ್ ಸ್ವಾಗತಿಸಿ ಧರ್ಮಸ್ಥಳ ಗ್ರಾ ಪಂ ಉಪಾಧ್ಯಕ್ಷ ಶ್ರಿನಿವಾಸ್ ರಾವ್ ವಂದಿಸಿದರು.ಶಿಕ್ಷಕ ಧರಣೇಂದ್ರ ಕುಮಾರ್ ಕಾರ್ಯಕ್ರಮ ನಿರೂಪಿಸಿದರು.

error: Content is protected !!