ಜು13 ರಿಂದ ಆ 29 ರ ವರೆಗೆ ಕನ್ಯಾಡಿ ಶ್ರೀಗಳ ಚಾತುರ್ಮಾಸ್ಯ ವ್ರತಾಚರಣೆ: ರಾಜ್ಯದ ವಿವಿಧ ಮಂತ್ರಿಗಳು, ಗಣ್ಯರು ಭಾಗಿ: ಪತ್ರಿಕಾಗೋಷ್ಠಿಯಲ್ಲಿ ಶಾಸಕ ಹರೀಶ್ ಪೂಂಜ ಹೇಳಿಕೆ:

 

 

ಬೆಳ್ತಂಗಡಿ: ಶ್ರೀರಾಮ ಕ್ಷೇತ್ರ ಕನ್ಯಾಡಿ ಮಹಾಸಂಸ್ಥಾನದ ಜಗದ್ಗುರು ಪೀಠದ ಪೀಠಾಧೀಶರಾದ ಶ್ರೀ ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿಯವರ ಮೂರನೇ ಚಾತುರ್ಮಾಸ್ಯ ವೃತ ಕಾರ್ಯಕ್ರಮ ಜುಲೈ 13 ಬುಧವಾರದಿಂದ ಆ.29 ಸೋಮವಾರ  ತನಕ ಕಲ್ಮಂಜದ ದೇವರಗುಡ್ಡ ಶ್ರೀ ಗುರುದೇವ ಮಠದಲ್ಲಿ ನಡೆಯಲಿದೆ ಎಂದು ಶಾಸಕ ಹಾಗೂ ಚಾತುರ್ಮಾಸ್ಯ ಸಮಿತಿಯ ಅಧ್ಯಕ್ಷ ಹರೀಶ್ ಪೂಂಜ ತಿಳಿಸಿದರು.
ಅವರು ಜು.12ರಂದು ಬೆಳ್ತಂಗಡಿಯ ಪ್ರವಾಸಿ ಮಂದಿರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.

ಜಿಲ್ಲೆಯ ಮಂತ್ರಿ, ಶಾಸಕರ ಸಹಿತ ರಾಜ್ಯದ ಮಂತ್ರಿಗಳು, ಶಾಸಕರು ಹಾಗೂ ಅನೇಕ ಜನಪ್ರತಿನಿಧಿಗಳು ಸೇರಿದಂತೆ ಗಣ್ಯರು ಈ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದು ತಾಲೂಕಿನ 81 ಗ್ರಾಮಗಳ ಗ್ರಾಮಸ್ಥರು, ಕರ್ನಾಟಕದ ನಾನಾ ಜಿಲ್ಲೆಗಳ ಗುರುಗಳ ಶಿಷ್ಯ ವೃಂದ ಹಾಗೂ ಭಕ್ತರು ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಲಿದ್ದಾರೆ. ಚಾತುರ್ಮಾಸ್ಯ ಕಾರ್ಯಕ್ರಮದ ಪೂರ್ವಭಾವಿ ವ್ಯವಸ್ಥೆಗಳು ಪೂರ್ಣಗೊಂಡಿದ್ದು ಅಂದಾಜು ಸುಮಾರು 75 ಲಕ್ಷ ರೂ.ವೆಚ್ಚದಲ್ಲಿ ಶಾಶ್ವತ ಸಭಾಗೃಹ,ಅನ್ನಛತ್ರ, ಪಾಕ ಶಾಲೆ ನಿರ್ಮಿಸಲಾಗಿದೆ.
ಜು.13 ರಂದು ಮಂಗಳೂರು ಸಂಸದ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಭಾಗವಹಿಸಲಿದ್ದಾರೆ. 48 ದಿನಗಳವರೆಗೆ ನಡೆಯುವ ಚಾತುರ್ಮಾಸ್ಯದಲ್ಲಿ ಭಜನೆ ಕಾರ್ಯಕ್ರಮವನ್ನು ತಾಲೂಕಿನ ಎಲ್ಲ ಗ್ರಾಮಗಳ ಭಜನೆ ತಂಡಗಳು ನಡೆಸಿಕೊಡಲಿವೆ. ಶನಿವಾರ,ಭಾನುವಾರ ಸಾಂಸ್ಕೃತಿಕ ಕಾರ್ಯಕ್ರಮಗಳು, ಪ್ರತೀ ಸೋಮವಾರ ವಿಶೇಷ ಯಜ್ಞ, ಯಾಗಾದಿಗಳು ಹಾಗೂ ಪ್ರತಿದಿನ ಅನ್ನದಾನ ಸೇವೆ ನಡೆಯಲಿದೆ. ಎಂದ ಅವರು

ಜಿಲ್ಲೆಯ ಎಲ್ಲಾ ವಿಧಾನಸಭಾ ಕ್ಷೇತ್ರಗಳಿಂದ ಹೊರೆ ಕಾಣಿಕೆ ಸಮರ್ಪಣೆಗೊಳ್ಳಲಿದೆ. ಸುಳ್ಯದಿಂದ ಸಚಿವ ಅಂಗಾರ ಅವರ ನೇತೃತ್ವದಲ್ಲಿ 15 ಕ್ವಿಂಟಾಲ್ ಅಕ್ಕಿ, ಪುತ್ತೂರಿನಿಂದ ಶಾಸಕ ಸಂಜೀವ ಮಠಂದೂರು ಅವರ ನೇತೃತ್ವದಲ್ಲಿ 5 ಕ್ವಿಂ.ಸಕ್ಕರೆ, ಬಂಟ್ವಾಳದಿಂದ ಶಾಸಕ ರಾಜೇಶ್ ನಾಯ್ಕ್ ನೇತೃತ್ವದಲ್ಲಿ 25 ಡಬ್ಬಿ ಎಣ್ಣೆ, ಮಂಗಳೂರು ದಕ್ಷಿಣದಿಂದ ಶಾಸಕ ವೇದವ್ಯಾಸ್ ಕಾಮತ್ ನೇತೃತ್ವದಲ್ಲಿ ದಿನಸಿ ಸಾಮಗ್ರಿ, ಮಂಗಳೂರು ಉತ್ತರದಿಂದ ಶಾಸಕ ಭರತ್ ಶೆಟ್ಟಿ ನೇತೃತ್ವದಲ್ಲಿ 10 ಕ್ವಿಂ. ಅಕ್ಕಿ, ಮೂಡುಬಿದ್ರೆಯ ಶಾಸಕ ಉಮಾನಾಥ ಕೋಟ್ಯಾನ್ ನೇತೃತ್ವದಲ್ಲಿ 3 ಕ್ವಿಂ. ಮೆಣಸು, ಉಳ್ಳಾಲದಿಂದ ಸತೀಶ್ ಕುಂಪಲ ನೇತೃತ್ವದಲ್ಲಿ 5 ಕ್ವಿಂ. ಬೆಲ್ಲ,ಹಾಗೂ ಬೆಳ್ತಂಗಡಿಯಿಂದ ತೆಂಗಿನಕಾಯಿ ಸಹಿತ ಇತರ ಸಾಮಗ್ರಿಗಳು ಕ್ಷೇತ್ರಕ್ಕೆ ಸಮರ್ಪಣೆಗೊಳ್ಳಲಿವೆ.ಎಂದು ಮಾಹಿತಿ ನೀಡಿದರು. ಪತ್ರಿಕಾಗೋಷ್ಠಿಯಲ್ಲಿ
ಚಾತುರ್ಮಾಸ್ಯ ಸಮಿತಿ ಪ್ರಧಾನ ಸಂಚಾಲಕ ಜಯಂತ ಕೋಟ್ಯಾನ್, ಪ್ರಧಾನ ಕಾರ್ಯದರ್ಶಿ ಗಣೇಶ್ ಗೌಡ ನಾವೂರು,ಸಂಚಾಲಕ ಸೀತಾರಾಮ ಬೆಳಾಲು ಉಪಸ್ಥಿತರಿದ್ದರು.

error: Content is protected !!