ಜ್ಞಾನದಾಹಿಗಳಿಗೆ ಜ್ಞಾನ ತುಂಬುವ ಪವಿತ್ರ ಕ್ಷೇತ್ರ ಗ್ರಂಥಾಲಯ: ಶಾಸಕ ಹರೀಶ್ ಪೂಂಜ ₹ 2 ಕೋ ವೆಚ್ಚದ ನೂತನ ಗ್ರಂಥಾಲಯಕ್ಕೆ ಶಿಲಾನ್ಯಾಸ ಕಾರ್ಯಕ್ರಮ

 

 

 

ಬೆಳ್ತಂಗಡಿ: ಗ್ರಂಥಾಲಯಗಳು ಅತ್ಯಂತ ಮಹತ್ವಪೂರ್ಣವಾಗಿದ್ದು ವ್ಯಕ್ತಿಯ ನಿತ್ಯ ಜೀವನಕ್ಕೆ ಬೇಕಾಗಿರುವ ಒಂದು ಭಾಗ ಈ ಕಲ್ಪನೆಯಲ್ಲಿ ಸರಕಾರ ಗ್ರಾಮಕ್ಕೊಂದು ಗ್ರಂಥಾಲಯ ಎಂಬ ಯೋಜನೆಯನ್ನು ಜಾರಿಗೊಳಿಸಿದ್ದು, ಸಾಮಾಜಿಕ ಜಾಲತಾಣಗಳು ಬಂದ ನಂತರ ಇದರ ಮೌಲ್ಯ ಕಳೆದುಕೊಂಡಿದೆ. ಆದರೆ ಓದುಗರನ್ನು ಆಕರ್ಷಿಸಬೇಕು, ವಿದ್ಯಾರ್ಥಿಗಳು ಹೆಚ್ಚಿನ ರೀತಿಯಲ್ಲಿ ಗ್ರಂಥಾಲಯದ ಜ್ಞಾನ ಲಾಭ ಪಡೆದುಕೊಳ್ಳಬೇಕು ಎಂಬ ಉದ್ದೇಶದಿಂದ ಬೆಳ್ತಂಗಡಿ ಯಲ್ಲಿ ರಾಜ್ಯಕ್ಕೆ ಮಾದರಿಯಾಗುವಂತಹ ಅತ್ಯುತ್ತಮ ರೀತಿಯ ಗ್ರಂಥಾಲಯ ನಿರ್ಮಾಣವಾಗಬೇಕು ಎಂಬ ಕಲ್ಪನೆಯೊಂದಿಗೆ 2 ಕೋಟಿ ರೂಪಾಯಿ ವೆಚ್ಚದಲ್ಲಿ ಮಾದರಿ ಗ್ರಂಥಾಲಯ ನಿರ್ಮಾಣವಾಗುತ್ತಿದ್ದು, ಈ ಗ್ರಂಥಾಲಯ ಜ್ಞಾನದಾಹಿಗಳಿಗೆ ಜ್ಞಾನತುಂಬುವ ಪವಿತ್ರ ಕ್ಷೇತ್ರವಾಗಬೇಕು ಎಂದು ಶಾಸಕ ಹರೀಶ್ ಪೂಂಜಾ ಹೇಳಿದರು.ಅವರು ಜೂನ್ 18ರಂದು ಬೆಳ್ತಂಗಡಿ ಸರಕಾರಿ ಪದವಿಪೂರ್ವ ಕಾಲೇಜು ಬಳಿ ನಿರ್ಮಾಣಗೊಳ್ಳಲಿರುವ 2 ಕೋಟಿ ರೂಪಾಯಿ ಅನುದಾನದ ಗ್ರಂಥಾಲಯ ಕಟ್ಟಡಕ್ಕೆ ಶಿಲಾನ್ಯಾಸ ನೆರವೇರಿಸಿ ಮಾತನಾಡುತ್ತಿದ್ದರು.ನವ ಬೆಳ್ತಂಗಡಿ ಎಂಬ ಕಲ್ಪನೆಯಲ್ಲಿ ಬಹುತೇಕ ಕಾಮಗಾರಿಗಳು ಪೂರ್ಣಗೊಳ್ಳುತ್ತಿದೆ. ಇದರ ಒಂದು ಭಾಗವಾಗಿ ಗ್ರಂಥಾಲಯ ಕಟ್ಟಡ ಹಾಗೂ ದೇಶಕ್ಕೆ ಮಾದರಿಯಾಗುವ ರೀತಿಯಲ್ಲಿ ಅರಸಿನಮಕ್ಕಿಯಲ್ಲಿ 25 ಕೋಟಿ ರೂಪಾಯಿ ವೆಚ್ಚದಲ್ಲಿ ಮಾದರಿ ಶಾಲೆ ನಿರ್ಮಾಣವಾಗುತ್ತಿದ್ದು, ಜೊತೆಗೆ ಬೆಳ್ತಂಗಡಿಯಲ್ಲಿ ಪ್ರವಾಸಿ ಬಂಗಲೆ ನಿರ್ಮಾಣವಾಗುತ್ತಿದೆ. ತಾಲೂಕು ಪಂಚಾಯತ್‌ನ ಕಟ್ಟಡ ಬಹುತೇಕ ಪೂರ್ಣಗೊಂಡಿದ್ದು ಪ್ರಥಮದರ್ಜೆ ಕಾಲೇಜು ಮೇಲಂತಬೆಟ್ಟು, ಪುಂಜಾಲಕಟ್ಟೆ ಪ್ರಥಮದರ್ಜೆ ಕಾಲೇಜಿನ ಕಟ್ಟಡಗಳು ಅತ್ಯಂತ ಸುಂದರವಾಗಿ ನಿರ್ಮಾಣಗೊಂಡಿದೆ. ಕೃಷಿಗೆ ಅನುಕೂಲವಾಗುವಂತೆ ಕಿಂಡಿ ಅಣೆಕಟ್ಟುಗಳು ನಿರ್ಮಾಣವಾಗಿದ್ದು, ತಾಲೂಕು ಬಸ್ ನಿಲ್ದಾಣವು ಅತ್ಯಂತ ಆಕರ್ಷಣಿಯವಾಗಿ ಹೊಸದಾಗಿ ನಿರ್ಮಾಣಗೊಳ್ಳಲಿದೆ. ಒಟ್ಟಾರೆಯಾಗಿ ನವ ಬೆಳ್ತಂಗಡಿಯ ಕನಸನ್ನು ನನಸು ಮಾಡುವುದೇ ನನ್ನ ಪ್ರಥಮ ಆದ್ಯತೆಯಾಗಿದೆ. ಈ ಮೂಲಕ ತಾಲೂಕಿನ ಜನತೆಗೆ ಇನ್ನಷ್ಟು ಮೂಲಭೂತ ಅಭಿವೃದ್ಧಿ ಕಾರ್ಯಗಳನ್ನು ಕಾರ್ಯಗತಗೊಳಿಸಲಾಗುತ್ತಿದೆಎಂದರು.ಬೆಳ್ತಂಗಡಿ ಪಟ್ಟಣ ಪಂಚಾಯತ್ ಉಪಾಧ್ಯಕ್ಷ ಜಯಾನಂದ ಗೌಡ ಮಾತನಾಡಿ, ಹಿಂದೆಂದೂ ಕಾಣದ ರೀತಿಯಲ್ಲಿ ತಾಲೂಕು ಅಭಿವೃದ್ಧಿಗೊಳ್ಳುತ್ತಿದ್ದು, ಜನರ ಬೇಡಿಕೆಗಳನ್ನು ನಿರೀಕ್ಷೆಗಿಂತ ಹೆಚ್ಚಿನ ರೀತಿಯಲ್ಲಿ ಶಾಸಕ ಹರೀಶ್ ಪೂಂಜಾರವರು ಈಡೇರಿಸುತ್ತಿದ್ದಾರೆ. ನಗರಕ್ಕೆ ಗ್ರಂಥಾಲಯ ಹಲವಾರು ವರ್ಷಗಳ ಅಗತ್ಯ ಬೇಡಿಕೆಯಾಗಿ, ಇದೀಗ ರಾಜ್ಯಕ್ಕೆ ಮಾದರಿಯಾಗುವ ರೀತಿಯಲ್ಲಿ 2ಕೋಟಿ ರೂಪಾಯಿ. ಅನುದಾನದಲ್ಲಿ ಗ್ರಂಥಾಲಯ ನಿರ್ಮಾಣವಾಗುತ್ತಿದ್ದು ನಗರದ ಶೋಭೆ ಹೆಚ್ಚಿಸಲಿದೆ. ಕಟ್ಟಡವು ನೆಲಮಹಡಿ 1862.16 ಚದರ ಅಡಿ, ಮೊದಲ ಮಹಡಿ 1862.16ಚದರ ಅಡಿ, ಎರಡನೇ ಮಹಡಿ 1170.43ಚದರ ಅಡಿ, ಹೊರಾಂಗಣ 654.45ಚದರ.ಅಡಿ, ಹೀಗೆ ಒಟ್ಟು 5549.23ಚದರ ಅಡಿ ಹೊಂದಿದ್ದು 200ಮಂದಿಗೆ ಆಸನದ ವ್ಯವಸ್ಥೆ ಕಲ್ಪಿಸಲಾಗುವುದು. ತಾಲೂಕಿನ ವಿದ್ಯಾಥಿಗಳಿಗೆ, ಸಾರ್ವಜನಿಕ ಓದುಗರಿಗೆ ಗ್ರಂಥಾಲಯ ಶ್ರೇಷ್ಠ ಕೊಡುಗೆಯಾಗಲಿದ್ದು, ಪಟ್ಟಣ ಪಂಚಾಯತ್ ಕೂಡ ಇದಕ್ಕೆ ಸಹಕಾರ ನೀಡಲಿದೆ ಎಂದರು.ಕಾರ್ಯಕ್ರಮದಲ್ಲಿ ಪಟ್ಟಣ ಪಂಚಾಯತ್ ಅಧ್ಯಕ್ಷೆ ರಜನಿ ಕುಡ್ವ, ಸ್ಥಾಯಿ ಸಮಿತಿ ಅಧ್ಯಕ್ಷ ಲೋಕೇಶ್ ನಾಯ್ಕ್, ಸದಸ್ಯರಾದ ಶರತ್, ಅಂಬರೀಶ್, ನಾಮನಿರ್ದೇಶನ ಸದಸ್ಯರಾದ ಪ್ರಕಾಶ್, ಲಲಿತಾ, ಕೇಶವ, ಬೆಳ್ತಂಗಡಿ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲ ಸುಕುಮಾರ್, ಮೆಲಂತಬೆಟ್ಟು ಪ್ರಥಮದರ್ಜೆ ಕಾಲೇಜಿನ ಪ್ರಾಂಶುಪಾಲ ಸುಬ್ರಹ್ಮಣ್ಯ, ಪಟ್ಟಣ ಪಂಚಾಯತ್ ಮುಖ್ಯಾಧಿಕಾರಿ ರಾಜೇಶ್ ಕೆ, ಭುಜಬಲಿ ಧರ್ಮಸ್ಥಳ, ವಿಶ್ವನಾಥ ಆರ್. ನಾಯಕ್, ಪ್ರಮೋದ್ ಆರ್. ನಾಯಕ್, ಜಿಲ್ಲಾ ಗ್ರಂಥಾಲಯ ಅಧಿಕಾರಿ ಗಾಯತ್ರಿ, ಉಪಸ್ಥಿತರಿದ್ದರು.ಜಿಲ್ಲಾ ಗ್ರಂಥಾಲಯ ಅಧಿಕಾರಿ ಗಾಯತ್ರಿ ಸ್ವಾಗತಿಸಿ, ಜಿಲ್ಲಾ ಗ್ರಂಥಾಲಯದ ಮೇಲ್ವಿಚಾರಕಿ ಪ್ರಣೀತ ವಂದಿಸಿದರು. ತಾಲೂಕು ಪಂಚಾಯತ್ ಸಂಯೋಜಕ ಜಯಾನಂದ್ ಕಾರ್ಯಕ್ರಮ ನಿರೂಪಿಸಿದರು.

error: Content is protected !!