ಮೇ 08 ರಂದು ಕೊಳಂಬೆಯಲ್ಲಿ 12 ಮನೆಗಳ ಗೃಹಪ್ರವೇಶೋತ್ಸವ ಬದುಕು ಕಟ್ಟೋಣ ಬನ್ನಿ ತಂಡದ ವತಿಯಿಂದ ನಿರ್ಮಾಣ

 

 

 

ಬೆಳ್ತಂಗಡಿ: ಚಾರ್ಮಾಡಿ ಗ್ರಾಮದ ಕೊಳಂಬೆ ನೆರೆಪೀಡಿತ ಪ್ರದೇಶದಲ್ಲಿ ಬದುಕು ಕಟ್ಟೋಣ ಬನ್ನಿ ತಂಡದ ಮೂಲಕ ನಿರ್ಮಿಸಿದ 12 ಮನೆಗಳ ಗೃಹಪ್ರವೇಶೋತ್ಸವ ಧರ್ಮಸ್ಥಳ ಧರ್ಮಾಧಿಕಾರಿ ಡಾ.ಡಿ ವೀರೇಂದ್ರ ಹೆಗ್ಗಡೆಯವರು ಮತ್ತು ಹೇಮಾವತಿ ವಿ ಹೆಗ್ಗಡೆಯವರ ಪರಿಕಲ್ಪನೆಯಲ್ಲಿ ಮತ್ತು ಶಾಸಕ ಹರೀಶ್ ಪೂಂಜ ಅವರ ಮಾರ್ಗದರ್ಶನದಲ್ಲಿ ಮೇ.8 ರಂದು ಹಮ್ಮಿಕೊಳ್ಳಲಾಗಿದೆ ಎಂದು ಬದುಕು ಕಟ್ಟೋಣ ತಂಡದ ಸಂಚಾಲಕ ಮೋಹನ್ ಕುಮಾರ್ ಹೇಳಿದರು.

ಅವರು  ಉಜಿರೆಯ ದಿಶಾ ಹೊಟೇಲ್ ನಲ್ಲಿ ಎ.30 ರಂದು  ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ  ಕಾರ್ಯಕ್ರಮದ  ಬಗ್ಗೆ ಮಾಹಿತಿ ನೀಡಿದರು.

2019 ರಲ್ಲಿ ಕೊಳಂಬೆ ಪ್ರದೇಶದಲ್ಲಿ ನೆರೆ ಬಂದ ಸಂದರ್ಭದಲ್ಲಿ ಮರು ಉಪಯೋಗಕ್ಕೂ ಕಷ್ಟ ಸಾಧ್ಯವೆಂಬಂತ್ತಿತ್ತು ಆದರೆ ಇದೀಗ  ಅದ್ಭುತವಾದ ಪರಿವರ್ತನೆಯಾಗಿದೆ. ಈ ಮನೆಗಳ ಉದ್ಘಾಟನೆಯನ್ನು ಯುವ ಬ್ರಿಗೇಡ್ ಸಂಸ್ಥಾಪಕ ಚಕ್ರವರ್ತಿ ಸೂಲಿಬೆಲೆ ನೆರವೇರಿಸಲಿದ್ದು, ಅಧ್ಯಕ್ಷತೆಯನ್ನು ಶಾಸಕ ಹರೀಶ್ ಪೂಂಜ ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ವಿಧಾನ ಪರಿಷತ್ ಶಾಸಕ ಕೆ ಪ್ರತಾಪಸಿಂಹ ನಾಯಕ್, ರೋಟರಿ ಕ್ಲಬ್ ಅಧ್ಯಕ್ಷ ಶರತ್‌ಕೃಷ್ಣ ಪಡುವೆಟ್ನಾಯ, ಆರ್‌ಎಸ್ಎಸ್ ದಕ್ಷಿಣ ಪ್ರಾಂತ ಸೇವಾ ಪ್ರಮುಖ್ ಸುಬ್ರಾಯ ನಂದೋಡಿ, ಬರೋಡದ ಖ್ಯಾತ ಉದ್ಯಮಿ ಶಶಿಧರ ಶೆಟ್ಟಿ, ತುಳು ರಂಗ ಭೂಮಿಯ ಕಲಾವಿದ ಅರವಿಂದ ಬೋಳಾರ್, ಚಾರ್ಮಾಡಿ ಗ್ರಾ.ಪಂ ಪಿಡಿಒ ಪ್ರಕಾಶ್ ಶೆಟ್ಟಿ ನೊಚ್ಚ, ಪಂ.ಅಧ್ಯಕ್ಷ ಕೆ.ವಿ ಪ್ರಸಾದ್, ಮುಂಡಾಜೆ ಗ್ರಾ.ಪಂ ಅಧ್ಯಕ್ಷೆ ರಂಜಿನಿ, ನೆರಿಯ ಗ್ರಾ.ಪಂ ಅಧ್ಯಕ್ಷೆ ವಸಂತಿ ಇವರುಗಳು ಭಾಗಿಯಾಗಲಿದ್ದಾರೆ.

2019 ರ ವರಮಹಾಲಕ್ಷ್ಮೀ ದಿವಸದಂದು ನೆರೆ ಬಂದಿದ್ದಾಗ ನಾನು ಮತ್ತು ಉದ್ಯಮಿಯಾಗಿರುವ ನನ್ನ ಮಿತ್ರ ರಾಜೇಶ್ ಪೈ ಅವರು ಎಲ್ಲರಂತೆ ಘಟನಾ ಸ್ಥಳ ವೀಕ್ಷಣೆಗೆ ಹೋಗಿದ್ದೆವು. ಹೊರಡುವಾಗ ನಮ್ಮ ಮನದಲ್ಲಿ ಅಲ್ಲಿನ ಸಂಕಷ್ಟ ಪೀಡಿತರಿಗೆ ತಲಾ 50 ಕೆ.ಜಿ ಅಕ್ಕಿ ಕೊಡಬೇಕೆಂದು ಮನಸಲ್ಲಿ ಅಂದುಕೊಂಡು ಹೋಗಿದ್ದೆವು. ಆದರೆ ನಾವು ಅಲ್ಲಿ ಹೋಗಿ ನೋಡುವಾಗ ಅಲ್ಲಿನ ಪರಿಸ್ಥಿತಿ ಅಯೋಮಯವಾಗಿತ್ತು. ಕೆಸರು ತುಂಬಿದ ಅಲ್ಲಿನ ಭೂಮಿಯಲ್ಲಿದ ಒಂದು ಹೆಜ್ಜೆ ತೆಗೆದು ಇನ್ನೊಂದು ಹೆಜ್ಜೆ ಇಡಲು ಜಾಗ ಇರಲಿಲ್ಲ. ಕೆಲವರ ವಾಸದ ಮನೆ ಕುಸಿದುಹೋಗಿದ್ದರೆ ಇನ್ನೂ ಕೆಲವು ಭಾಗಶಃ ಹಾನಿಯಾಗಿದ್ದವು. ಉಳಿದ ಕೆಲವು ಮನೆಗಳು, ಕುಡಿಯುವ ನೀರಿನ ಬಾವಿ ಸಂಪೂರ್ಣ ಕೆಸರುಮಯವಾಗಿ ಬದುಕೇ ಅಸಾಧ್ಯ ಎಂಬಂತಿತ್ತು. ಅಲ್ಲಿನ ಜನ ನಾವು ಇಲ್ಲಿ ಇನ್ನು ವಾಸಿಸುದಿಲ್ಲ. ನಮಗೆ ಐದು ಸೆಂಟ್ಸ್ ಭೂಮಿ ಎಲ್ಲಾದರೂ ತೆಗೆಸಿಕೊಡಿ ಎಂದು ಗೋಗರೆದಿದ್ದರೆ. ಅದನ್ನೆಲ್ಲ ನೋಡಿ ಅಂದೇ ಆ ಪ್ರದೇಶಕ್ಕೆ ಏನಾದರೊಂದು ಸೇವೆ ಮಾಡಬೇಕೆಂದು ಸಂಕಲ್ಪಿಸಿ ಹೆಜ್ಜೆ ಇಟ್ಟವರು ಎರಡೂವರೆ ವರ್ಷದಲ್ಲಿ ಇಂದು ಈ ಮಟ್ಟಕ್ಕೆ ಅವರ ಬದುಕನ್ನು ಕಟ್ಟಿಕೊಡಲು ಶ್ರಮಿಸಿದ್ದೇವೆ.ಆರಂಭದಲ್ಲಿ ನಮಗೆ ಅನೇಕ ಟೀಕೆಗಳು ಎದುರಾಗಿದ್ದವು. ಉದ್ಯಮಿಗಳಾದ ಅವರು ಮರಳು ವ್ಯಾಪಾರದ ದುರುದ್ದೇಶದಿಂದ ಬಂದಿರಬಹುದು ಎಂದು ಕೆಲವರು ಮಾತನಾಡಿಕೊಂಡರೂ ನಾವು ಎದೆಗುಂದದೆ ನಮ್ಮ ಗುರಿಯೆಡೆಗೆ ಲಕ್ಷ್ಯವಿಟ್ಟು ಕೆಲಸ ಮಾಡಿದ್ದರಿಂದ ಇಂದು ನಮ್ಮಿಂದ ಈ ಮಹತ್ ಸಾಧನೆ ಸಾಧ್ಯವಾಯಿತು, ಅಪಸ್ವರ ಬಂದರೂ ಎದೆಗುಂದದೆ ಮಾಡಿದ ನಮ್ಮ ಕೆಲಸದಿಂದ ನಮಗೇ ತೃಪ್ತಿಯಾಗಿದೆ ಎಂದು ಮೋಹನ್ ಕುಮಾರ್ ತಿಳಿಸಿದರು.

ಕೊಳಂಬೆಯಲ್ಲಿ ಸ್ವ ಆಸಕ್ತರ ತಂಡದಿಂದ ನಿರಂತರ ಶ್ರಮಾದಾನದ ಮೂಲಕ ಇಂದು ಪ್ರಗತಿ ಸಾಧ್ಯವಾಗಿದೆ. ಸಂಘ ಸಂಸ್ಥೆಗಳ ಸಹಕಾರದಲ್ಲಿ ಶ್ರಮಾದಾನ ನಡೆದಿದೆ.  ನೆರೆಯಿಂದಾಗಿ ಕಳೆದುಕೊಂಡ ಕೃಷಿಯನ್ನೂ ಮರುಸ್ಥಾಪಿಸಿದ್ದೇವೆ. ಬದುಕಿನ ದಾರಿಯಾಗಿ ಗೋವುಗನ್ನು ದಾನ ನೀಡಿದ್ದೇವೆ ಎಂದು ನೆನಪಿಸಿಕೊಂಡರು.ಧರ್ಮಸ್ಥಳ ದ ಹರ್ಷೇಂದ್ರ ಕುಮಾರ್ ಅವರು ಡಿಎಂಸಿ ಮೂಲಕ ಅಭಿಯಂತರರನ್ನು ಕಳಿಸಿಕೊಟ್ಟು ಎಲ್ಲ ಸಹಕಾರ ನೀಡಿದ್ದಾರೆ. ಸರಕಾರದ 5 ಲಕ್ಷ ರೂ. ಅನುದಾನ, ಶಾಸಕರ ಶ್ರಮಿಕ ಕಾಳಜಿ ಪಂಡ್ 1 ಲಕ್ಷ ರೂ., ಫಲಾನುಭವಿಗಳ ಸಹಭಾಗಿತ್ವ ದ 2.50 ಲಕ್ಷ ರೂ.ಗಳು ಉಳಿದಂತೆ ವಸ್ತುರೂಪದಲ್ಲಿ ಬಂದ ಸಾಮಾಗ್ರಿಗಳನ್ನು ಉಪಯೋಗಿಸಿ 13.50 ಲಕ್ಷ ರೂ.ಮೊತ್ತದಲ್ಲಿ 12 ಮನೆಗಳು ನಿರ್ಮಾಣವಾಗಿದೆ ಎಂದರು.ಮೇ.8 ರಂದು ಬದುಕು ಕಟ್ಟೋಣ ಬನ್ನಿ ತಂಡದಿಂದ ಪುನರ್ ನಿರ್ಮಾಣಗೊಂಡ 12 ಮನೆಗಳ ಗೃಹಪ್ರವೇಶ ಕಾರ್ಯಕ್ರಮವನ್ನು  ಸಂಘಟಿಸಿದ್ದೇವೆ. ಮನೆ ಹಸ್ತಾಂತರದ ಬಳಿಕವೂ ಮುಂದಿನ ಒಂದು ವರ್ಷ ನಾವು ಅವರ ಜೊತೆ ಇರುತ್ತೇವೆ. ಅಲ್ಲಿ ಕಿರುಸೇತುವೆ ಹಾಗೂ ಕಾಂಕ್ರೀಟ್ ರಸ್ತೆ ಆವಶ್ಯಕತೆ ಇದ್ದು ಶಾಸಕರ ಬಳಿ ಕೇಳಿಕೊಳ್ಳಲಿದ್ದೇವೆ ಎಂದು ವಿವರ ನೀಡಿದರು.

ಮಾಧ್ಯಮದ ಸಹಕಾರದಿಂದ ಜನ ಶ್ರಮಾದಾನಕ್ಕೆ ಬರುವಂತಾಯಿತು. ಬರೋಡದ ಉದ್ಯಮಿ ಶಶಿಧರ ಶೆಟ್ಟಿ ಮತ್ತು ರಾಜೇಶ್ ಶೆಟ್ಟಿ ಅವರೂ ನೆರವು ನೀಡಿದ್ದಾರೆ. ರೋಟರಿ ಸಂಸ್ಥೆಯಿಂದ ಎಲ್ಲಾ ಮನೆಗಳ ವಿದ್ಯುತ್ ಸಂಪರ್ಕ ವ್ಯವಸ್ಥೆ ಮಾಡಿಕೊಟ್ಟಿದ್ದಾರೆ. ಹೀಗೆ ಎಲ್ಲರ ಸಹಕಾರ ಪಡೆದು ನಿರಂತರ ಹೋರಾಟದಿಂದ ಮರುನಿರ್ಮಾಣ ಸಾಧ್ಯವಾಗಿದೆ ಎಂದರು.

ಪತ್ರಿಕಾಗೋಷ್ಠಿಯಲ್ಲಿ ಬದುಕು ಕಟ್ಟೋಣ ಬನ್ನಿ ತಂಡದ ಮತ್ತೋರ್ವ ಸಂಚಾಲಕ ರಾಜೇಶ್ ಪೈ, ಸುರಕ್ಷಾ ಮೆಡಿಕಲ್‌ನ ಶ್ರೀಧರ ಕೆ.ವಿ, ಕಲ್ಮಂಜ ಗ್ರಾ.ಪಂ ಅಧ್ಯಕ್ಷ ಶ್ರೀಧರ ಮಡಿವಾಳ ಉಪಸ್ಥಿತರಿದ್ದರು.

error: Content is protected !!