ವ್ಯಕ್ತಿ ಉನ್ನತ ಮಟ್ಟಕ್ಕೇರಲು ಶಿಕ್ಷಣ ಅತೀ ಮುಖ್ಯ   : ರಕ್ಷಿತ್ ಶಿವರಾಂ ಬೆಸ್ಟ್ ಪೌಂಡೇಷನ್ ವತಿಯಿಂದ ಶಾಲಾ ಮಕ್ಕಳಿಗೆ ಪುಸ್ತಕ ವಿತರಣೆ

 

 

 

ಬೆಳ್ತಂಗಡಿ:ಪ್ರತಿಯೊಬ್ಬ ವ್ಯಕ್ತಿಯೂ ಉನ್ನತ ಮಟ್ಟಕ್ಕೇರಲು ಶಿಕ್ಷಣ ಮುಖ್ಯ. ಶಿಕ್ಷಣದ ವಾಣಿಜ್ಯೀಕರಣದ ನಡುವೆಯೂ ಸರ್ಕಾರಿ ಶಾಲೆಗಳು ಗುಣಮಟ್ಟದ ಶಿಕ್ಷಣದಲ್ಲಿ ಅತ್ಯತ್ತಮ ಸಾಧನೆ ಮಾಡುತ್ತಿರುವುದು ಉತ್ತಮ ಬೆಳವಣಿಗೆ ಎಂದು ಬೆಳ್ತಂಗಡಿ ಬೆಸ್ಟ್ ಫೌಂಡೇಶನ್ ಅಧ್ಯಕ್ಷ , ಹೈಕೋರ್ಟ್ ನ್ಯಾಯವಾದಿ ರಕ್ಷಿತ್ ಶಿವರಾಂ ಹೇಳಿದರು.

 

 

 

ಅವರು ಹಿ.ಪ್ರಾ ಶಾಲೆ ಲಾಯಿಲ ಪಡ್ಲಾಡಿ ಇಲ್ಲಿ ಬೆಸ್ಟ್ ಫೌಂಡೇಶನ್ ವತಿಯಿಂದ ಪುಸ್ತಕ ವಿತರಣೆ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡುತ್ತಿದ್ದರು.

 

 

 

ಬೆಸ್ಟ್ ಫೌಂಡೇಶನ್ ಶಿಕ್ಷಣ, ಕ್ರೀಡೆ , ಕಲೆಗೆ ವಿಶೇಷ ಒತ್ತು ನೀಡುತ್ತಿದ್ದು , ತಾಲೂಕಿನಲ್ಲಿ ಐಎಎಸ್‌ , ಐಪಿಎಸ್ ತರಬೇತಿ , ಯಕ್ಷಗಾನ ತರಬೇತಿ, ಉಚಿತ ಕಬಡ್ಡಿ ಮ್ಯಾಟ್ ನೊಂದಿಗೆ ಗ್ರಾಮೀಣ ಕ್ರೀಡೆಗಳನ್ನು ಪ್ರೋತ್ಸಾಹಿಸುತ್ತಿದೆ ಎಂದ ಅವರು ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಶೈಕ್ಷಣಿಕವಾಗಿ ಪ್ರಥಮ, ದ್ವಿತೀಯ ಸ್ಥಾನದಿಂದ 13 , 20 ಸ್ಥಾನಕ್ಕೆ ಕುಸಿತಗೊಂಡಿರುವುದರ ಬಗ್ಗೆ ಕಳವಳ ವ್ಯಕ್ತಪಡಿಸಿದರು. ಈ ಬಗ್ಗೆ ಮುಂದಿನ ದಿನಗಳಲ್ಲಿ ಸವಾಲನ್ನು ಸ್ವೀಕರಿಸಿ ಮತ್ತೆ ಇತಿಹಾಸ ಮರುಕಳಿಸುವಂತೆ ಮಾಡುವ ಜವಾಬ್ದಾರಿ ನಮ್ಮ ಮೇಲಿದೆ ಎಂದರು. ಲಾಯಿಲ ಗ್ರಾಮದ ಮೂರು ಶಾಲೆಗಳಿಗೂ ಬೆಸ್ಟ್ ಫೌಂಡೇಶನ್ ವತಿಯಿಂದ ಕೈತೋಟ ನಿರ್ಮಾಣ ಮಾಡಿಕೊಡುವುದಾಗಿ ಭರವಸೆ ನೀಡಿದರು.

ಈ ಸಂದರ್ಭದಲ್ಲಿ SSLC ಪರೀಕ್ಷೆಯಲ್ಲಿ 612 ಅಂಕ ಗಳಿಸಿ ಅತ್ಯುತ್ತಮ ಸಾಧನೆ ಮಾಡಿದ ಲಾಯಿಲ ಗ್ರಾಮದ ಕುರುವ ನಿವಾಸಿ ಯಶೋಧರ , ಹೇಮಲತಾ ದಂಪತಿಗಳ ಪುತ್ರ ಯಕ್ಷಿತ್ ಅವರನ್ನು ಸನ್ಮಾನಿಸಲಾಯಿತು.

ಬೆಸ್ಟ್ ಫೌಂಡೇಶನ್ ಸಲಹೆಗಾರ , ಮಾಜಿ ತಾ.ಪಂ ಸದಸ್ಯ ಸುಧಾಕರ್ ಬಿ.ಎಲ್ ಮಾತನಾಡುತ್ತಾ ಮಕ್ಕಳು ಶಿಕ್ಷಣದೊಂದಿಗೆ ಉತ್ತಮ ಗುಣನಡೆತೆಗಳನ್ನು ಅಳವಡಿಸಿಕೊಂಡು ಸತ್ಪ್ರಜೆಗಳಾಗಬೇಕು. ವಿದ್ಯಾರ್ಥಿ ಜೀವನದಲ್ಲಿ ಎಡವದಂತೆ ಎಚ್ಚರಿಕೆ ವಹಿಸಬೇಕು ಎಂದು ಕಿವಿಮಾತು ಹೇಳಿದರು ‌.
ವೇದಿಕೆಯಲ್ಲಿ ಬೆಸ್ಟ್ ಫೌಂಡೇಶನ್ ಗೌರವ ಸಲಹೆಗಾರರಾದ ಸೌಮ್ಯ ಲಾಯಿಲ , ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಸೂರಪ್ಪ ಪಡ್ಲಾಡಿ , ಮುಖ್ಯೋಪಾಧ್ಯಾಯಿನಿ ಶ್ರೀಮತಿ ರಾಜೇಶ್ವರಿ , ಸಾಮಾಜಿಕ ಹೋರಾಟಗಾರ , ಹಳೆ ವಿದ್ಯಾರ್ಥಿ ಶೇಖರ್ ಲಾಯಿಲ ಉಪಸ್ಥಿತರಿದ್ದರು. ಶಿಕ್ಷಕ ಯೋಗೀಶ್ ಕುಮಾರ್ ಸ್ವಾಗತಿಸಿ , ವಂದಿಸಿದರು.

error: Content is protected !!