ಬೆಳ್ತಂಗಡಿ:ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಒಂದು ವಾರದಿಂದ ಸತತವಾಗಿ ಮತ್ತು ನಿರಂತರವಾಗಿ ಮಳೆ ಸುರಿಯುತ್ತಿದೆ.ವ್ಯಾಪಕವಾಗಿ ಮಳೆ ಬೀಳುತ್ತಿರುವ ಕಾರಣ ತಗ್ಗು ಪ್ರದೇಶಗಳು ಜಲಾವೃತಗೊಂಡಿರುತ್ತದೆ.ಹಾಗೂ ಭಾರತೀಯ ಹವಾಮಾನ ಇಲಾಖೆಯಿಂದ ನೀಡಲಾದ ಹವಾಮಾನ ಮುನ್ಸೂಚನೆ ಪ್ರಕಾರ ಮುಂದಿನ ಎರಡು ದಿನಗಳ ಕಾಲ ರೆಡ್ ಅಲರ್ಟ್ ಇದ್ದು ನಿರಂತರವಾಗಿ ಮಳೆ ಬೀಳುವ ಸಾಧ್ಯತೆ ಇದೆ. ಈ ರೀತಿ ಮಳೆ ಬಂದಲ್ಲಿ ಶಾಲಾ ಮಕ್ಕಳಿಗೆ ಶಾಲೆಗೆ ಬರಲು ಕಷ್ಟಸಾಧ್ಯವಾಗಲಿರುವುದರಿಂದ ಮಕ್ಕಳ ಹಿತದೃಷ್ಟಿಯಿಂದ ಜುಲೈ 11 ರಂದು ಸೋಮವಾರ ಜಿಲ್ಲೆಯಾದ್ಯಂತ ಅಂಗನವಾಡಿ, ಕೇಂದ್ರಗಳಿಗೆ ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳಿಗೆ (1 ರಿಂದ 10 ನೇ ತರಗತಿವರೆಗೆ ಮಾತ್ರ) ರಜೆ ಘೋಷಿಸಲಾಗಿದೆ.ಪದವಿ ಪೂರ್ವ, ಪದವಿ ಸ್ನಾತಕೋತ್ತರ ಪದವಿ ,ಡಿಪ್ಲೋಮಾ, ಐಟಿಐ,ಕಾಲೇಜುಗಳು ಜುಲೈ 11 ರಿಂದ ಎಂದಿನಂತೆ ತೆರಯುತ್ತದೆ.ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳಿಗೆ ಪ್ರಸ್ತುತ ಎಷ್ಟು ದಿನಗಳವರೆಗೆ ರಜೆ ನೀಡಲಾಗುತ್ತದೋ ಅಷ್ಟು ದಿನಗಳಿಗೆ ಅನುಗುಣವಾಗಿ ಮತ್ತು ಪಠ್ಯವನ್ನು ಪೂರ್ಣಗೊಳಿಸಲು ಶನಿವಾರ ಪೂರ್ಣ ದಿನ ಶಾಲೆ ತೆರೆಯುವುದು ಹಾಗೂ ದಸರಾ ರಜಾ ದಿನಗಳಲ್ಲಿ ಸಹ ಶಾಲೆಗಳನ್ನು ನಡೆಸಲು ಅಗತ್ಯ ಕ್ರಮ ವಹಿಸುವುದು. ಒಂದು ವೇಳೆ ಮುಂದಿನ ದಿನಗಳಲ್ಲಿ ರೆಡ್ ಅಲರ್ಟ್ ಮುಂದುವರಿದು ನಿರಂತರವಾಗಿ ಮಳೆ ಬೀಳುತಿದ್ದಲ್ಲಿ ಜಿಲ್ಲೆಯಾದ್ಯಂತ ರಜೆ ನೀಡುವುದರ ಬದಲಾಗಿ ಯಾವ ಪ್ರದೇಶಗಳಲ್ಲಿ ಮಳೆಯ ಪ್ರಮಾಣ ಹೆಚ್ಚಾಗಿರುತ್ತದೋ ಅಂತಹ ಪ್ರದೇಶಗಳಲ್ಲಿ ಶಾಲಾ ಹಂತದಲ್ಲಿಯೇ ರಜೆ ಘೋಷಿಸಲು ಅಗತ್ಯ ಕ್ರಮ ವಹಿಸುವ ಅಧಿಕಾರವನ್ನು ಆಯಾ ಶಾಲೆಗಳಿಗೆ ನೀಡಲಾಗುವುದು.ಇದರಂತೆ ಶಾಲಾ ಆಡಳಿತ ಮಂಡಳಿಯವರು ಹಾಗೂ ಶಾಲಾಭಿವೃದ್ಧಿ ಸಮಿತಿಯವರು ಸೂಕ್ತ ಪೂರ್ವ ಸಿದ್ಧತೆಯನ್ನು ಮಾಡಿಕೊಳ್ಳುವಂತೆ ದ.ಕ.ಜಿಲ್ಲಾಧಿಕಾರಿ ರಾಜೇಂದ್ರ ಕೆ.ವಿ. ಆದೇಶದಲ್ಲಿ ತಿಳಿಸಿದ್ದಾರೆ.