ದೂರನ್ನು ಸವಾಲಾಗಿ ಸ್ವೀಕರಿಸಿ ಶಾಸಕರು ತನಿಖೆ ಎದುರಿಸಲಿ ಚೀಲ ಚಳುವಳಿ ಮೂಲಕ ಹೋರಾಟ ಪತ್ರಿಕಾಗೋಷ್ಠಿಯಲ್ಲಿ ಶೇಖರ್ ಲಾಯಿಲ ಹೇಳಿಕೆ

 

 

ಬೆಳ್ತಂಗಡಿ:ಮೇ 14 ರಂದು ಬೆಳ್ತಂಗಡಿ ತಾಲೂಕಿನ ಬಳೆಂಜ ಗ್ರಾಮದ ಶ್ರೀ ನಾರಾಯಣ ಗುರು ಸಭಾಭವನದಲ್ಲಿ ನಡೆದ ಭಜನಾ ಸ್ಪರ್ಧೆಯ ಸಮರೋಪ ಸಮಾರಂಭದಲ್ಲಿ ಬಿಜೆಪಿ ಕಾರ್ಯಕರ್ತ ಶ್ರೀ ಹರೀಶ್ ವೈ ಚಂದ್ರಮ ಬಳೆಂಜ ರವರು ತಮ್ಮ ಭಾಷಣದಲ್ಲಿ ಶಾಸಕ ಹರೀಶ್ ಪೂಂಜಾರವರ ಮನೆಗೆ ನಾನು ಹೋಗಿದ್ದೆ, ಪೂಂಜಾರವರು ಒಳಗೆ ಹೋಗಿ 10,000 ರೂ ಹಣವನ್ನು ಒಂದು ಹೆಂಗಸಿಗೆ ಕೊಟ್ಟರು. ಬಳೆಂಜದ ಬಾಲಕೃಷ್ಣ ಪೂಜಾರಿ ಅವರು ಹೋದರು ಅವರಿಗೊಂದು 10,000 ರೂ ಹಣವನ್ನು ಕೊಟ್ಟರು. ಇಂದು ಶಾಸಕ ಹರೀಶ್ ಪೂಂಜಾರವರ ಕಛೇರಿ ಶ್ರಮಿಕಕ್ಕೆ ಹೋಗಿ, ಅಲ್ಲಿ ದಿನಾಲು ಚೀಲದಲ್ಲಿ ದೊಡ್ಡ ಮೊತ್ತದ ಹಣವನ್ನು ಪೂಂಜಾರವರು ತರುತ್ತಾರೆ. ಇದು ಸತ್ಯ. ಸತ್ಯಾಂಶವನ್ನು ನಾನು ಹೇಳುತಿದ್ದೇನೆ” ಎಂದು ಹೇಳಿರುತ್ತಾರೆ. ಈ ಬಗ್ಗೆ ಶಾಸಕ ಹರೀಶ್ ಪೂಂಜ ಅವರ ಮನೆ ಮತ್ತು ಕಛೇರಿಯ ಮೇಲೆ ದಾಳಿ ನಡೆಸಿ ತನಿಖೆ ನಡೆಸಬೇಕು ಮತ್ತು ಸದ್ರಿ ಪ್ರಕರಣದಲ್ಲಿ ಪ್ರತ್ಯಕ್ಷ ಸಾಕ್ಷಿ, ಹೇಳಿಕೆದಾರನಾಗಿರುವ ಹರೀಶ್ ವೈ ಚಂದ್ರಮ ಅವರನ್ನು ಪ್ರಕರಣದ ಪ್ರಮುಖ ಸಾಕ್ಷಿದಾರನಾಗಿಸಬೇಕೆಂದು ಈ ಮೂಲಕ ಒತ್ತಾಯಿಸುತ್ತಿದ್ದೇನೆ.ಎಂದು ಸಿ ಪಿ ಐ ಎಂ ಮುಖಂಡ ಶೇಖರ ಲಾಯಿಲ ಹೇಳಿದರು ಅವರು ಮೇ 21 ಅಂಬೇಡ್ಕರ್ ಭವನದಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.ಈಗಾಗಲೇ ಈ ಹೇಳಿಕೆಯ ತುಣುಕು ಇರುವ ಸಿ.ಡಿ ಯನ್ನು ಲಗತ್ತಿಸಿ ಬೆಳ್ತಂಗಡಿ ಪೊಲೀಸ್ ಠಾಣೆಯ ಸಬ್ ಇನ್ಸ್ಪೆಕ್ಟರ್, ವೃತ್ತ ನಿರೀಕ್ಷಕರು, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು, ಭ್ರಷ್ಟಾಚಾರ ನಿಗ್ರಹ ದಳ, ಜಾರಿ ನಿರ್ದೇಶನಾಲಯ ಕ್ಕೆ ದೂರು ನೀಡಿರುತ್ತೇನೆ. ಪ್ರಕರಣದ ಬಗ್ಗೆ ಸಂಬಂಧಿಸಿದ ಇಲಾಖೆಗಳಿಗೆ ದೂರು ನೀಡಿದ ಬಳಿಕ ಶಾಸಕ ಹರೀಶ್ ಪೂಂಜರವರು ಭಯ ಭೀತಿಗೊಂಡು ಪ್ರಕರಣದ ವರದಿ ಮಾಡಿದ ಪತ್ರಕರ್ತರಿಗೆ ಧಮ್ಕಿ ಹಾಕುವುದು ಸೇರಿದಂತೆ, ದೂರುದಾರರನ್ನು ಸಾರ್ವಜನಿಕ ಅಪಮಾನವಾಗುವಂತೆ ಮಾತನಾಡುತ್ತಿರುವುದು ಶಾಸಕರ ಘನತೆಗೆ ತಕ್ಕುದಾದುದ್ದಲ್ಲ. ಇದು ಪ್ರಜಾಪ್ರಭುತ್ವ ವ್ಯವಸ್ಥೆ ಇಲ್ಲಿ ಗೂಂಡಾಗಿರಿ, ಸರ್ವಾಧಿಕಾರ, ಅಧಿಕಾರದ ಮದ ನಡೆಯುವುದಿಲ್ಲ.ರಾಷ್ಟ್ರೀಯ ಸ್ವಯಂ ಸೇವಕ ಸಂಘ (ಆರ್.ಎಸ್.ಎಸ್)ಸಂಸ್ಕಾರ, ಸಂಸ್ಕೃತಿಯನ್ನು ಪ್ರತಿಪಾದಿಸುತ್ತದೆ ಎಂದು ಬೊಬ್ಬಿಡುವ ಶಾಸಕರು ಸಂಸ್ಕೃತಿ, ಸಂಸ್ಕಾರ ಹೀನರಂತೆ ವರ್ತಿಸುವುದು ಸರಿಯಲ್ಲ. ಶಾಸಕರಿಗೆ ತಾಕತ್ತಿದ್ದರೆ ದೂರನ್ನು ಸವಾಲಾಗಿ ಸ್ವೀಕರಿಸಿ ತನಿಖೆ ಎದುರಿಸಲಿ.ಅದು ಬಿಟ್ಟು ಗೂಂಡಾಗಿರಿ ಮಾಡಿದರೆ ಅದನ್ನು ಎದುರಿಸಲು ಗೊತ್ತಿದೆ.
ಶಾಸಕ ಹರೀಶ್ ಪೂಂಜ ಅವರ ಶ್ರಮಿಕ ಕಛೇರಿ ಹಾಗೂ ಮನೆಯಲ್ಲಿ ನಗದು ರೂಪದ ಹಣವನ್ನು ಶೇಖರಣೆ ಮಾಡಿಕೊಂಡಿರುವುದು ಕಾನೂನು ಬಾಹಿರ. ಈ ಬಗ್ಗೆ ಭ್ರಷ್ಟಾಚಾರ ನಿಗ್ರಹ ಕಾಯಿದೆ ಮತ್ತು ಪ್ರಿವೆನ್ಷನ್ ಆಫ್ ಮನಿ ಲಾಂಡ್ರಿಂಗ್ ಆಕ್ಟ್ 2002 ಕಾಯ್ದೆಯ ಸೆಕ್ಷನ್ 3 ರಡಿ ಅಪರಾಧವಾಗುತ್ತದೆ. ಶಾಸಕರಲ್ಲಿ ಆದಾಯಕ್ಕೆ ಮೀರಿದ ಹಣವಿದ್ದು, ಆ ಹಣದ ಮೂಲ ಬಹಿರಂಗವಾಗಬೇಕು. ಜೊತೆಗೆ ಸಾರ್ವಜನಿಕವಾಗಿ ಪ್ರತ್ಯಕ್ಷದರ್ಶಿಯಾಗಿ ಹೇಳಿಕೆ ಕೊಟ್ಟಿರುವ ಹರೀಶ್ ವೈ ಚಂದ್ರಮ ಅವರನ್ನು ಈ ಪ್ರಕರಣದ ಪ್ರತ್ಯಕ್ಷ ಸಾಕ್ಷಿ ಹಾಗೂ ಹೇಳಿಕೆದಾರನಾಗಿ ಪಿಎಂಎಲ್ ಎ 2002 ರ ಕಲಂ 3 ರ ಪ್ರಕಾರ ಪರಿಗಣಿಸಿ ವಿಚಾರಣೆ ನಡೆಸಬೇಕೆಂದು ಒತ್ತಾಯಿಸುತ್ತೇನೆ. ನಾನು ಈ ಪ್ರಕರಣವನ್ನು ಸಾರ್ವಜನಿಕ ಹಿತದೃಷ್ಟಿಯಿಂದ ಪರಿಗಣಿಸಿ ಉನ್ನತ ಮಟ್ಟದ ತನಿಖೆಗೆ ಆಗ್ರಹಿಸಿದ್ದು ಇಲಾಖೆ ತಕ್ಷಣ ಕಾನೂನು ಕ್ರಮ ಕೈಗೊಳ್ಳಬೇಕು ತಪ್ಪಿದ್ದಲ್ಲಿ ಈ ಬಗ್ಗೆ ಹೈಕೊರ್ಟ್ ಮೆಟ್ಟಿಲೇರಬೇಕಾದ ಅನಿವಾರ್ಯತೆ ಇದೆ. ಈ ಹೋರಾಟದ ಮುಂದಿನ ಅಂಗವಾಗಿ ಚೀಲ ಚಳವಳಿ ಆಂದೋಲನ ಕೈಗೆತ್ತಿಕೊಳ್ಳಲಾಗುವುದು ಎಂದು ಅವರು ಹೇಳಿದರು.

error: Content is protected !!