ಶಾಸಕ ಹರೀಶ್ ಪೂಂಜ ದೊಡ್ಡ ಚೀಲದಲ್ಲಿ ಹಣ ತುಂಬಿಸಿಕೊಂಡು ಕಚೇರಿಗೆ ಬರುತ್ತಾರೆ!”: ಬಿಜೆಪಿ ಕಾರ್ಯಕರ್ತನ ಬಹಿರಂಗ ಹೇಳಿಕೆ ಉಲ್ಲೇಖಿಸಿ ತನಿಖೆಗೆ ಒತ್ತಾಯ: ಶಾಸಕರ ವಿರುದ್ಧ ಎಸಿಬಿ, ಇಡಿಗೆ ಸಾಮಾಜಿಕ ಕಾರ್ಯಕರ್ತರಿಂದ ದೂರು:

 

 

 

ಬೆಳ್ತಂಗಡಿ: ಶಾಸಕ ಹರೀಶ್ ಪೂಂಜ ಅವರು ತನ್ನ ಕಚೇರಿಗೆ ಚೀಲದಲ್ಲಿ ಹಣ ತಂದು ಬರುವವರಿಗೆಲ್ಲ ಹತ್ತು ಸಾವಿರದಿಂದ ಐವತ್ತು ಸಾವಿರದ ವರೆಗೆ ಹಂಚುತ್ತಾರೆ ಎಂದು ಶಾಸಕರ ಸಮ್ಮುಖದಲ್ಲಿ ಅವರ ಬೆಂಬಲಿಗರೊಬ್ಬರು ನೀಡಿರುವ ಹೇಳಿಕೆಯನ್ನು ಆಧಾರವಾಗಿಟ್ಟು ಕಮ್ಯುನಿಸ್ಟ್ ಪಕ್ಷದ ಮುಖಂಡ ಶೇಖರ್ ಲಾಯಿಲ ಅವರು ಎಸಿಬಿ ಹಾಗೂ ಈಡಿಗೆ ದೂರು ನೀಡಿದ್ದಾರೆ‌.

 

 

 

ಮೇ 15ರಂದು ಬಳಂಜ ಗ್ರಾಮದ ಶ್ರೀ ನಾರಾಯಣ ಗುರು ಸಭಾಭವನದಲ್ಲಿ ನಡೆದ ಭಜನಾ ಸ್ಪರ್ಧೆಯ ಸಮಾರೋಪ ಸಮಾರಂಭದಲ್ಲಿ ಶಾಸಕ ಹರೀಶ್ ಪೂಂಜರ ಉಪಸ್ಥಿತಿಯಲ್ಲಿ ಶಾಸಕರ ಸಾಧನೆ ಮತ್ತು ಕಾರ್ಯ ವೈಖರಿಯನ್ನು ಪ್ರತ್ಯಕ್ಷವಾಗಿ ನೋಡಿರುವ ಬಿಜೆಪಿ ಕಾರ್ಯಕರ್ತ ಹರೀಶ್ ವೈ ಚಂದ್ರಮ ಬಳಂಜ ತಮ್ಮ ಭಾಷಣದಲ್ಲಿ ಶಾಸಕರ ಸಾಧನೆಯನ್ನು ವರ್ಣಿಸುತ್ತಾ, ಶಾಸಕರ ಸಮ್ಮುಖದಲ್ಲೇ ತುಳು ಭಾಷೆಯಲ್ಲಿ “ಶಾಸಕ ಹರೀಶ್ ಪೂಂಜರ ಮನೆಗೆ ನಾನು ಹೋಗಿದ್ದೆ, ಪೂಂಜರವರು ಒಳಗೆ ಹೋಗಿ 10,000 ರೂ ಹಣವನ್ನು ಒಂದು ಹೆಂಗಸಿಗೆ ಕೊಟ್ಟರು. ಬಳಂಜದ ಬಾಲಕೃಷ್ಣ ಪೂಜಾರಿ ಅವರು ಹೋಗಿದ್ದರು ಅವರಿಗೂ 10,000 ರೂ. ಕೊಟ್ಟರು. ಪೂಂಜರ ಕಚೇರಿ ಶ್ರಮಿಕಕ್ಕೆ ಹೋಗಿ ಅಲ್ಲಿ ದಿನಾಲೂ ಒಳಗಿನಿಂದ ಚೀಲದಲ್ಲಿ ದೊಡ್ಡ ಮೊತ್ತದ ಹಣವನ್ನು ಪೂಂಜರವರು ತರುತ್ತಾರೆ. ಇದು ಸತ್ಯ, ಸತ್ಯಾಂಶವನ್ನು ನಾನು ಹೇಳುತ್ತಿದ್ದೇನೆ” ಎಂದು ದೂರಿನಲ್ಲಿ ವಿವರಿಸಿರುವ ಶೇಖರ ಲಾಯಿಲ ಅವರು ಇಷ್ಟು ಪ್ರಮಾಣದಲ್ಲಿ ಪ್ರತಿ ದಿನ ಹಣ ಹಂಚಬೇಕಾದರೆ ಅದರ ಹಿಂದೆ ಇರುವ ಹಣದ ಮೂಲದ ಬಗ್ಗೆ ತನಿಖೆ ನಡೆಸಬೇಕು ಕಚೇರಿ ಹಾಗೂ ಮನೆಯಲ್ಲಿ ಕಾನೂನು ಬಾಹಿರವಾಗಿ ಶೇಖರಿಸಿಟ್ಟಿರುವ ಹಣ ಇರುವ ಅನುಮಾನವಿದ್ದು ಇದರ ಬಗ್ಗೆ ಸಮಗ್ರವಾದ ತನಿಖೆ ನಡೆಸುವಂತೆ ಅವರು ಒತ್ತಾಯಿಸಿದ್ದಾರೆ.

error: Content is protected !!