ಸಾವಿರಾರು ಕಾರ್ಯಕರ್ತರ ಬೆವರು ಪುಷ್ಪಗಳಾಗಿ ಪರಿವರ್ತನೆಗೊಂಡು ಪರಿಮಳ ಸೂಸುತ್ತಿದೆ ಬದುಕು ಕಟ್ಟೋಣ ತಂಡದ ಆತ್ಮವಿಶ್ವಾಸ ತುಂಬುವ ಕಾರ್ಯ ಅದ್ಭುತ: ಚಕ್ರವರ್ತಿ ಸೂಲಿಬೆಲೆ ಕೊಳಂಬೆ 12 ಮನೆಗಳ ಗೃಹ ಪ್ರವೇಶ ಕಾರ್ಯಕ್ರಮ

 

 

 

ಬೆಳ್ತಂಗಡಿ: ಬದುಕು ಕಟ್ಟೋಣ ಬನ್ನಿ ತಂಡ ಕೊಳಂಬೆಯಲ್ಲಿ ಮಾಡಿರುವ ಕಾರ್ಯ ದೇಶದಲ್ಲೇ‌ ವಿನೂತನವಾದದ್ದು. ಇದು ಪ್ರಧಾನಿ ಮೋದೀಜಿಯವರು ತಮ್ಮ ಮನ್ ಕೀ ಬಾತ್‌ನಲ್ಲಿ ಇದನ್ನು ಉಲ್ಲೇಖಿಸುವಂತಾಗಬೇಕು ಎಂದು ಯುವ ಬ್ರಿಗೇಡ್ ಸಂಸ್ಥಾಪಕ ಚಕ್ರವರ್ತಿ ಸೂಲಿಬೆಲೆ ಹೇಳಿದರು ಅವರು ಪ್ರವಾಹ ಪೀಡಿತ ಬೆಳ್ತಂಗಡಿ ತಾಲೂಕಿನ ಚಾರ್ಮಾಡಿ ಗ್ರಾಮದ ಕೊಳಂಬೆ ಪರಿಸರದಲ್ಲಿ ಬದುಕು ಕಟ್ಟೋಣ ಬನ್ನಿ ತಂಡದಿಂದ ಪುನರ್ ನಿರ್ಮಾಣಗೊಂಡ 12 ಮನೆಗಳ ಗೃಹ ಪ್ರವೇಶ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು

 

 

ಸಾವಿರಾರು ಕಾರ್ಯಕರ್ತರ ಶ್ರಮದ ಬೆವರು ಇಂದು ಪುಷ್ಪಗಳಾಗಿ ಪರಿವರ್ತಿತವಾಗಿ ಪರಿಮಳ ಸೂಸುತ್ತಿದೆ. ರಾಜೇಶ್ ಪೈ ಮತ್ತು ಮೋಹನ್ ಕುಮಾರ್ ಎಂಬಿಬ್ಬರು ಮಿತ್ರರು ಜೊತೆ ಸೇರಿ ಮಾಡಿದ ಈ ಆತ್ಮವಿಶ್ವಾಸ ತುಂಬುವ ಕಾರ್ಯ ಅದ್ಭುತ. ಸ್ವಂತ ಉದ್ಯಮ ಮತ್ತು‌ ಬದುಕಿಗಿಂತ ಸಮಾಜದ ನೋವಿಗೆ ಈ‌ರೀತಿ‌ ಸ್ಪಂದಿಸಿದಾಗ ಅದರಿಂದ ಸಿಗುವ ಆನಂದ ವರ್ಣಿಸಲು ಅಸಾಧ್ಯ. ಬದುಕು ಕಟ್ಟೋಣ ಈ‌ ತಂಡದ ಸೇವಾ ಕಾರ್ಯ‌ ಸಾಂಕ್ರಾಮಿಕದಂತೆ ನಾಡಿನುದ್ದಗಲ ಹಬ್ಬಲಿ. ಇಂತಹಾ ವಿಕೋಪಗಳು ಬಂದಾಗ ಅದನ್ನು ಮೀರಿ‌ ನಿಂತು ಮರು ನಿರ್ಮಾಣ ಮಾಡುವ ತಾಕತ್ತು ನಮ್ಮಲ್ಲಿದೆ ಎಂಬುದನ್ನು ಇಲ್ಲಿ ನಿರೂಪಿಸಲಾಗಿದೆ. ಅದಕ್ಕೆ ಪೂರಕವಾಗಿ ಕೆಲಸ ಮಾಡುವ ಹರೀಶ್ ಪೂಂಜ ರಂತಹಾ ಶಾಸಕರು ಇದ್ದಾರೆ ಎಂಬುದೇ ಹೆಮ್ಮೆಯ ಸಂಗತಿ. ಇಂತಹಾ ಶಾಸಕರು ಎಲ್ಲ‌ಕಡೆ ಇದ್ದಾಗ ಮೋದೀಜಿಯವರ ಭಾರತದ ಪರಿಕಲ್ಪನೆ ಈಡೇರುವುದರಲ್ಲಿ‌ ಸಂದೇಹವಿಲ್ಲ ಎಂದರು.

 

 

 

ಸಮಾರಂಭದ ಅಧ್ಯಕ್ಷತೆಯನ್ನು ಶಾಸಕ ಹರೀಶ್ ಪೂಂಜಾ ವಹಿಸಿದ್ದರು. ಆರ್‌ಎಸ್‌ಎಸ್ ನಮಗೆ ನೀಡಿದ‌ ಚಿಂತನೆಯಂತೆ ಸ್ವಂತಕ್ಕೆ ಸ್ವಲ್ಪ ಸಮಾಜಕ್ಕೆ ಸರ್ವಸ್ವ ಎಂಬ ತತ್ವದಡಿ ರಾಜೇಶ್ ಪೈ ಮತ್ತು ಮೋಹನ್ ಕುಮಾರ್ ಅವರು ಜೋಡೆತ್ತುಗಳಾಗಿ ಇಲ್ಲಿ ಇಡೀ ದೇಶ- ಜಗತ್ತಿಗೆ ಪ್ರೇರಣೆಯಾಗುವ ರೀತಿಯಲ್ಲಿ ಕೆಲಸ ಮಾಡಿದ್ದಾರೆ. ಗೋವು ಮತ್ತು ಕೃಷಿಯನ್ನು ಆಧರಿಸಿ ನಮ್ಮ ಬದುಕು ಮುನ್ನಡೆಯುವ ಚಿಂತನೆ ಎಲ್ಲರ ಮನದಲ್ಲಿ ಮೂಡಿದರೆ ಮಾತ್ರ ಪರಿವರ್ತನೆ ಸಾಧ್ಯ. ಅದಕ್ಕೆ ಪ್ರೇರಣೆ ನೀಡಲು ಸೂಲಿಬೆಲೆ ಅವರನ್ನು ಇಲ್ಲಿ ಕರೆಸಿದ್ದೇವೆ. ಈ ತಾಲೂಕಿನ ಸಮಗ್ರ ಅಭಿವೃದ್ಧಿಗೆ ನೆರೆಯೂ ಒಂದು ಕಾರಣವಾಗಿದೆ. ನೆರೆ ಸಂದರ್ಭ ರಾಜ್ಯ‌ ತಿರುಗಾಡಿದ ಮುಖ್ಯ ಮಂತ್ರಿ‌ ಯಡಿಯೂರಪ್ಪ ಅವರು ಕುಕ್ಕಾವಿಗೆ ಬಂದಿದ್ದಾಗ ಇಡೀ ರಾಜ್ಯಕ್ಕೆ ಅನ್ವಯವಾಗುವಂತೆ ನೆರೆಯಲ್ಲಿ‌‌‌ ಮನೆ ಕಳೆದುಕೊಂಡಿರುವವರಿಗೆ 5 ಲಕ್ಷ ರೂ. ಪರಿಹಾರ ಕೊಡುವುದಾಗಿ ಘೋಷಿಸಿದ್ದರು. ಆ ಮೊತ್ತ ಇಲ್ಲಿನ ಫಲಾನುಭವಿಗಳಿಗೂ ಬಂದಿದೆ‌. ಅವರು ನಮ್ಮ ತಾಲೂಕಿಗೆ 500 ರಿಂದ 600 ಕೋಟಿ ರೂ. ಹೆಚ್ಚುವರಿಯಾಗಿ ಅನುದಾನ ಒದಗಿಸಿಕೊಟ್ಟಿದ್ದಾರೆ.

 

 

ದಾನಿಗಳ ತಂಡ ಕಟ್ಟಿದ ಕಾಳಜಿ‌ ರಿಲೀಫ್ ಫಂಡ್ ಕೊಟ್ಟ ಏಕೈಕ ತಾಲೂಕು ಬೆಳ್ತಂಗಡಿ. ಕೊಳಂಬೆಯವರು ತಮ್ಮ‌ಮನೆಗಳಲ್ಲಿ‌ದೇವರಿಗೆ ದೀಪ‌ ಇಡುವಾಗ ದಿನಾಲೂ ರಾಜೇಶ್ ಪೈ ಮತ್ತು ಮೋಹನ್ ಕುಮಾರ್ ಸಹೋದರರಿಗೆ ಪ್ರಾರ್ಥನೆ ಸಲ್ಲಿಸಬೇಕು. ಆಗ ಅವರಿಗೆ ಇನ್ನಷ್ಟು ಸೇವಾ ಮನೋಶಕ್ತಿ ಬಂದು ಆ ಮೂಲಕ ತಾಲೂಕಿಗೇ ಶಕ್ತಿ‌ ದೊರೆಯುತ್ತದೆ ಎಂದರು. ಈ‌ ಇಬ್ಬರೂ ಸಹೋದರರು ಮಾಡಿದ ಸೇವೆಗಾಗಿ ಇಡೀ ತಾಲೂಕಿನ ಜನತೆಯ ಪರವಾಗಿ ನಾನು ಅವರನ್ನು ಅಭಿನಂದಿಸುತ್ತೇನೆ ಎಂದರು. ಅತಿಥಿಗಳಾಗಿದ್ದ ಆರ್‌ಎಸ್‌ಎಸ್ ದಕ್ಷಿಣ ಪ್ರಾಂತ ಸೇವಾ ಪ್ರಮುಖ್ ಸುಬ್ರಾಯ ನಂದೋಡಿ ಶುಭಕೋರಿದರು.

 

ಸಮಾರಂಭದಲ್ಲಿ ವಿಧಾನ ಪರಿಷತ್ ಶಾಸಕ ಕೆ ಪ್ರತಾಪ್‌ಸಿಂಹ ನಾಯಕ್‌, ರೋಟರಿ ಕ್ಲಬ್ ಅಧ್ಯಕ್ಷ ಶರತ್ ಕೃಷ್ಣ ಪಡುವೆಟ್ನಾಯ,ಉದ್ಯಮಿ ತುಳು ಸಂಘ ಬರೋಡ ಅಧ್ಯಕ್ಷ  ಶಶಿಧರ ಶೆಟ್ಟಿ ನವಶಕ್ತಿ ಗುರುವಾಯನಕೆರೆ, ಚಾರ್ಮಾಡಿ ಗ್ರಾ.ಪ‌ಂ ಅಧ್ಯಕ್ಷ ಕೆ.ವಿ ಪ್ರಸಾದ್, ಮುಂಡಾಜೆ ಗ್ರಾ.ಪಂ ಅಧ್ಯಕ್ಷೆ ರಂಜಿನಿ ಮತ್ತು ನೆರಿಯ ಗ್ರಾ.ಪಂ ಅಧ್ಯಕ್ಷೆ ವಸಂತಿ ಭಾಗಿಯಾಗಿದ್ದರು.

 

ಪ್ರಾಸ್ತಾವಿಕ ವಾಗಿ ಮಾತನಾಡಿದ ಬದುಕು ಕಟ್ಟೋಣ ತಂಡದ ಸಂಚಾಲಕ ಮೋಹನ್ ಕುಮಾರ್ ಮಾತನಾಡಿ, ಸೇವೆಗಾಗಿ ಆರಂಭಿಸಿದಾಗ ನಮಗೆ ಅನೇಕ ಟೀಕೆಗಳು ಎದುರಾದವು. ಆದರೆ ಅದೆಲ್ಲವನ್ನೂ ಮೆಟ್ಟಿ ನಿಂತು ಇಲ್ಲಿನ ಕುಟುಂಬಗಳ ಬದುಕು ಕಟ್ಟುವಲ್ಲಿ ನಮ್ಮದೇ ಆದ ಸೇವೆ ನೀಡಿದ್ದೇವೆ. ಇದಕ್ಕಾಗಿ ನಮ್ಮ ಜೊತೆ ಕೈ ಜೋಡಿಸಿದ ಶಾಸಕರು, ಸಂಘ ಸಂಸ್ಥೆಯವರು ಹಾಗೂ ದಾನಿಗಳು, ಜೊತೆಗೆ ಸಾವಿರಾರು ಸ್ವಯಂಸೇವಕರು ಅಭಿನಂದನಾರ್ಹರು ಎಂದರು.

ಸನ್ಮಾನ;

ಕೊಳಂಬೆ ಮರು ನಿರ್ಮಾಣದಲ್ಲಿ ಸಹಕರಿಯಾದ ಡಿ.ಎಂ.ಸಿ ಕಂಸ್ಟ್ರಕ್ಷನ್ಸ್ ವಿಭಾಗದ ಇಂಜಿನಿಯರ್ ಯಶೋಧರ ಪೂಜಾರಿ, ಸಿವಿಲ್ ಗುತ್ತಿಗೆದಾರ ಅಂಬರೀಶ್ ಬೆಳ್ತಂಗಡಿ, ಮೇಸ್ತ್ರಿ ಗಣೇಶ್ ಕುಲಾಲ್, ಪೈಂಟರ್ ಪ್ರತೀಕ್ ನಾಯ್ಕ ಇವರನ್ನು ಸನ್ಮಾನಿಸಲಾಯಿತು.

ಬದುಕು ಕಟ್ಟೋಣ ತಂಡದಿಂದ ಸೂಲಿಬೆಲೆ ಮತ್ತು ಶಾಸಕರನ್ನು ಗೌರವಿಸಲಾಯಿತು. ಕೊಳಂಬೆ ನಾಗರಿಕರ ಪರವಾಗಿ ಶಾಸಕ ಹರೀಶ್ ಪೂಂಜ, ಬದುಕು ಕಟ್ಟೋಣ ಬನ್ನಿ ತಂಡದ ಮುಖ್ಯಸ್ಥರಾದ ರಾಜೇಶ್ ಪೈ ಮತ್ತು ಮೋಹನ್ ಕುಮಾರ್ ಅವರನ್ನು ಸನ್ಮಾನಿಸಲಾಯಿತು. ಅಲ್ಲದೆ ಶಶಿಧರ ಕಲ್ಮಂಜ, ‌ಶ್ರೀಧರ ಮರಕಡ, ತಿಮ್ಮಪ್ಪ ನಾಯ್ಕ, ಶ್ರೀಧರ ಕಲ್ಮಂಜ ಮತ್ತು ರಾಘವೇಂದ್ರ ಕಲ್ಮಂಜ ಅವರನ್ನು ಗುರುತಿಸಲಾಯಿತು.

ಚಾರ್ಮಾಡಿ ಗ್ರಾ.ಪಂ ಪಿಡಿಒ ಪ್ರಕಾಶ್ ಶೆಟ್ಟಿ ನೊಚ್ಚ ಸ್ವಾಗತಿಸಿದರು. ಸಿರಿ ಗ್ರಾಮೋದ್ಯೋಗ ಸಂಸ್ಥೆಯ ಎಂಡಿ ಜನಾರ್ದನ ಅವರು ಹೆಗ್ಗಡೆಯವರ ಸಂದೇಶ ವಾಚಿಸಿದರು.

ಬದುಕು ಕಟ್ಟೋಣ ಬನ್ನಿ ತಂಡದ ಇನ್ನೋರ್ವ ಸಂಚಾಲಕ ರಾಜೇಶ್ ಪೈ ವಂದನಾರ್ಪಣೆಗೈದರು. ಸ್ಮಿತೇಶ್ ಎಸ್ ಬಾರ್ಯ, ತಿಮ್ಮಯ್ಯ ನಾಯ್ಕ ಕಾರ್ಯಕ್ರಮ ನಿರೂಪಿಸಿದರು.

error: Content is protected !!