ಬೆಳ್ತಂಗಡಿ: ಭಾರೀ ಮಳೆ ಹಲವೆಡೆ ಭೂಕುಸಿತ, ಮನೆಗಳಿಗೆ ಹಾನಿ: ಧರೆಗುರುಳಿದ ಬೃಹತ್ ಮರಗಳು, ಮುರಿದು ಬಿದ್ದ ವಿದ್ಯುತ್ ಕಂಬಗಳು: ಶಿರಾಡಿ ಘಾಟ್ ಬಂದ್ : ದಿಡುಪೆ ಬಳಿ ಭಾರೀ ಶಬ್ದ :

 

 

ಬೆಳ್ತಂಗಡಿ: ತಾಲೂಕಿನಾದ್ಯಂತ  ಭಾರೀ ಮಳೆಯಾಗುತಿದ್ದು ತಾಲೂಕಿನ ವಿವಿಧೆಡೆಗಳಲ್ಲಿ ಹಾನಿ ಸಂಭವಿಸುತ್ತಿದೆ
ಈಗಾಗಲೇ ಮಂಗಳೂರು ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯ ಶಿರಾಡಿ ಘಾಟಿ ರಸ್ತೆಯು ಕುಸಿದಿದ್ದು ವಾಹನಗಳ ಸಂಚಾರ ನಿಷೇಧಿಸಲಾಗಿದೆ.

 

 

ಮಂಗಳೂರು ವಿಲ್ಲುಪುರಂ ರಾಷ್ಟ್ರೀಯ ಹೆದ್ದಾರಿಯ ಚಾರ್ಮಾಡಿ ಘಾಟಿಯಲ್ಲೂ ಅಲ್ಲಲ್ಲಿ ಭೂಕುಸಿತಗಳು ಉಂಟಾಗಿದ್ದು ಅಪಾಯದ ಸ್ಥಿತಿ ನಿರ್ಮಾಣವಾಗಿದೆ. ದಿಡುಪೆ ಬಳಿ ದೊಡ್ಡ ಶಬ್ದವೊಂದು ಮದ್ಯಾಹ್ನ ಕೇಳಿಬಂದಿದ್ದು ಜಲಸ್ಫೋಟದ ಸೂಚನೆಯೇ ಎಂದು ಸ್ಥಳೀಯರು ಆತಂಕ ಪಡುವಂತಾಗಿದೆ.

 

 

 

 

ಮಲವಂತಿಗೆ ಗ್ರಾಮದ ಕುರುಬರ ಗುಡ್ಡೆ ವಾಸದ ಮನೆ ಕುಸಿದು ಹಾನಿಯಾಗಿದೆ. ಗುಡ್ಡ ಕುಸಿದು ಹಾನಿಯಾದ ಪರಾರಿ ಸುಂದರ ಪೂಜಾರಿ ಅವರ ಮನೆಗೆ ಶಾಸಕ ಹರೀಶ್ ಪೂಂಜ
ಸೂಚನೆಯಂತೆ ಹತ್ತು ಸಾವಿರ ಹಾಗೂ ದಿನಸಿ
ಸಾಮಾಗ್ರಿಗಳನ್ನು ಉಪಾಧ್ಯಕ್ಷ ದಿನೇಶ್ ಗೌಡ ನೀಡಿ ಸ್ಪಂದಿಸಿದ್ದಾರೆ.

 

 

ಮುಂಡಾಜೆ ರಾಷ್ಟ್ರೀಯ ಹೆದ್ದಾರಿಗೆ ಬೃಹತ್ ಮರ ಬಿದ್ದು ಸುಮಾರು ಎರಡು ಗಂಟೆಗಳ ತನಕ ವಾಹನ ಸಂಚಾರಕ್ಕೆ ತೊಂದರೆಯಾಗಿದ್ದಲ್ಲದೇ ಹಲವಾರು ವಿದ್ಯುತ್ ಕಂಬಗಳು ಮುರಿದು ಬಿದಿದೆ.ಕಲ್ಲೇರಿ ಬಳಿ ರಸ್ತೆಗೆ ಮರ ಬಿದ್ದ ಪರಿಣಾಮ ಕೆಲವು ತಾಸು ರಸ್ತೆ ತಡೆ ಉಂಟಾಗಿ ವಾಹನ ಸಂಚಾರಕ್ಕೆ ತೊಡಕುಂಟಾಗಿದೆ.

 

ಮಿತ್ತಬಾಗಿಲು ಸಮೀಪದ ಕಿಲ್ಲೂರು ಎಂಬಲ್ಲಿ ಅಂಗನವಾಡಿ ಶಾಲೆಯ ಪಕ್ಕದ ಗುಡ್ಡ ಕುಸಿತಗೊಂಡಿದೆ. ಮುಂಡಾಜೆ ರಾಷ್ಟ್ರೀಯ ಹೆದ್ದಾರಿ ಪಕ್ಕದ ಭಿಡೆ ಕ್ರಾಸ್ ಬಳಿ ಮನೆ ಹಿಂಭಾಗದ ಗುಡ್ಡ ಕುಸಿದು ಶಕುಂತಲಾ ಮೆಹೆಂದಳೆ ಎಂಬವರ ಮನೆಗೆ ಮಳೆ ನೀರು ನುಗ್ಗಿದೆ. ಸ್ಥಳೀಯರು ಇನ್ನಷ್ಟು ಕುಸಿತ ಉಂಟಾಗದಂತೆ ಟರ್ಪಲ್ ಹೊದಿಸಿ, ಮಣ್ಣು ತೆರವುಗೊಳಿಸಿ ನೀರು ಮನೆಗೆ ನುಗ್ಗದಂತೆ ರಕ್ಷಣಾ ಕಾರ್ಯ ಮಾಡಿದ್ದಾರೆ.

 

 

 

ಲಾಯಿಲ ಗ್ರಾಮದ ಅಗಳಿ ಎಂಬಲ್ಲಿ ದೊಡ್ಡ ಮರವೊಂದು ರಸ್ತೆಗೆ ಅಡ್ಡಲಾಗಿ ಬಿದ್ದು ಸಂಚಾರಕ್ಕೆ ತಡೆಯಾಗಿದ್ದಲ್ಲದೇ ವಿದ್ಯುತ್ ಪರಿವರ್ತಕ ಸೇರಿದಂತ ಹಲವಾರು ವಿದ್ಯುತ್ ಕಂಬಗಳು ಉರುಳಿಬಿದ್ದಿವೆ. ಮಾಹಿತಿ ಪಡೆದ ಲಾಯಿಲ ಗ್ರಾಮ ಪಂಚಾಯತ್ ಮರ ತೆರವುಗೊಳಿಸಿ ಸಂಚಾರಕ್ಕೆ ಅನುವು ಮಾಡಿಕೊಟ್ಟಿದೆ. ಅದೇ ರೀತಿ ಚಂದ್ಕೂರು ದೇವಸ್ಥಾನ ನಿರ್ಪರಿ ಎಂಬಲ್ಲಿ ಬೃಹತ್ ಗಾತ್ರದ ಮರ ರಸ್ತೆಗೆ ಹಾಗೂ 32 ಕೆ.ವಿ. ವಿದ್ಯುತ್ ಲೈನ್ ಗೆ ಬಿದ್ದು ಅಪಾಯಕಾರಿ ಸ್ಥಿತಿಯಲ್ಲಿ ನಿರ್ಮಾಣವಾಗಿತ್ತು. ಈ ಬಗ್ಗೆ ತಕ್ಷಣ ಮಾಹಿತಿ ಪಡೆದ ಗ್ರಾಮ ಪಂಚಾಯತ್ ಮೆಸ್ಕಾಂ ಇಲಾಖೆಯ ಮೂಲಕ ಮರ ತೆರವಿಗೆ ಕ್ರಮ ಕೈಗೊಂಡಿದ್ದಾರೆ.

 

 

 

ಮಿತ್ತಬಾಗಿಲು ಎಂಬಲ್ಲಿ ಅಂಗನವಾಡಿ ಶಾಲೆಯ ಪಕ್ಕದ ಗುಡ್ಡ ಕುಸಿತಗೊಂಡಿದೆ. ಬಜಿರೆ ಗ್ರಾಮದ ರತ್ನ ಎಂಬವರ ಮನೆ ಕುಸಿದಿದೆ. ಕಳಿಯ ಗ್ರಾಮದ ಸ್ಟ್ಯಾನಿ ಡಿ ಸೋಜ ಎಂಬವರ ತೋಟಕ್ಕೆ ಗುಡ್ಡದ ಮಣ್ಣು ಕುಸಿದು ಬಿದ್ದು ಅಡಿಕೆ ಮರಗಳಿಗೆ ಹಾನಿಯಾಗಿದೆ. ತೋಟತ್ತಾಡಿಯ ಸಿಲ್ವಿ ವಿಜು ಅವರ ಮನೆಯು ಮಳೆಗೆ ಬಿದ್ದು ಸಂಪೂರ್ಣ ಹಾನಿ ಸಂಭವಿಸಿದೆ.‌ ಪಡಂಗಡಿ ಎಂಬಲ್ಲಿ ಹಾಜಿರಾ ಅವರ ಮನೆಯ ಒಂದು ಭಾಗ ಕುಸಿದು ಬಿದ್ದಿದೆ.

 

 

 

 

ಮಿತ್ತಬಾಗಿಲು ಗ್ರಾಮದ ಕಿಲ್ಲೂರು ಬಳಿ ಗುಡ್ಡ ಕುಸಿತ ಉಂಟಾಗಿದೆ. ಹೊಸಂಗಡಿ ಸಮೀಪ ಆನಂದ ಪೂಜಾರಿ ಅವರ ತೋಟಕ್ಕೆ ಗುಡ್ಡ ಕುಸಿದು ತೋಟಕ್ಕೆ ನೀರು ನುಗ್ಗಿದೆ. ಲಾಯಿಲದ ಪುತ್ರಬೈಲು ಎಂಬಲ್ಲಿ ಹಳ್ಳದ ನೀರು ಭತ್ತದ ಕೃಷಿ ಗದ್ದೆಗೆ ನುಗ್ಗಿ ಕೃಷಿ ಸಂಪೂರ್ಣ ಹಾಳಾಗಿದೆ.
ತಾಲೂಕಿನ‌ ವಿವಿಧ ಕಡೆಗಳಲ್ಲಿ ಇನ್ನಷ್ಟು ಹಾನಿ ಸಂಭವಿಸಿದ್ದು ಹಲವೆಡೆ ಮರ ಬಿದ್ದು ವಿದ್ಯುತ್ ಕಂಬಗಳಿಗೆ ಹಾನಿಯುಂಟಾಗಿ ವಿದ್ಯುತ್ ವ್ಯತ್ಯಯ ಉಂಟಾಗಿದೆ ಮೆಸ್ಕಾ ಇಲಾಖೆಯ ಸಿಬ್ಬಂದಿಗಳು ದುರಸ್ತಿಗೊಳಿಸಲು ಶ್ರಮ ಪಡುತಿದ್ದರೂ ಭಾರೀ ಮಳೆಯಿಂದ ಅಡಚಣೆಯಾಗುತ್ತಿದೆ. ಮಳೆ ಮುಂದುವರಿದಲ್ಲಿ ಇನ್ನಷ್ಟು ಹಾನಿ ಸಂಭವಿಸುವ ಅಪಾಯವಿದೆ.

error: Content is protected !!