ಮಡಿಕೇರಿ: ಎರಡು ಮೂರು ದಿನಗಳ ಅಂತರದಲ್ಲಿ ಕೊಡಗು ಜಿಲ್ಲೆಯ ಕೆಲವೆಡೆ 3ನೇ ಬಾರಿಗೆ ಭೂ ಕಂಪಿಸಿದ್ದು, ಬೆಟ್ಟಗುಡ್ಡಗಳಲ್ಲಿ ವಾಸಮಾಡುವ ಜಿಲ್ಲೆಯ ಜನತೆಯಲ್ಲಿ ಮತ್ತೆ ಆತಂಕ ಉಂಟಾಗಿದೆ. ಹಾಗೆಯೇ ಸುಳ್ಯದಲ್ಲಿ ಎರಡನೇ ಬಾರಿ ಈ ಅನುಭವ ಆಗಿದೆ. 6 ದಿನದ ಹಿಂದೆ ಸೋಮವಾರಪೇಟೆ ಕೆಲವು ಭಾಗದಲ್ಲಿ ಭೂ ಕಂಪನವಾಗಿದ್ರೆ ಎರಡು ದಿನಗಳ ಹಿಂದೆ ಸಂಪಾಜೆ ಭಾಗದಲ್ಲಿ ಭೂ ಕಂಪನವಾಗಿ ಮನೆಗಳಿಗೆ ಹಾನಿಯಾಗಿತ್ತು. ಇಂದು ಬೆಳಿಗ್ಗೆ ಭಾಗಮಂಡಲ ಸುತ್ತಮುತ್ತಲಿನ ಭಾಗದಲ್ಲಿ ಭೂಮಿ ಕಂಪಿಸಿದೆ.ಸಂಜೆಯೂ ಕೆಲವೆಡೆ ಭೂ ಕಂಪಿಸಿದ ಬಗ್ಗೆ ಮಾಹಿತಿ ಹರಿದಾಡುತ್ತಿದೆ.
2018ರ ಘಟನೆ ನೆನಪಿಸಿದ ಭೂಕಂಪ:
ಜಿಲ್ಲೆಯಲ್ಲಿ 2018 ರಲ್ಲೂ ಕೂಡ ಬೆಟ್ಟ ಗುಡ್ಡಗಳು ಕುಸಿತಕ್ಕೂ ಮೊದಲೇ ಕೊಡಗಿನ ಬಹುತೇಕ ಭಾಗದಲ್ಲೂ ಭೂಮಿ ಕಂಪಿಸಿತ್ತು. ಅದಾದ ಕೆಲವೇ ದಿನಗಳಲ್ಲಿ ಜಲ ಪ್ರಳಯವಾಗಿ ಬೆಟ್ಟ ಗುಡ್ಡಗಳು ಕುಸಿದು ಹಲವಾರು ಜನರು ಪ್ರಾಣ ಕಳೆದುಕೊಂಡಿದ್ದರು. ಈ ಭೂ ಕಂಪನದಿಂದ ಜಿಲ್ಲೆಯ ಜನರು ಆತಂಕಗೊಂಡಿದ್ದು, 2018ರ ಘಟನೆ ಮರುಕಳಿಸಲಿದೆಯೇ ಎಂದು ಭಯ ಬಿದ್ದಿದ್ದಾರೆ.