ಉಜಿರೆ: ಧರ್ಮಸ್ಥಳದ ಶಾಂತಿವನ ಟ್ರಸ್ಟ್ ಆಶ್ರಯದಲ್ಲಿ ಆಯೋಜಿಸಲಾದ ರಾಜ್ಯಮಟ್ಟದ 19 ವರ್ಷದ ಅಂಚೆ-ಕುಂಚ ಸ್ಪರ್ಧೆಯ ವಿಜೇತರಿಗೆ ಜುಲೈ 4 ರಂದು ಸೋಮವಾರ ಪೂರ್ವಾಹ್ನ 11 ಗಂಟೆಗೆ ಧರ್ಮಸ್ಥಳದಲ್ಲಿ ಮಹೋತ್ಸವ ಸಭಾಭವನದಲ್ಲಿ ಪುರಸ್ಕಾರ ಸಮಾರಂಭ ಹಮ್ಮಿಕೊಳ್ಳಲಾಗಿದೆ.
ಚಲನಚಿತ್ರ ನಟ ಮಾಸ್ಟರ್ ಆನಂದ್ ಪುರಸ್ಕಾರ ನೀಡುವರು. ಇದೇ ಸಂದರ್ಭದಲ್ಲಿ ಪ್ರಸಕ್ತ ಶೈಕ್ಷಣಿಕ ವರ್ಷದ ಜ್ಞಾನವಿಕಾಸ ಮತ್ತು ಜ್ಞಾನಪ್ರಕಾಶ ಎಂಬ ನೈತಿಕ ಮೌಲ್ಯಾಧಾರಿತ ಪುಸ್ತಕಗಳನ್ನು ಖ್ಯಾತ ಸಾಹಿತಿ ಎಸ್.ಎನ್. ಸೇತುರಾಮ್ ಬಿಡುಗಡೆಗೊಳಿಸುವರು.
ಹೇಮಾವತಿ ವೀ. ಹೆಗ್ಗಡೆಯವರು ಮತ್ತು ಡಿ. ಹರ್ಷೇಂದ್ರ ಕುಮಾರ್ ಶುಭಾಶಂಸನೆ ಮಾಡುವರು.
ಶಿಕ್ಷಣ ಇಲಾಖೆಯ ಸಹನಿರ್ದೇಶಕ ಎಸ್.ಜಿ. ನಾಗೇಶ್ ಮುಖ್ಯ ಅತಿಥಿಯಾಗಿ ಭಾಗವಹಿಸುವರು.
ಧರ್ಮಸ್ಥಳದ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರು ಅಧ್ಯಕ್ಷತೆ ವಹಿಸುವರು.
ವಂಶಿಕ ಅಂಜನೀ ಕಶ್ಯಪ್‍ರೊಂದಿಗೆ ಮಕ್ಕಳ ಸಂವಾದ ಕಾರ್ಯಕ್ರಮ ನಡೆಯಲಿದೆ.
ಕುಂಚ-ಗಾನ-ನೃತ್ಯ ವೈಭವ:
ಉಡುಪಿಯ ಖ್ಯಾತ ಗಾಯಕಿ ಸಂಗೀತ ಬಾಲಚಂದ್ರ ಗಾಯನಕ್ಕೆ ಬಂಟ್ವಾಳದ ಮುರಳೀಧರ ಆಚಾರ್ ಕುಂಚದಲ್ಲಿ ಕಲಾ ರಚನೆ ಮಾಡಲಿದ್ದು, ಪುತ್ತೂರಿನ ನಾಟ್ಯರಂಗದ ವಿದುಷಿ ಮಂಜುಳಾ ಸುಬ್ರಹ್ಮಣ್ಯ ಮತ್ತು ಬಳಗದವರು ನೃತ್ಯ ಪ್ರದರ್ಶನ ನೀಡಲಿದ್ದಾರೆ.