ಬೆಳ್ತಂಗಡಿ: ಕಲ್ಮಂಜ ಗ್ರಾಮದ ಹುಕ್ರೊಟ್ಟು ಎಂಬಲ್ಲಿ ಚಿನ್ನಮ್ಮ ಎಂಬ 80 ವರ್ಷದ ವೃದ್ಧೆಗೆ ಸೇರಿದ್ದ ಜಾಗದ ತಕರಾರಿನ ಕುರಿತು ‘ಪ್ರಜಾಪ್ರಕಾಶ ನ್ಯೂಸ್’ನಲ್ಲಿ ಶುಕ್ರವಾರ ವರದಿ ಪ್ರಕಟವಾಗಿದ್ದು, ಅಧಿಕಾರಿಗಳು ಶನಿವಾರ ರಜೆಯಿದ್ದರೂ ಸ್ಥಳಕ್ಕೆ ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ.
ಕಲ್ಮಂಜ ಗ್ರಾಮದ ಹುಕ್ರೊಟ್ಟು ಬಳಿ ಚಿನ್ನಮ್ಮ ಅವರದ್ದು ಎನ್ನಲಾದ ಸುಮಾರು 20 ಸೆಂಟ್ಸ್ ಜಾಗವನ್ನು ಸ್ಥಳೀಯ ವ್ಯಕ್ತಿಯೊಬ್ಬರು ಅತಿಕ್ರಮಣ ಮಾಡಲು ಯತ್ನಿಸಿ ಮನೆ ಸುತ್ತ ಅಳವಡಿಸಿದ್ದ ಬೇಲಿಯನ್ನು ಕಿತ್ತೆಸೆದು ಬೆದರಿಕೆ ಹಾಕುತ್ತಿದ್ದಾರೆ ಎಂದು ಆರೋಪಿಸಿ ಧರ್ಮಸ್ಥಳ ಠಾಣೆಗೆ ದೂರು ನೀಡಲಾಗಿತ್ತು. ಈ ಬಗ್ಗೆ ಮಾಹಿತಿ ಪಡೆದುಕೊಂಡ ‘ಪ್ರಜಾಪ್ರಕಾಶ ನ್ಯೂಸ್’ ತಂಡ ಸ್ಥಳಕ್ಕೆ ಭೇಟಿ ನೀಡಿ ವಾಸ್ತವ ವರದಿಯನ್ನು ಜೂ. 24 ರಂದು ಪ್ರಕಟಿಸಿತ್ತು. ವರದಿಗೆ ಸ್ಪಂದಿಸಿದ ಅಧಿಕಾರಿಗಳು ಜೂ. 25ರಂದು ಬೆಳಗ್ಗೆ ಗ್ರಾಮಲೆಕ್ಕಾಧಿಕಾರಿ ಪ್ರದೀಪ್ ಕುಮಾರ್ ಭೇಟಿ ನೀಡಿ ಚಿನ್ನಮ್ಮ ಅವರ ದಾಖಲೆಗಳನ್ನು ಪರಿಶೀಲಿಸಿದರು. ಕಂದಾಯ ಹಾಗೂ ಭೂದಾಖಲೆಗಳ ಪ್ರಕಾರ ಮೇಲ್ನೋಟಕ್ಕೆ ಸರ್ವೇ ನಂಬರ್ 120 ಸರಕಾರಿ ಸ್ಥಳ ಎಂಬುವುದಾಗಿ ಕಂಡು ಬರುತ್ತಿದೆ, ಈ ಬಗ್ಗೆ ಸೋಮವಾರ ಸರ್ವೇ ಇಲಾಖೆಯಿಂದ ಮಾಹಿತಿ ಪಡೆದು, ಮುಂದಿನ ಕ್ರಮ ತಕ್ಷಣ ತೆಗೆದುಕೊಳ್ಳಲಾಗುವುದು ಎಂದಿದ್ದಾರೆ. ಈ ಸಂದರ್ಭ ಗ್ರಾಮ ಪಂಚಾಯತ್ ಕಲ್ಮಂಜ ಉಪಾಧ್ಯಕ್ಷೆ ಶ್ರೀಮತಿ ವಿಮಲಾ ಉಪಸ್ಥಿರಿದ್ದರು.
ವರದಿ ಪ್ರಕಟಿಸಿ ಅಧಿಕಾರಿಗಳ ಗಮನ ಸೆಳೆದ ‘ಪ್ರಜಾಪ್ರಕಾಶ ನ್ಯೂಸ್’ ತಂಡಕ್ಕೆ ಹಾಗೂ ತಿಂಗಳ ನಾಲ್ಕನೇ ಶನಿವಾರ ರಜೆ ಇದ್ದರೂ ತಕ್ಷಣ ಸ್ಪಂದಿಸಿ ಸ್ಥಳ ಪರಿಶೀಲನೆ ನಡಸಿದ ವರ್ಗಾವಣೆಗೊಂಡು ಆಗಮಿಸಿದ ನೂತನ ಗ್ರಾಮ ಲೆಕ್ಕಾಧಿಕಾರಿ ನಡೆಗೆ ಸಾರ್ವಜನಿಕರು ಮೆಚ್ಚುಗೆ ವ್ಯಕ್ತಡಿಸಿದ್ದಾರೆ.