ಬೆಳ್ತಂಗಡಿ: ತಾಲೂಕಿನಾದ್ಯಂತ ಭಾರೀ ಮಳೆಗೆ ಅನಾಹುತ: ವೇಣೂರು, ಹಟ್ಟಿ ಕುಸಿದು ದನ ಸಾವು: ಮುಂಡಾಜೆ, ಗುಡ್ಡ ಕುಸಿತದಿಂದ ಅಪಾಯದಲ್ಲಿ ಮನೆ, ಮನೆಯಲ್ಲಿದ್ದವರ ಸ್ಥಳಾಂತರ: ಬಾವಿ ಕುಸಿದು ಮನೆಗೆ ಹಾನಿ: ನದಿಗಳಲ್ಲಿ ನೀರಿನ ಮಟ್ಯ ಏರಿಕೆ ತಗ್ಗು ಪ್ರದೇಶಗಳ ತೋಟಕ್ಕೆ ನುಗ್ಗಿದ ನೀರು

 

 

ಬೆಳ್ತಂಗಡಿ: ತಾಲೂಕಿನಾದ್ಯಂತ ಕಳೆದ ನಾಲ್ಕು ದಿನಗಳಿಂದ ಭಾರೀ ಮಳೆ ಸುರಿಯುತಿದ್ದು ತಾಲೂಕಿನ ವಿವಿಧೆಡೆ ಮಳೆಗೆ ಗುಡ್ಡ ಹಾಗೂ ಮನೆ ಕುಸಿತಗೊಂಡ ಘಟನೆಗಳು ನಡೆದಿವೆ.
ವೇಣೂರು ಸಮೀಪ ಅಬೂಬಕ್ಕರ್ ಎಂಬವರ ಬಾವಿ ಕುಸಿದು ಮನೆ ಗೋಡೆಗಳಿಗೆ ಹಾನಿ ಸಂಭವಿಸಿದೆ. ವೇಣೂರು ಗ್ರಾಮದ ರೇವತಿ ಎಂಬವರ ದನದ ಹಟ್ಟಿ ಕುಸಿದು ದನವೊಂದು ಸಾವನ್ನಪ್ಪಿದೆ. ಬಳ್ಳಮಂಜ ಅರಮನೆಗುಡ್ಡೆ ಎಂಬಲ್ಲಿ ಮರಿಯಮ್ಮ ಎಂಬವರ ಮನೆ ಬಿದ್ದು ಭಾಗಶಃ ಹಾನಿಯಾಗಿದೆ.
ಮುಂಡಾಜೆ ಗ್ರಾಮದ ಪಿಲತಡ್ಕ ಎಂಬಲ್ಲಿ ಶ್ರೀಧರ ಪೂಜಾರಿ ಅವರ ಮನೆಗೆ ಗುಡ್ಡ ಕುಸಿದು ಬಿದ್ದು ಮನೆ ಅಪಾಯಕಾರಿ ಸ್ಥಿತಿಯಲ್ಲಿದೆ.

 

 


ಮನೆಯವರನ್ನು ಸುರಕ್ಷತೆ ದೃಷ್ಟಿಯಿಂದ. ಸ್ಥಳೀಯ ಸಂಬಂಧಿಕರ ಮನೆಗೆ ಸ್ಥಳಾಂತರ ಗೊಳಿಸಲಾಗಿದೆ. ಸ್ಥಳಕ್ಕೆ ಗ್ರಾಮ ಪಂಚಾಯಿತಿ ಸದಸ್ಯ ಗಣೇಶ್ ಬಂಗೇರ ಮತ್ತು ಅಧಿಕಾರಿಗಳು ತೆರಳಿ ಪರಿಶೀಲನೆ ನಡೆಸಿದ್ದಾರೆ.

 

 

ಭಾರೀ ಮಳೆಯಿಂದ ಅಲ್ಲಲ್ಲಿ ಮರ ಬಿದ್ದು ವಿದ್ಯುತ್ ಕಂಬಗಳಿಗೂ ಹಾನಿ ಉಂಟಾಗಿರುವುದಲ್ಲದೆ ತಂತಿಗಳೂ ತುಂಡಾಗಿ ಬಿದ್ದು ವಿದ್ಯುತ್ ಸಮಸ್ಯೆಯಾಗಿದೆ. ಮೆಸ್ಕಾಂ ಲೈನ್ ಮ್ಯಾನ್ ಗಳು  ಮಳೆಯಲ್ಲೂ  ರಾತ್ರಿ ಹಗಲು ದುರಸ್ತಿ ಕೆಲಸ ಮಾಡುತಿದ್ದಾರೆ.   ನೇತ್ರಾವತಿ ಮೃತ್ಯುಂಜಯ,ಸೋಮವಾತಿ ನದಿಯ ನೀರಿನ ಮಟ್ಟ ಏರಿಕೆಯಾಗುತಿದ್ದು , ತಗ್ಗು ಪ್ರದೇಶಗಳ ತೋಟಗಳಿಗೆ ನೀರು ನುಗ್ಗುತ್ತಿದೆ. ಅದೇ ರೀತಿ ಹವಾಮಾನ ಇಲಾಖೆಯ ಮಾಹಿತಿಯಂತೆ ಇನ್ನೂ 48 ಗಂಟೆಗಳ ಕಾಲ ವಿಪರೀತ ಮಳೆಯಾಗುವ ಸೂಚನೆಯಿದ್ದು ಜಿಲ್ಲೆಯಾದ್ಯಂತ ರೆಡ್ ಅಲರ್ಟ್ ಘೋಷಣೆಯಾಗಿದೆ. ಶಾಲಾ ಕಾಲೇಜುಗಳಿಗೆ ಎರಡು ದಿನಗಳ ರಜೆ ನೀಡಿ ದ.ಕ ಜಿಲ್ಲಾಧಿಕಾರಿ ರಾಜೇಂದ್ರ ಕೆ.ವಿ. ಆದೇಶ ನೀಡಿದ್ದಾರೆ.

error: Content is protected !!