ಬೆಳ್ತಂಗಡಿ: ಜಗತ್ತಿನಲ್ಲಿ ಅತ್ಯಂತ ಕ್ಷೀಪ್ರವಾಗಿ ಬೆಳೆದ ನಗರ ಬೆಂಗಳೂರು ಇವತ್ತು ಜಗತ್ತಿನ ಐಟಿ ಕ್ಷೇತ್ರದಲ್ಲಿ ಇಡೀ ಜಗತ್ತಿನಲ್ಲಿಯೇ ಪ್ರಸಿದ್ಧಿಯನ್ನು ಪಡೆದಿದೆ ಇದಕ್ಕಾಗಿಯೇ ವಿಶ್ವದ ವಿವಿಧ ಕಡೆಗಳಿಂದ ಯುವಕರು ಬೆಂಗಳೂರು ನಗರಕ್ಕೆ ಉದ್ಯೋಗಕ್ಕಾಗಿ ಬರಲು ಕಾರಣವಾಗಿದೆ ಇಂತಹ ಬೆಂಗಳೂರನ್ನು ಕಟ್ಟಿದವರು ಕೆಂಪೇಗೌಡ ಆಗಿದ್ದಾರೆ ಅವರ ದೂರದೃಷ್ಟಿ ಯೋಜನೆಗಳಿಂದಾಗಿ ಬೆಂಗಳೂರು ವಿಶ್ವ ಪ್ರಸಿದ್ಧಿಯನ್ನು ಪಡೆಯಲು ಕಾರಣವಾಗಿದೆ ಎಂದು ಶಾಸಕ ಹರೀಶ್ ಪೂಂಜ ಹೇಳಿದರು. ಅವರು ಜೂ 27 ರಂದು ಬೆಳ್ತಂಗಡಿ ಮಂಜುನಾಥ ಕಲಾಭವನದಲ್ಲಿ ನಡೆದ ರಾಷ್ಟ್ರೀಯ ಹಬ್ಬ ಹಾಗೂ ಮಹಾ ಪುರುಷರ ಜಯಂತಿ ಆಚರಣಾ ಸಮಿತಿ ಆಶ್ರಯದಲ್ಲಿ ನಾಡ ಪ್ರಭು ಕೆಂಪೇಗೌಡ ಜಯಂತಿ ಆಚರಣೆಯ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ನಾಡಿನ ಯುವಸಮೂಹಕ್ಕೆ ಬೆಂಗಳೂರು ಶಿಲ್ಪಿ ನಾಡಪ್ರಭು ಕೆಂಪೇಗೌಡರು ಆದರ್ಶವಾಗಬೇಕು. ಉತ್ತಮ ವ್ಯಕ್ತಿತ್ವ ನಿರ್ಮಿಸಿಕೊಂಡು ಬದುಕಲ್ಲಿ ಸಾಧನೆಗೈಯಲು ಕೆಂಪೇಗೌಡರ ಬದುಕು ಪ್ರೇರಣೆಯಾಗಬೇಕು. ದೂರದೃಷ್ಟಿ ಇದ್ದ ಕೆಂಪೇಗೌಡರು ಅಂದು ಬೆಂಗಳೂರು ನಗರವನ್ನು ಪ್ರಾಕೃತಿಕ ಸಮತೋಲನದಿಂದ ಅಭಿವೃದ್ಧಿಪಡಿಸಲು ನಗರದಲ್ಲಿ ಕೆರೆಗಳ ನಿರ್ಮಾಣ, ಉದ್ಯಾನವನಗಳ ನಿರ್ಮಾಣ, ರಸ್ತೆ ಬದಿಯ ಸಾಲುಮರಗಳ ಕಲ್ಪನೆಯೊಂದಿಗೆ ನಗರವನ್ನು ಕಟ್ಟಿ ಬೆಳೆಸಿದವರು ಎಂದು ಹೇಳಿದರು. ಬೆಳ್ತಂಗಡಿ ವಾಣಿ ಪದವಿಪೂರ್ವ ಕಾಲೇಜಿನ ಉಪನ್ಯಾಸಕಿ ಮೀನಾಕ್ಷಿ ನಾಡಪ್ರಭು ಕೆಂಪೇಗೌಡರ ಬದುಕಿನ ಬಗ್ಗೆ ವಿವರಿಸಿದರು. ವಿಧಾನ ಪರಿಷತ್ ಶಾಸಕ ಪ್ರತಾಪ್‌ಸಿಂಹ ನಾಯಕ್ ಮುಖ್ಯ ಅತಿಥಿಗಳಾಗಿ ಭಾಗವಹಿಸಿ, ನಮ್ಮ ಜೀವನದಲ್ಲಿ ಮಹಾ ಪುರುಷರ ಆದರ್ಶಗಳನ್ನು ಅಳವಡಿಸಿಕೊಂಡು ಬಂದಲ್ಲಿ ಇಂತಹ ಮಹಾಪುರುಷರ ಜಯಂತಿಗೆ ನಿಜವಾದ ಅರ್ಥಬರುತ್ತದೆ.
ಬೆಳ್ತಂಗಡಿ ಪಟ್ಟಣ ಪಂಚಾಯತ್ ಉಪಾಧ್ಯಕ್ಷ ಜಯಾನಂದ ಗೌಡ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಗೌಡರ ಯಾನೆ ಒಕ್ಕಲಿಗರ ಸಂಘದ ಅಧ್ಯಕ್ಷ ಕುಶಾಲಪ್ಪ ಗೌಡ ಪೂವಾಜೆ, ಬೆಳ್ತಂಗಡಿ ವಾಣಿ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಹೆಚ್. ಪದ್ಮ ಗೌಡ, ಬೆಳ್ತಂಗಡಿಯ ತಹಶೀಲ್ದಾರ್ ಹಾಗೂ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿಯ ಅಧ್ಯಕ್ಷ ಮಹೇಶ್ ಜೆ., ಉಪಸ್ಥಿತರಿದ್ದರು.
ಬೆಳ್ತಂಗಡಿ ತಾಲೂಕು ಪಂಚಾಯತ್ ಕಾರ್ಯನಿರ್ವಹಣಾಧಿಕಾರಿ ಕುಸುಮಾಧರ್ ಸ್ವಾಗತಿಸಿದರು.
.ಶಿಕ್ಷಕ ರಮೇಶ್ ಪೈಲಾರ್ ನಿರೂಪಿಸಿ ತಾಲೂಕು ಪಂಚಾಯತ್ ಕಾರ್ಯಕ್ರಮ ಸಂಯೋಜಕ ಜಯಾನಂದ ಧನ್ಯವಾದವಿತ್ತರು.