ಬೆಳ್ತಂಗಡಿ :ಮಂಗಳೂರು ವಿಲ್ಲುಪುರಂ ರಾಷ್ಟ್ರೀಯ ಹೆದ್ದಾರಿಯಲ್ಲಿರುವ ಗುಂಡಿಗಳನ್ನು ತಕ್ಷಣ ಮುಚ್ಚಲು ಆಗ್ರಹಿಸಿ ಶನಿವಾರ ಗುರುವಾಯನಕೆರೆಯಲ್ಲಿ ರಸ್ತೆತಡೆ ನಡೆಸಿ ಆಕ್ರೋಶ ವ್ಯಕ್ತಪಡಿಸಲಾಯಿತು.
ಬೆಳ್ತಂಗಡಿ ಉದ್ಯಮಿ ಯಶವಂತ ಆರ್ ಬಾಳಿಗ ಅವರ ನೇತೃತ್ವದಲ್ಲಿ ನಡೆದ ಪ್ರತಿಭಟನೆಯನ್ನು ಉದ್ದೇಶಿಸಿ ನ್ಯಾಯವಾದಿ ಕಾಂಗ್ರೆಸ್ ಮುಖಂಡ ಮನೋಹರ್ ಇಳಂತಿಲ ಮಾತನಾಡಿ ಕಳೆದ ಎರಡು ವರ್ಷಗಳಿಂದ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಚರಿಸಲು ಅಸಾಧ್ಯವಾಗಿದ್ದರೂ ಇದೇ ರಸ್ತೆಯಲ್ಲಿ ದಿನನಿತ್ಯ ಸಂಚರಿಸುವ ಶಾಸಕ ಹರೀಶ್ ಪೂಂಜಾ ಕಣ್ಣಿಲ್ಲದವರಂತೆ ವರ್ತಿಸುತ್ತಿದ್ದಾರೆ , ಸಂಸದರು ತಿಂಗಳಲ್ಲಿ ಎರಡು ಬಾರಿ ಬೆಳ್ತಂಗಡಿಗೆ ಬಂದರೂ ಆಕಾಶದಲ್ಲಿ ಬಂದವರಂತೆ ವರ್ತಿಸುತ್ತಿದ್ದಾರೆ ಎಂದು ಆರೋಪಿಸಿದರು. ರಸ್ತೆ ಗುಂಡಿಗಳಿಂದ ವಾಹನ ಸವಾರರು , ಪ್ರಯಾಣಿಕರು ನಿತ್ಯ ತೊಂದರೆ ಅನುಭವಿಸುತ್ತಿದ್ದರೂ ಜನಪ್ರತಿನಿಧಿಗಳು ಇನ್ನೂ ಎಚ್ಚರಗೊಳ್ಳದಿರುವುದು ನಮ್ಮ ದುರಂತ ಎಂದರು. ಉದ್ಯಮಿ ಯಶವಂತ ಆರ್ ಬಾಳಿಗ ಮಾತನಾಡಿ ವಾರದೊಳಗೆ ರಾಷ್ಟ್ರೀಯ ಹೆದ್ದಾರಿ ಗುಂಡಿಗಳನ್ನು ಮುಚ್ಚದಿದ್ದರೆ ಶಾಸಕರ ಕಛೇರಿ ಚಲೋ ಕಾರ್ಯಕ್ರಮ ಹಮ್ಮಿಕೊಳ್ಳಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ ಅವರು ನಮ್ಮ ಹೋರಾಟ ರಾಜಕೀಯ ರಹಿತವಾಗಿದೆ. ಮುಂದಿನ ದಿನಗಳಲ್ಲಿ ಉಗ್ರ ಸ್ವರೂಪದ ಪ್ರತಿಭಟನೆಯೊಂದೆ ನಮ್ಮ ಮುಂದಿರುವ ಅಸ್ತ್ರ ಎಂದರು.
ಪ್ರತಿಭಟನೆ ಉದ್ದೇಶಿಸಿ ಮಾತನಾಡಿದ ಶೇಖರ್ ಲಾಯಿಲ , ಶಾಸಕ , ಸಂಸದರ ನಿರ್ಲಕ್ಷ್ಯದಿಂದ ಈ ರಸ್ತೆಯಲ್ಲಿ ಗುಂಡಿಗಳು ನಿರ್ಮಾಣಗೊಂಡಿದೆ. ಗುಂಡಿಗಳಿಂದ ನೂರಾರು ವಾಹನ ಸವಾರರು ಬಿದ್ದು ಗಾಯಗೊಂಡಿದ್ದು , ವಾಹನ ಸವಾರರ ಸಾವಿಗಾಗಿ ಶಾಸಕ, ಸಂಸದರು ಕಾಯುವಂತಿದೆ. ಇಂತಹ ರಕ್ತಪಿಪಾಸು ಸಂಸ್ಕೃತಿ ವಿರುದ್ಧ ಸಂಘಟಿತ ಹೋರಾಟ ಅಗತ್ಯವಿದೆ ಎಂದರು.
ಪ್ರತಿಭಟನೆಯ ನೇತೃತ್ವವನ್ನು ಯುವ ಕಾಂಗ್ರೆಸ್ ಅಧ್ಯಕ್ಷ ಅನಿಲ್ ಪೈ , ಯುವ ಇಂಟೆಕ್ ಅಧ್ಯಕ್ಷ ನವೀನ್ ಗೌಡ ಸವಣಾಲು , ಯುವ ಕಾಂಗ್ರೆಸ್ ನಾಯಕ ಪ್ರಜ್ವಲ್ ಜೈನ್ ಅಳದಂಗಡಿ , ಸಾರ್ವಜನಿಕರಾದ ಲಾರೆನ್ಸ್ ಕೈಕಂಬ ವಹಿಸಿದ್ದರು.
.