ಬಿಸಿಯೂಟ ನೌಕರರನ್ನು ಕೈಬಿಡುವ ರಾಜ್ಯ ಸರ್ಕಾರದ ತಿರ್ಮಾನವನ್ನು ಶಾಸಕ ಹರೀಶ್ ಪೂಂಜ ವಿರೋಧಿಸಲಿ ಸಿಐಟಿಯು ರಾಜ್ಯ ಉಪಾಧ್ಯಕ್ಷ ವಸಂತ ಆಚಾರಿ ಸವಾಲು ವಿವಿಧ ಬೇಡಿಕೆ ಈಡೇರಿಸಲು ಒತ್ತಾಯಿಸಿ ಶಾಸಕರ ಕಛೇರಿ ಚಲೋ ಕಾರ್ಯಕ್ರಮ.

 

 

 

 

ಬೆಳ್ತಂಗಡಿ:ಎರಡು ವರ್ಷಗಳ ಕಾಲ ಶಾಸಕರಾದರೆ ಸಾಯುವ ತನಕ ಪಿಂಚಣಿ ನೀಡುವ ಸರ್ಕಾರಗಳು 19 ವರ್ಷಗಳಿಂದ ಸತತವಾಗಿ ಬಿಸಿಯೂಟ ಯೋಜನೆಯಲ್ಲಿ ದುಡಿಯುತ್ತಿರುವ ನೌಕರರಿಗೆ ಪಿಂಚಣಿ ನೀಡದೆ ವಂಚಿಸುತ್ತಿದೆ. ಮಹಿಳೆಯರನ್ನು ಮಾತೆ , ದೇವತೆ ಎಂದೇಳುವ ಬಿಜೆಪಿ ಸರ್ಕಾರ ಈ ರೀತಿಯಲ್ಲಿ ಮಹಿಳೆಯರನ್ನು ವಂಚಿಸುವುದು ಯಾವ ನ್ಯಾಯ ಎಂದು ಸಿಐಟಿಯು ಕರ್ನಾಟಕ ರಾಜ್ಯ ಉಪಾಧ್ಯಕ್ಷ ವಸಂತ ಆಚಾರಿ ಪ್ರಶ್ನಿಸಿದ್ದಾರೆ.

ಅವರು ಅಕ್ಷರ ದಾಸೋಹ ನೌಕರರ ಸಂಘ (ಸಿಐಟಿಯು) ಬೆಳ್ತಂಗಡಿ ತಾಲೂಕು ಸಮಿತಿ ನೇತೃತ್ವದಲ್ಲಿ 60 ವರ್ಷ ಪೂರೈಸಿದ ಅಕ್ಷರ ದಾಸೋಹ ನೌಕರರಿಗೆ ಪಿಂಚಣಿ , ಎಪ್ರಿಲ್, ಮೇ ತಿಂಗಳ ವೇತನ , ವಯೋಮಿತಿ ಹೆಸರಿನಲ್ಲಿ ನೌಕರರ ವಜಾ ಸೇರಿದಂತೆ ಇನ್ನಿತರ ಪ್ರಮುಖ ಬೇಡಿಕೆಗಳನ್ನು ಈಡೇರಿಸಲು ಒತ್ತಾಯಿಸಿ ಶಾಸಕರ ಕಛೇರಿ ಚಲೋ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು.

 

ಕೇಂದ್ರದ ನರೇಂದ್ರ ಮೋದಿ ಸರ್ಕಾರ ಅಕ್ಷರ ದಾಸೋಹ ಯೋಜನೆಯ ಅನುದಾನವನ್ನು ಕಡಿತ ಮಾಡಿದರೆ , ರಾಜ್ಯ ಸರ್ಕಾರ ವಯೋಮಿತಿ ಹೆಸರಿನಲ್ಲಿ ನೌಕರರನ್ನು ಸೇವೆಯಿಂದ ವಜಾ ಮಾಡುವ ಮೂಲಕ ಬಡ ಮಕ್ಕಳ ಅನ್ನದ ಜೊತೆಗೆ ಚೆಲ್ಲಾಟವಾಡುತ್ತಿದೆ ಎಂದು ಆರೋಪಿಸಿದ ಅವರು ಶಾಸಕ ಹರೀಶ್ ಪೂಂಜಾ ಅವರಿಗೆ ನಿಜವಾಗಿಯೂ ಮಹಿಳೆಯರ ಬಗ್ಗೆ ಕಾಳಜಿ ಇದ್ದರೆ ಬಿಸಿಯೂಟ ನೌಕರರನ್ನು ಕೈಬಿಡುವ ರಾಜ್ಯ ಸರ್ಕಾರದ ತೀರ್ಮಾನವನ್ನು ವಿರೋಧಿಸಲಿ ಎಂದು ಸವಾಲು ಹಾಕಿದರು.

 

 

ಸಿಐಟಿಯು ತಾಲೂಕು ಅಧ್ಯಕ್ಷ , ನ್ಯಾಯವಾದಿ ಶಿವಕುಮಾರ್ ಎಸ್. ಎಂ ಮಾತನಾಡಿ ಅಂತರರಾಷ್ಟ್ರೀಯ ಕಾರ್ಮಿಕ ಕಾನೂನುಗಳು ಸೇರಿದಂತೆ ದೇಶದ ಸುಪ್ರೀಂ ಕೋರ್ಟ್ ನ ಹಲವಾರು ತೀರ್ಪಿನ ವಿರುದ್ಧ ಬಿಸಿಯೂಟ ನೌಕರರನ್ನು ಅತ್ಯಲ್ಪ ಗೌರವಧನ ಹೆಸರಿನಲ್ಲಿ ದುಡಿಸಲಾಗುತ್ತಿದೆ. ಕಾರ್ಮಿಕ ಕಾನೂನುಗಳನ್ನು ಗಾಳಿಗೆ ತೂರಿ ಯಾವುದೇ ಸವಲತ್ತುಗಳನ್ನು ನೀಡದೆ ಕೇವಲ ಗೌರವಧನ ನೀಡುವುದು ಯಾವ ಸೀಮೆಯ ಅಚ್ಛೇ ದಿನ್ ಎಂದು ಪ್ರಶ್ನಿಸಿದರು.

ಅಕ್ಷರ ದಾಸೋಹ ನೌಕರರ ಸಂಘ (ಸಿಐಟಿಯು) ಅಧ್ಯಕ್ಷೆ ಲಲಿತಾ ಮದ್ದಡ್ಕ ಅವರು ಮಾತನಾಡಿ ಸೇವಾ ಮನೋಭಾವದಿಂದ , ನಿಷ್ಠೆಯಿಂದ ದುಡಿಯುತ್ತಿರುವ ಅಕ್ಷರ ದಾಸೋಹ ನೌಕರರನ್ನು ಖಾಯಂಗೊಳಿಸಿ , ಅವರ ಬದುಕಿಗೆ ಉತ್ತಮ ವ್ಯವಸ್ಥೆ ಮಾಡಬೇಕಾದ ಕೇಂದ್ರ, ರಾಜ್ಯ ಸರ್ಕಾರಗಳು ಮಹಿಳಾ ನೌಕರರ ಜೀವನದಲ್ಲಿ ಚೆಲ್ಲಾಟವಾಡುತ್ತಿದೆ. ನಿರಂತರವಾಗಿ ಒಂದೊಂದು ಕಾನೂನಿನ ಹೆಸರಿನಲ್ಲಿ ತುಳಿಯಲು ನಾವು ಕಾಲ್ಚೆಂಡು ಅಲ್ಲ ಎಂಬುದನ್ನು ಅರ್ಥ ಮಾಡಿಕೊಂಡರೆ ಉತ್ತಮ. ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಉಗ್ರ ಸ್ವರೂಪದ ಹೋರಾಟ ನಡೆಸಬೇಕಾದೀತು ಎಂದು ಎಚ್ಚರಿಕೆ ನೀಡಿದರು.

ಸಿಐಟಿಯು ತಾಲೂಕು ಪ್ರಧಾನ ಕಾರ್ಯದರ್ಶಿ ವಸಂತ ನಡ ಮಾತನಾಡಿ ಧನ್ಯವಾದವಿತ್ತರು.

ಪ್ರತಿಭಟನೆಯ ನೇತೃತ್ವವನ್ನು ಸಿಐಟಿಯು ಉಪಾಧ್ಯಕ್ಷೆ ಸುಕನ್ಯಾ ಹರಿದಾಸ್ , ಅಕ್ಷರ ದಾಸೋಹ ನೌಕರರ ಸಂಘದ ಮುಖಂಡರಾದ ವನಿತಾ ಮರೋಡಿ , ಹೇಮಾವತಿ ತುರ್ಕಳಿಕೆ , ಶಶಿಕಲಾ ಬಳೆಂಜ , ಯಶೋಧ ಮಡಂತ್ಯಾರ್ , ಸಂಪದ ಮಡಂತ್ಯಾರ್ , ಸುಶೀಲಾ ಕಾರಿಂಜ , ತಿಮ್ಮಕ್ಕ ಪೆರಿಯಡ್ಕ ಮೊದಲಾದವರು ಉಪಸ್ಥಿತರಿದ್ದರು.

error: Content is protected !!